ADVERTISEMENT

‘ಗೋಪಾಲಗೌಡರ ಹೆಸರಿನಲ್ಲಿ ಸಂಸದೀಯ ಶಾಲೆ ತೆರೆಯಿರಿ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಸಿ.ಕೆ.ರಾಮೇಗೌಡ ಅವರು ಚಂದ್ರಶೇಖರ ಪಾಟೀಲ ಅವರೊಂದಿಗೆ ಸಮಾಲೋಚನೆ ನಡೆಸಿದರು. ಪ್ರೊ.ರವಿವರ್ಮ ಕುಮಾರ್‌ ಮತ್ತು ನಟರಾಜ್‌ ಹುಳಿಯಾರ್‌ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ
ಸಿ.ಕೆ.ರಾಮೇಗೌಡ ಅವರು ಚಂದ್ರಶೇಖರ ಪಾಟೀಲ ಅವರೊಂದಿಗೆ ಸಮಾಲೋಚನೆ ನಡೆಸಿದರು. ಪ್ರೊ.ರವಿವರ್ಮ ಕುಮಾರ್‌ ಮತ್ತು ನಟರಾಜ್‌ ಹುಳಿಯಾರ್‌ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶ್ರೇಷ್ಠ ಸಂಸದೀಯ ಪಟುವಾಗಿದ್ದ ಶಾಂತವೇರಿ ಗೋಪಾಲಗೌಡ ಅವರ ಹೆಸರಿನಲ್ಲಿ ಜನಪ್ರತಿನಿಧಿಗಳಿಗೆ ತರಬೇತಿ ನೀಡುವಂತಹ ಸಂಸದೀಯ ಶಾಲೆಯೊಂದನ್ನು ಸರ್ಕಾರ ತೆರೆಯಬೇಕು’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ಆಗ್ರಹಿಸಿದರು.

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಶಾಂತವೇರಿ ಗೋಪಾಲಗೌಡ ಒಂದು ನೆನಪು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೋಪಾಲಗೌಡರ ನಿರಂತರ ಹೋರಾಟದ ಕಾಣಿಕೆ ಮತ್ತು ಕಾಗೋಡು ಸತ್ಯಾಗ್ರಹದ ಫಲವಾಗಿ ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೆ ಬಂತು. ಆದರೆ ಇವತ್ತಿನ ಯಾವ ರಾಜಕಾರಣಿಗಳಿಗೆ ಅಂತಹ ನೈತಿಕತೆ ಶಕ್ತಿ ಇದೆ? ಮೂರು ಹೊತ್ತು ಲಂಚ ತೆಗೆದುಕೊಳ್ಳುವ ರಾಜಕಾರಣಿಗಳಿಂದ ಸಮಾಜಮುಖಿ ಕಾರ್ಯ ನಿರೀಕ್ಷಿಸಲಾಗದು’ ಎಂದರು.

ADVERTISEMENT

‘ಗೋಪಾಲಗೌಡರ ನಂತರ ಬಂದ ಅನೇಕ ಸಮಾಜವಾದಿಗಳು ಗೌಡರ ಎತ್ತರಕ್ಕೆ ಏರಲು ಆಗುವುದಿಲ್ಲ ಎನ್ನುತ್ತ ಯಾವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಇದು ದುರಾದೃಷ್ಟ. ಇವತ್ತು ಸಮಾಜವಾದಿಗಳೆಂದರೆ ಜನ ಹೇಸಿಗೆ ಪಟ್ಟುಕೊಳ್ಳುತ್ತಾರೆ. ಇಂದಿನವರಿಗೆ ಅಧಿಕಾರದಲ್ಲಿದ್ದವರಷ್ಟೇ ಕಾಣುತ್ತಿರುವುದು ದುರಂತ’ ಎಂದು ವಿಷಾದಿಸಿದರು.

ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ, ‘ಕನ್ನಡ ನೆಲದಲ್ಲಿ ಸಮಾಜವಾದದ ಸೆಲೆ ಅಂರ್ತಗಾಮಿಯಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಲೇ ಬಂದಿದೆ. ಆದರೆ ಇವತ್ತು ಹಿಂದಿಗಿಂತ ಇಂದಿನ ಸ್ವರೂಪ ಬದಲಾಗಿದೆ. ಸಮಸ್ಯೆಗಳು ಬದಲಾಗಿ ಸಂಕೀರ್ಣವಾಗುತ್ತ ಹೋಗುತ್ತಿವೆ.

ಅವುಗಳನ್ನು ಎದುರಿಸಲು ಗೋಪಾಲಗೌಡರು ಒಂದು ಜೀವಂತ ಜ್ವಾಲೆಯಾಗಿ ನಮ್ಮನ್ನು ಸುಡದೆಯೇ ನಮಗೆ ಬೆಳಕನ್ನು ಕೊಡುವ ಶಕ್ತಿಯಾಗಿ ಇರಲಿ’ ಎಂದು ಆಶಿಸಿದರು.

ವಿಮರ್ಶಕ ನಟರಾಜ್‌ ಹುಳಿಯಾರ್‌ ಮಾತನಾಡಿ, ‘ಇವತ್ತಿನ ಶಾಸಕರು ವಿಧಾನಸಭೆಗೆ ಚರ್ಚೆ ಹೋಗುವ ಮುನ್ನ ಅಲ್ಲಿನ ಗ್ರಂಥಾಲಯದಲ್ಲಿರುವ ಪುಸ್ತಕಗಳಲ್ಲಿ ಗೋಪಾಲಗೌಡರು ಈ ಹಿಂದೆ ಯಾವ ವಿಷಯ ಕುರಿತು ಹೇಗೆ ವಾದ ಮಂಡಿಸಿದ್ದರು ಎನ್ನುವ ಕುರಿತು ಹತ್ತು ನಿಮಿಷ ಕಣ್ಣಾಡಿಸಿ ಹೋದರೆ ಚರ್ಚೆಗಳಾದರೂ ಉತ್ತಮಮಟ್ಟಕ್ಕೆ ಏರುತ್ತವೆ. ಇವತ್ತಿನ ಶಾಸಕರ ಮಟ್ಟದ ಬಗೆಗೆ ನಾಚಿಕೆಯಿಂದ ತಲೆ ತಗ್ಗಿಸುವ ಹಾಗೇ ಆಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ‘ವಿಧಾನಸೌಧದ ಬಳಿ ಇರುವ ವೃತ್ತಕ್ಕೆ ಶಾಂತವೇರಿ ಗೋಪಾಲಗೌಡರ ಹೆಸರಿದೆ. ಆದರೆ ಅಲ್ಲಿದ್ದ ನಾಮಫಲಕವನ್ನು ಮೆಟ್ರೊ ಕಾಮಗಾರಿಗಾಗಿ ತೆಗೆದುಹಾಕಲಾಗಿದೆ. ಅದನ್ನು ಪುನಃ ಸ್ಥಾಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಸ್ವಾತಂತ್ರ್ಯ ಉದ್ಯಾನದ ಬಳಿ ಇರುವ ಪ್ರತಿಭಟನಾ ಸ್ಥಳಕ್ಕೆ ಗೋಪಾಲಗೌಡರ ಹೆಸರಿಡಬೇಕು’ ಎಂದು ಒತ್ತಾಯಿಸಿದರು.

ಅವರ ಕರ್ಮ, ನಿಮ್ಮ ಕರ್ಮ
ನಟರಾಜ್ ಅವರ ಮಾತು ಮುಗಿಯುತ್ತಿದ್ದಂತೆ ಸಭೆಯಲ್ಲಿ ಎದ್ದುನಿಂತ ಹಿರಿಯ ಸಭಿಕರೊಬ್ಬರು ಕೆಲ ದಶಕಗಳ ಹಿಂದೆ ತಾವು ಕಂಡ ಗೋಪಾಲಗೌಡರ ಭಾಷಣ ಕೇಳಲು ಜನ ಕಾಯುತ್ತಿದ್ದ ಸನ್ನಿವೇಶ ಬಣ್ಣಿಸಿ, ‘ನನ್ನ ಜೀವನದಲ್ಲಿ ಈವರೆಗೆ ಅಂತಹ ರಾಜಕಾರಣಿ ಕಂಡಿಲ್ಲ’ ಎಂದು ಹೇಳಿದರು.

