ADVERTISEMENT

ಇಪಿಎಫ್‌ ತೆರಿಗೆ ವಿವಾದ

​ಕೇಶವ ಜಿ.ಝಿಂಗಾಡೆ
Published 8 ಮಾರ್ಚ್ 2016, 19:30 IST
Last Updated 8 ಮಾರ್ಚ್ 2016, 19:30 IST
ಇಪಿಎಫ್‌ ತೆರಿಗೆ ವಿವಾದ
ಇಪಿಎಫ್‌ ತೆರಿಗೆ ವಿವಾದ   

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಮೇಲೆ ತೆರಿಗೆ ವಿಧಿಸುವ ಬಜೆಟ್‌ ಪ್ರಸ್ತಾವಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಬಜೆಟ್‌ ಮಂಡನೆ ನಂತರ  ಹಣಕಾಸು ಸಚಿವಾಲಯ ನೀಡಿರುವ ಹೇಳಿಕೆಗಳಲ್ಲಿ ಸ್ಪಷ್ಟನೆ ಇಲ್ಲದಿರುವುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಕೇಶವ ಜಿ. ಝಿಂಗಾಡೆ ಅವರು ಇಲ್ಲಿ ವಿವರಿಸಿದ್ದಾರೆ.

ಲಕ್ಷಾಂತರ ವೇತನದಾರರಿಗೆ ಅನ್ವಯಿಸುವ, ಉದ್ಯೋಗಿಗಳ ಭವಿಷ್ಯ ನಿಧಿಯ (ಇಪಿಎಫ್‌) ಹಣ ಹಿಂದೆ ಪಡೆಯುವುದರ ಮೇಲೆ ತೆರಿಗೆ ವಿಧಿಸುವ  2016–17ನೆ ಸಾಲಿನ ಬಜೆಟ್‌ ಪ್ರಸ್ತಾವ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಜೆಟ್‌ ಪ್ರಸ್ತಾವಗಳು ಜಾರಿಗೆ ಬಂದರೆ ಅದರಿಂದ ನಿವೃತ್ತರ ಕೈಗೆ ಕಡಿಮೆ ಹಣ ಸಿಗಲಿದೆ. ಖಾಸಗಿ ವಲಯದ ದುಡಿಯುವ ವರ್ಗದ ಕಠಿಣ ಪರಿಶ್ರಮದ ಉಳಿತಾಯದ ಮೇಲೆ ತೆರಿಗೆ ವಿಧಿಸುವುದಕ್ಕೆ ಕಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸರ್ಕಾರಿ ನೌಕರರಂತೆ, ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ  ಖಾತರಿ ಪಿಂಚಣಿ ಮತ್ತು ಆರೋಗ್ಯ ರಕ್ಷಣೆಯ ಸೌಲಭ್ಯಕ್ಕೆ ಒಳಪಟ್ಟಿಲ್ಲ. ‘ಇಪಿಎಸ್‌’ನಲ್ಲಿ ಮಾಸಿಕ ಪಿಂಚಣಿಯು ₹ 4,000 ದಾಟದ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಹೀಗಾಗಿ ವೇತನ ವರ್ಗದವರು ನಿವೃತ್ತಿ ನಂತರದ ತಮ್ಮೆಲ್ಲ ಅಗತ್ಯಗಳಿಗೆಲ್ಲ ‘ಇಪಿಎಫ್‌’ ಮೊತ್ತವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಹೀಗಾಗಿ ಈ ತೆರಿಗೆ ಪ್ರಸ್ತಾಪವು ಭವಿಷ್ಯ ನಿಧಿಯಲ್ಲಿನ ಉದ್ಯೋಗಿಗಳ  ಉಳಿತಾಯವನ್ನು ಗಮನಾರ್ಹ ಪ್ರಮಾಣದಲ್ಲಿ ನುಂಗಿ ಹಾಕಲಿದೆ. ನಿವೃತ್ತಿ ಹೊತ್ತಿನಲ್ಲಿ ಕೈಗೆ  ಕಡಿಮೆ ಹಣ ಸಿಗಲಿದೆ ಎನ್ನುವ ಆತಂಕ ಅವರಲ್ಲಿ ಮನೆ ಮಾಡಿದೆ. ಬಜೆಟ್‌ ಪ್ರಸ್ತಾವದ ಪ್ರಕಾರ, ಏಪ್ರಿಲ್‌ ನಂತರ ಈ ನಿಯಮ ಜಾರಿಗೆ ಬಂದರೆ, ಸದ್ಯಕ್ಕೆ ತಮ್ಮ ವೃತ್ತಿ ಬದುಕಿನ ಮಧ್ಯಭಾಗದಲ್ಲಿ ಇರುವವರು ಭವಿಷ್ಯ ನಿಧಿಯಲ್ಲಿ ಶೇ 8ರಿಂದ ಶೇ 12ರಷ್ಟು ಮೊತ್ತಕ್ಕೆ ಎರವಾಗಲಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರಿದವರು ವೃತ್ತಿ ಬದುಕಿನ ಕೊನೆಯಲ್ಲಿ  ಶೇ 18ರಷ್ಟು ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ವೇತನದಾರರು ನಿರಂತರವಾಗಿ ತೆರಿಗೆ ಹೊರೆಗೆ ಒಳಗಾಗುತ್ತಲೇ ಇದ್ದಾರೆ. ಪ್ರತಿಯೊಂದು ಸರ್ಕಾರವು ಈ ಪ್ರಾಮಾಣಿಕ ತೆರಿಗೆದಾರರಿಂದ ಅವಕಾಶ ಸಿಕ್ಕಲ್ಲೆಲ್ಲ ಹಣ ವಸೂಲಿ ಮಾಡುವ ಮಾರ್ಗೋಪಾಯಗಳನ್ನು ಹುಡುಕುತ್ತಲೇ ಬಂದಿವೆ.  ಈಗ ‘ಇಪಿಎಫ್‌’ ಮೇಲಿನ ತೆರಿಗೆ ಪ್ರಸ್ತಾವವು ವೇತನ ವರ್ಗಕ್ಕೆ ದುಪ್ಪಟ್ಟು ತೆರಿಗೆಯಾಗಿ ಪರಿಣಮಿಸಲಿದೆ.

