ADVERTISEMENT

ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಕೆ
ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ತಯಾರಿಕೆ   

ಬೆಂಗಳೂರು: ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಹಾಳೆ ಬಳಸಿ ತಯಾರಿಸಿದ ಇಡ್ಲಿ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

100 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣತೆಯಲ್ಲಿ ಇಡ್ಲಿಯನ್ನು ಬೇಯಿಸಲಾಗುತ್ತದೆ. ಇದರಿಂದ ಪ್ಲಾಸ್ಟಿಕ್‌ ಹಾಳೆ ಕರಗಿ ಆಹಾರದೊಂದಿಗೆ ಬೆರೆತು ಮನುಷ್ಯನ ದೇಹ ಸೇರುತ್ತದೆ. ಇದು ಹಲವು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಆಹಾರಗಳಿಂದ ದೂರವಿರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ಕರಗಿದ ಪ್ಲಾಸ್ಟಿಕ್‌ನಿಂದ ಹೊರಬರುವ ಬೈಫೀನೈಲ್ ಕಳೆದ ಶತಮಾನದಲ್ಲೇ ಅತ್ಯಧಿಕವಾಗಿ ಸಂಶೋಧನೆಗೆ ಒಳಗಾದ ರಾಸಾಯನಿಕವಾಗಿದೆ. ಈ ಬೈಫೀನೈಲ್ ಹಾರ್ಮೋನ್‌ಗಳ ಕಾರ್ಯವೈಖರಿಯನ್ನೇ ಬದಲಾಯಿಸಿಬಿಡುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರು, ಜನನಾಂಗ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್, ಬಂಜೆತನ, ಗರ್ಭಪಾತ, ಬೊಜ್ಜು, ಸಕ್ಕರೆ ಕಾಯಿಲೆ, ಅಲರ್ಜಿ, ನರಸಂಬಂಧಿ ನ್ಯೂನತೆಗಳು ಕಂಡುಬರುತ್ತವೆ’ ಎಂದು ಖಾಸಗಿ ಸಂಸ್ಥೆಯೊಂದರ ಜೀವ ರಸಾಯನ ತಜ್ಞ ಪಿ.ಯು.ಆಂಟೋನಿ ತಿಳಿಸಿದರು.

‘ಹೋಟೆಲ್‌ಗಳು, ತಳ್ಳುವಗಾಡಿಗಳ ವ್ಯಾಪಾರಿಗಳು ತಟ್ಟೆಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕಿ ಕೊಡುತ್ತಾರೆ. ಈ ಹಾಳೆ ಮೇಲೆ ಬಿಸಿಯಾದ ಸಾಂಬರ್ ಹಾಕುವುದರಿಂದ ಸಣ್ಣ ಪ್ರಮಾಣದ ಪ್ಲಾಸ್ಟಿಕ್‌ನ ಅಂಶ ದೇಹ ಸೇರುತ್ತದೆ. ಹೀಗಾಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕಿದೆ’ ಎಂದರು.

ಮಡಿವಾಳ ಸಮೀಪದ ದಾವಣೆಗೆರೆ ಬೆಣ್ಣೆ ದೋಸೆ ಹೋಟೆಲ್‌ನ ವ್ಯಾಪಾರಿಯೊಬ್ಬರು, ‘ಮೊದಲೆಲ್ಲಾ ಕಾಟನ್ ಬಟ್ಟೆ ಬಳಸುತ್ತಿದ್ದೆವು. ಆದರೆ  ಬಟ್ಟೆಯನ್ನು ಪ್ರತಿ ಬಾರಿ ತೊಳೆಯಬೇಕು. ಕೆಲಸಗಾರರ ಸಮಸ್ಯೆ. ಹಾಗಾಗಿ ಪ್ಲಾಸ್ಟಿಕ್ ಹಾಳೆ ಬಳಸುತ್ತೇವೆ. ಇದು ಇಡ್ಲಿ ತಟ್ಟೆಗೆ ಅಂಟಿಕೊಳ್ಳುವುದಿಲ್ಲ. ಬಟ್ಟೆಯಂತೆ ಕೊಳೆಯಾಗಿ ಕಾಣುವುದಿಲ್ಲ. ಅಲ್ಲದೆ ನಾವು ಫುಡ್ ಕ್ವಾಲಿಟಿ ಪ್ಲಾಸ್ಟಿಕ್ ಹಾಳೆ ಬಳಸುತ್ತೇವೆ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಪದ್ಮ ಕುಮಾರ್, ‘ಫುಡ್ ಕ್ವಾಲಿಟಿ ಪಾಲಿಥಿನ್ 40 ಮೈಕ್ರಾನ್‌ಗಿಂತ ಹೆಚ್ಚಿನದ್ದಾಗಿರುತ್ತದೆ. ಇದನ್ನು ಪ್ಯಾಕಿಂಗ್, ಪಾರ್ಸಲ್, ಮೈಕ್ರೋವೇವ್‌ಗಳಲ್ಲಿ ಒಮ್ಮೆ ಬಳಸಬಹುದು. ಆದರೆ, ನೀರು ಆವಿಯಾಗುವಷ್ಟು ತಾಪಮಾನದಲ್ಲಿ ಪ್ಲಾಸ್ಟಿಕ್‌ ಹಾಳೆಗಳನ್ನು ಬಳಸಬಾರದು’ ಎಂದರು.

‘ಪ್ಲಾಸ್ಟಿಕ್‌ ಹಾಳೆ ಉಪಯೋಗಿಸಿ ತಯಾರಿಸುವ ಇಡ್ಲಿ ಸೇವಿಸುವುದರಿಂದ ವಿಷದ ಅಂಶ ದೇಹ ಸೇರುತ್ತದೆ. ಪ್ಲಾಸ್ಟಿಕ್ ಕ್ವಾಲಿಟಿಯನ್ನು ಎ1, ಎಸ್1, ಎಫ್‌ಡಿಎ ಅಪ್ರೂವ್ಡ್ ಎಂದು ಘೋಷಿಸುವ ಸಂಸ್ಥೆಗಳನ್ನೇ ಪ್ರಶ್ನಿಸುವ ತುರ್ತಿದೆ’ ಎಂದು ಅವರು ಹೇಳಿದರು.
- ಶಾಂತರಾಜು ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.