ADVERTISEMENT

ಓಲಾ, ಉಬರ್ ಬೈಕ್‌ ಟ್ಯಾಕ್ಸಿ ಸ್ಥಗಿತ

ಸೋಮವಾರದಿಂದಲೇ ಸೇವೆ ಹಿಂದೆ ಪಡೆದ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ  ಮತ್ತು ಉಬರ್‌, ಇತ್ತೀಚೆಗೆ ನಗರದಲ್ಲಿ ಆರಂಭಿಸಿದ್ದ ತಮ್ಮ  ಬೈಕ್‌ ಟ್ಯಾಕ್ಸಿ ಸೇವೆಯನ್ನು ಸೋಮವಾರದಿಂದ (ಮಾರ್ಚ್‌ 14) ಸ್ಥಗಿತಗೊಳಿಸಿವೆ.

ಈ ಸಂಸ್ಥೆಗಳು ಪರವಾನಗಿ ಪಡೆಯದೆ ಕಾನೂನುಬಾಹಿರವಾಗಿ ಸೇವೆ ಆರಂಭಿಸಿವೆ ಎಂದಿದ್ದ ಸಾರಿಗೆ ಇಲಾಖೆ,  ಎರಡೂ ಸಂಸ್ಥೆಗಳ ಸುಮಾರು 70 ಬೈಕ್‌ಗಳನ್ನು ಸ್ಮಾರ್ಟ್‌ಫೋನ್‌ಗಳ ಸಮೇತ ಜಪ್ತಿ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿತ್ತು.

‘ನಿಯಮದ ಪ್ರಕಾರ, ಹಳದಿ ಬಣ್ಣದ ಬೋರ್ಡ್ ಇರುವ ವಾಹನಗಳು ಮಾತ್ರ ಟ್ಯಾಕ್ಸಿ ಸೇವೆ ಒದಗಿಸಬೇಕು. ಆದರೆ ಈ ಸಂಸ್ಥೆಗಳು ಬಿಳಿ ಬಣ್ಣದ ಬೋರ್ಡ್‌ನ ಬೈಕ್‌ಗಳಲ್ಲಿ ನಿಯಮಬಾಹಿರವಾಗಿ  ಸೇವೆ ಆರಂಭಿಸಿದ್ದವು’ ಎಂದು ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್‌  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆ ನಡೆಸಿದ  ಕಾರ್ಯಾಚರಣೆಯಿಂದಾಗಿ ಸಂಸ್ಥೆಗಳಿಗೆ ತಮ್ಮ ತಪ್ಪಿನ ಅರಿವಾಗಿದೆ. ಹಾಗಾಗಿ ಬೈಕ್‌ ಟ್ಯಾಕ್ಸಿ ಸೇವೆನಿಲ್ಲಿಸಿವೆ’ ಎಂದು ಅವರು ಹೇಳಿದರು.

ಹೊಸ ಕಲ್ಪನೆ ಇದು: ‘ರಾಜ್ಯದ ಕೆಲವೆಡೆ ಬೈಕ್‌ ಬಾಡಿಗೆ ನೀಡುವ ವ್ಯವಸ್ಥೆ ಇದೆ. ಬೈಕ್‌ ಟ್ಯಾಕ್ಸಿ ಎಂಬುದು ರಾಜ್ಯದ ಮಟ್ಟಿಗೆ ಹೊಸ ಕಲ್ಪನೆ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಯಾವುದೇ ಸಂಸ್ಥೆ ಟ್ಯಾಕ್ಸಿ ಸೇವೆ ಆರಂಭಿಸಬೇಕಾದರೆ ಆಯಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಈ ರೀತಿ ಬರುವ ಅರ್ಜಿಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.