ಉದ್ಯೋಗಿಗಳಲ್ಲಿ ‘ಇಪಿಎಸ್‌’ನ ಆಕರ್ಷಣೆ ತಗ್ಗಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆಯತ್ತ (ಎನ್‌ಪಿಎಸ್‌) ಗಮನ ಹರಿಸಬೇಕು ಎನ್ನುವುದೂ ಸರ್ಕಾರದ ಆಲೋಚನೆ ಆಗಿರುವಂತಿದೆ. ವೇತನದಾರರನ್ನು ‘ಎನ್‌ಪಿಎಸ್‌’ನತ್ತ ಬಲವಂತವಾಗಿ ವಾಲುವಂತೆ ಮಾಡುವ ಬದಲು, ‘ಇಪಿಎಸ್‌’ ಅನ್ನೇ ಬದಲಿಸಬಹುದು ಎನ್ನುವ ವಾದವೂ ಕೇಳಿ ಬರುತ್ತಿದೆ.

ಬಜೆಟ್‌ ಪ್ರಸ್ತಾವಕ್ಕೂ ಮುಂಚೆಯೇ ‘ಇಪಿಎಫ್‌’ ವಿವಾದಕ್ಕೆ ಚಾಲನೆ ಸಿಕ್ಕಿತ್ತು. ಈ ಹಿಂದೆ, ಯಾವುದೇ ವ್ಯಕ್ತಿ ಹಿಂದಿನ ಕೆಲಸ ತ್ಯಜಿಸಿ ಎರಡು ತಿಂಗಳ ಕಾಲ ನಿರುದ್ಯೋಗಿಯಾಗಿದ್ದರೆ ‘ಇಪಿಎಫ್‌’ನಲ್ಲಿನ ತನ್ನ ಮತ್ತು ಮಾಲೀಕರ ಕೊಡುಗೆ ಸೇರಿದಂತೆ ಸಂಪೂರ್ಣ ಹಣವನ್ನು ವಾಪಸ್‌ ಪಡೆಯಬಹುದಾಗಿತ್ತು. ಪ್ರತಿ ಬಾರಿ ಕೆಲಸ ಬದಲಿಸಿದಾಗಲೂ  ‘ಪಿಎಫ್‌’ ಹಣ ಹಿಂದೆ ಪಡೆಯಬಹುದಾಗಿತ್ತು.