ನಂತರ ಮಾತಿಗೆ ನಿಂತ ಚಂಪಾ ‘ಗೋಪಾಲಗೌಡರ ಭಾಷಣದ ವೈಖರಿ ಬಗ್ಗೆ ಹೇಳುತ್ತಿದ್ದ ಯಜಮಾನರ  ಮಾತುಗಳನ್ನು ನಾನು ಕೇಳಿಸಿಕೊಳ್ಳುತ್ತಿದ್ದೆ.  ಅದೇ ವೇಳೆಗೆ ಅವರ ಹಣೆ ಮೇಲಿನ ಕುಂಕುಮದ ಮೇಲೆ ನನ್ನ ಕಣ್ಣು ಬಿತ್ತು’ ಎನ್ನುತ್ತಲೇ ‘ಅದನ್ನು ತಗದ ಬಿಡ್ರಿ, ತಗದ ಬಿಡ್ರಿ’ ಎಂದರು.

ಆಗ ಆ ಸಭೀಕರು ಎದ್ದು ನಿಂತು ಹಣೆಯ ಮೇಲಿನ ಕುಂಕುಮ ಅಳಿಸಿಕೊಂಡರು. ಆಗ ‘ಇದು ಗೋಪಾಲಗೌಡರ ನೆನಪು’ ಎಂದ ಚಂಪಾ, ‘ನಾಳೆಯಿಂದ ಆ ಕುಂಕುಮವನ್ನು ಹೊಳ್ಳಿ (ಮತ್ತೆ) ಇಡಬಾರ್ದಾ ಮತ್‌’ ಎಂದರು.

‘ಸ್ವತಂತ್ರ ದೇಶ ನಮ್ಮದು ಪ್ರತಿಯೊಬ್ಬರೂ ಅವರವರಿಗೆ ಬೇಕಾದ ಸಂಪ್ರದಾಯ ಪಾಲಿಸುವ ಹಕ್ಕಿದೆ. ಅದಕ್ಕೆ ಇನ್ನೂ ಕಾಯ್ದೆ ಮಾಡಿಲ್ಲ. ಇವರು  (ರವಿಕುಮಾರ್‌ ಅವರತ್ತ ಬೆರಳು ತೋರಿಸಿ) ಹೇಳಿದರೆ ನಾಳೆಯಿಂದ ನಾನು ಕುಂಕುಮವೇ ಹಚ್ಚುವುದಿಲ್ಲ’ ಎಂದು ಆ ಹಿರಿಯರು ತಿಳಿಸಿದರು.

ಅದಕ್ಕೆ ಚಂಪಾ, ‘ಕಾನೂನೇನೂ ಬ್ಯಾಡಾ. ಆದರೆ ಆ ಸಂಪ್ರದಾಯದಲ್ಲಿ ನಂಬಿಕೆ ಇದ್ದರೆ ಈಗಲಾದರೂ ಆ ಕುಂಕುಮವನ್ನು ಏಕೆ ಅಳಿಸಿಕೊಳ್ಳಬೇಕಿತ್ತು? ತಕ್ಷಣಕ್ಕೇ ನನಗೆ ಅನಿಸಿದ್ದನ್ನು ನಾ ಹೇಳಿರುವೆ. ನಾಳೆಯಿಂದ ಅವರು ಏನೂ ಮಾಡುತ್ತಾರೋ ಅವರ ಕರ್ಮ’ ಎಂದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆ ಸಭಿಕರು ‘ಇಲ್ಲಿ ಹೇಳುವುದೂ ನಿಮ್ಮ ಕರ್ಮ’ ಎಂದಾಗ ಸಭೆಯಲ್ಲಿ ಕೆಲ ಹೊತ್ತು ನಗೆ ಅಲೆ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.