ಹೊಸ ನಿಯಮದ ಪ್ರಕಾರ, ವ್ಯಕ್ತಿಯು ನಿವೃತ್ತಿಯಾಗುವ ಮುಂಚೆ ತನ್ನ ಕೊಡುಗೆ ಮತ್ತು ಅದರ ಮೇಲಿನ ಬಡ್ಡಿ ಹಣವನ್ನು ಮಾತ್ರ ವಾಪಸ್‌ ಪಡೆಯಬಹುದು. ನಿಧಿಗೆ ಮಾಲೀಕರು ನೀಡಿದ ಕೊಡುಗೆಯ ಮೊತ್ತವನ್ನು 58 ವರ್ಷಗಳು ಪೂರ್ಣಗೊಳ್ಳುವವರೆಗೆ ವಾಪಸ್‌ ಪಡೆಯುವಂತಿಲ್ಲ ಎನ್ನುವ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಕ್ಕೂ ದುಡಿಯುವ ವರ್ಗದಿಂದ ವಿರೋಧ ಕಂಡು ಬಂದಿದೆ.

ಶೇ 60ರಷ್ಟು ಮೊತ್ತದ ಮೇಲೆ ತೆರಿಗೆ ವಿಧಿಸುವ ಬಜೆಟ್‌ ಪ್ರಸ್ತಾವವು ವ್ಯಕ್ತಿಯು ಆದಾಯ ತೆರಿಗೆಯ ಯಾವ ಹಂತಕ್ಕೆ ಒಳಪಟ್ಟಿರುತ್ತಾನೆ ಎನ್ನುವುದನ್ನೂ ಆಧರಿಸಿರುತ್ತದೆ. ಈ ಮೊತ್ತವು ಒಂದು ವೇಳೆ ಗರಿಷ್ಠ ಮೊತ್ತದ ತೆರಿಗೆ ದರವಾದ ಶೇ 30ರ ವ್ಯಾಪ್ತಿಗೆ ಒಳಪಟ್ಟರೆ ಒಟ್ಟಾರೆ ಭವಿಷ್ಯ ನಿಧಿ ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ಅನ್ವಯವಾಗಲಿದೆ.  ಶೇ 60ರ ಮೊತ್ತದ ಬಡ್ಡಿ ಮೇಲೆ ಮಾತ್ರ ತೆರಿಗೆ ಅನ್ವಯಿಸಿದರೆ ಅದರ ಹೊರೆ ಕಡಿಮೆ ಇರಲಿದೆ.

ಸುಧಾರಣೆ ಉದ್ದೇಶ
ಈ ತೆರಿಗೆ ಸುಧಾರಣೆ ಉದ್ದೇಶದ ಬಗ್ಗೆ ಸರ್ಕಾರ ವಿವರಣೆ ನೀಡಿದ್ದರೂ, ಅದು ಕಾರ್ಮಿಕ ವರ್ಗಕ್ಕೆ ಸಮಾಧಾನ ನೀಡಿಲ್ಲ.  ನಿವೃತ್ತಿ ನಂತರ  ಖಾಸಗಿ ವಲಯದ ಉದ್ಯೋಗಿಗಳು, ಭವಿಷ್ಯ ನಿಧಿಯ ಹಣವನ್ನೆಲ್ಲ ಹಿಂದೆ ಪಡೆದು ಖರ್ಚು ಮಾಡುವ ಬದಲಿಗೆ, ‘ಪಿಂಚಣಿ ಸುರಕ್ಷತೆ’ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಈ ಉದ್ದೇಶ ಸಾಧನೆಗೆ ನಿವೃತ್ತಿ ಸಂದರ್ಭದಲ್ಲಿ ಭವಿಷ್ಯ ನಿಧಿಯಲ್ಲಿನ ಶೇ 40ರಷ್ಟು ಹಣ ವಾಪಸ್‌ ಪಡೆಯಲು ತೆರಿಗೆ ವಿನಾಯ್ತಿ ನೀಡಲಾಗುವುದು.  ಉಳಿದ ಶೇ 60ರಷ್ಟು ಮೊತ್ತವನ್ನು ವರ್ಷಾಶನ ನಿಧಿಗಳಲ್ಲಿ ತೊಡಗಿಸಿ, ನಿಯಮಿತವಾಗಿ ಪಿಂಚಣಿ ಪಡೆಯಬೇಕು. ಹೀಗೆ ಮಾಡಿದರೆ ಈ ಮೊತ್ತವು ತೆರಿಗೆಯಿಂದ ಮುಕ್ತವಾಗಿರುತ್ತದೆ. ಅಂದರೆ ಅಲ್ಲಿಗೆ ಭವಿಷ್ಯ ನಿಧಿಯ ಇಡೀ ಮೊತ್ತ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ.

ವರ್ಷಾಶನ ಯೋಜನೆಯಲ್ಲಿ ಹಣ ತೊಡಗಿಸಿದ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಮೂಲ ಹಣವು ಆತನ ಉತ್ತರಾಧಿಕಾರಿಗಳ ಕೈ ಸೇರಲಿದೆ. ಆ ಮೊತ್ತವೂ ತೆರಿಗೆ ವ್ಯಾಪ್ತಿಗೆ ಒಳಪಡಲಾರದು. ಪ್ರತಿ ತಿಂಗಳು ₹ 15 ಸಾವಿರದಷ್ಟು ಶಾಸನಬದ್ಧ ವೇತನ ಮಿತಿ ಹೊಂದಿದ ಉದ್ಯೋಗಿಗಳಿಗೆ ನೆರವಾಗಲೆಂದೇ ‘ಇಪಿಎಫ್‌’ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ  ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಕೊಡುಗೆ ನೀಡುತ್ತಿರುವ 3.7 ಕೋಟಿ ಸದಸ್ಯರ ಪೈಕಿ, 3 ಕೋಟಿ ಚಂದಾದಾರರು ಈ ವಿಭಾಗದಲ್ಲಿ ಬರುತ್ತಾರೆ. ಇವರಿಗಾಗಿ ತೆರಿಗೆ ಹೊರೆ ಇರುವುದಿಲ್ಲ ಎಂಬುದು ಸರ್ಕಾರದ ತರ್ಕವಾಗಿದೆ.

60 ಲಕ್ಷ ಚಂದಾದಾರರು ‘ಇಪಿಎಫ್‌’ ಅನ್ನು ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡಿದ್ದಾರೆ. ಇವರೆಲ್ಲ ಖಾಸಗಿ ವಲಯದ ಗರಿಷ್ಠ ವೇತನ ಪಡೆಯುವ ವರ್ಗಕ್ಕೆ ಸೇರಿದ್ದಾರೆ. ಇವರು ಹಣ ಹಿಂದೆ ಪಡೆಯುವ ಮೊತ್ತಕ್ಕೆ ಸದ್ಯಕ್ಕೆ ಯಾವುದೇ ತೆರಿಗೆ ಹೊರೆ ಇರುವುದಿಲ್ಲ.  ಈ ವ್ಯವಸ್ಥೆಯನ್ನು ಈಗ ಬದಲಾಯಿಸಲಾಗುತ್ತಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.

ಹಣಕಾಸು ಮಸೂದೆ 2016ರ ಪ್ರಕಾರ, ಇನ್ನು ಮುಂದೆ ಮಾಲೀಕರ ಕೊಡುಗೆಗೆ ( ಹಣಕಾಸಿನ ಮಿತಿ) ವಾರ್ಷಿಕ ₹ 1.5 ಲಕ್ಷ ಮೀರದಂತೆ ನಿರ್ಬಂಧ ವಿಧಿಸಲು ಉದ್ದೇಶಿಸಲಾಗಿದೆ. ನಿಧಿಯ ಶೇ 60ರಷ್ಟನ್ನು ಪಿಂಚಣಿ ಯೋಜನೆಗಳಲ್ಲಿ ತೊಡಗಿಸದಿದ್ದರೆ ಅದರ ಮೇಲೆ ತೆರಿಗೆ ವಿಧಿಸುವ ಬದಲಿಗೆ, ನಿಧಿಗೆ ಸೇರ್ಪಡೆಯಾಗುವ ಬಡ್ಡಿ ಮೇಲೆ ತೆರಿಗೆ ವಿಧಿಸಬಹುದು. ಜತೆಗೆ, ನಿಧಿಗೆ ಮಾಲೀಕರ ಕೊಡುಗೆ ಮೇಲೆ ಯಾವುದೇ ಮಿತಿ ವಿಧಿಸಬಾರದು  ಎಂದೂ ಕೆಲವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ತಿಂಗಳಿಗೆ ₹ 15 ಸಾವಿರಕ್ಕಿಂತ ಹೆಚ್ಚಿನ ವೇತನ ಪಡೆಯುವರೆಲ್ಲರೂ ಗರಿಷ್ಠ ವೇತನ ಪಡೆಯುತ್ತಾರೆ ಎನ್ನುವ ನಿರ್ಣಯಕ್ಕೆ ಬರುವುದೂ ಸರಿಯಲ್ಲ ಎನ್ನುವುದೂ ನಿಜ. ‘ಇಪಿಎಫ್‌’ ನಿಯಮಗಳ ಅನುಸಾರ ಇದೊಂದು ಸ್ವಯಂ ನಿರ್ಧಾರವಾಗಿರದೆ ಒತ್ತಾಯದ ಉಳಿತಾಯ ಆಗಿದೆ. ಹೊಸ ಸಂಪತ್ತಿನ ಮೇಲೆ ತೆರಿಗೆ ವಿಧಿಸಬಹುದಾಗಿದ್ದು, ಭವಿಷ್ಯ ನಿಧಿಯು ಉದ್ಯೋಗಿಯ ಹೊಸ ಆದಾಯವಾಗಿರುವುದಿಲ್ಲ ಎನ್ನುವುದು ಕಾರ್ಮಿಕ ಸಂಘಟನೆ ಮುಖಂಡರವಾದವಾಗಿದೆ.

ರಾಜಕೀಯ, ಸಾಮಾಜಿಕ ಮತ್ತು ಕಾರ್ಮಿಕ ಸಂಘಟನೆಗಳಿಂದ ವ್ಯಕ್ತವಾಗುತ್ತಿರುವ ತೀವ್ರ ಸ್ವರೂಪದ ಆಕ್ಷೇಪ, ಪ್ರತಿಭಟನೆ ಕಾರಣಕ್ಕೆ, ವಿವಾದಾತ್ಮಕ ಬಜೆಟ್‌ ಪ್ರಸ್ತಾವ ಪರಾಮರ್ಶೆ ಮಾಡುವ ಬಗ್ಗೆ  ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.  ಅವರು ಸಂಸತ್‌ನಲ್ಲಿ ಹೇಳಿಕೆ ನೀಡುವವರೆಗೆ ಈ ಗೊಂದಲಕ್ಕೆ ತೆರೆ ಬೀಳುವುದಿಲ್ಲ. ಸಚಿವರ ಸ್ಪಷ್ಟನೆ ದುಡಿಯುವ ವರ್ಗಕ್ಕೆ ತೃಪ್ತಿಯಾಗುವುದೊ ಇಲ್ಲವೋ ಎನ್ನುವುದು ಕೂಡ ಸದ್ಯಕ್ಕೆ ಅನುಮಾನಾಸ್ಪದವಾಗಿದೆ.

ಇಪಿಎಫ್‌ ಕಾಯ್ದೆ
2014ರಲ್ಲಿ ಸರ್ಕಾರವು ಇಪಿಎಫ್‌ ಕಾಯ್ದೆಯಲ್ಲಿ ವ್ಯಾಪಕ ಬದಲಾವಣೆ ಮಾಡಿದೆ. 20ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುವ ಉದ್ದಿಮೆ ಮತ್ತು  ಸಂಸ್ಥೆಗಳಲ್ಲಿ ಪ್ರತಿ ತಿಂಗಳು ₹ 15 ಸಾವಿರ ವೇತನ ಪಡೆಯುವವರು ‘ಇಪಿಎಫ್‌’ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಇದಕ್ಕೂ ಮೊದಲು ಮಾಸಿಕ ₹ 6,500  ವೇತನ ಪಡೆಯುವವರು ‘ಪಿಎಫ್‌’ ವ್ಯಾಪ್ತಿಗೆ ಬರುತ್ತಿದ್ದರು.

ಕಾನೂನಿನ ಪ್ರಕಾರ, ಉದ್ಯೋಗಿಯ ವೇತನದ ಶೇ 12 ರಷ್ಟು ಮೊತ್ತವನ್ನು ‘ಪಿಎಫ್‌’ಗೆ ಸೇರಿಸಲಾಗುವುದು. ಮಾಲೀಕರ ಕೊಡುಗೆಯ ಶೇ 12ರಲ್ಲಿ  ಶೇ 8.33 ರಷ್ಟು ಮೊತ್ತವನ್ನು ಉದ್ಯೋಗಿಯ ಪಿಂಚಣಿ ಯೋಜನೆಗೆ (ಇಪಿಎಸ್‌) ಮತ್ತು ಉಳಿದ ಮೊತ್ತವನ್ನು ಪಿಎಫ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT