ADVERTISEMENT

ಗುತ್ತಿಗೆ ಸಂಸ್ಕೃತಿಗೆ ಮುಕ್ತಿ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:27 IST
Last Updated 25 ಏಪ್ರಿಲ್ 2024, 16:27 IST
<div class="paragraphs"><p>ಕಾರ್ಯಕ್ರಮದಲ್ಲಿ&nbsp;ಅವಿರತ ಹರೀಶ್ ಹಾಗೂ ಅವರ ಪತ್ನಿ&nbsp;ವಿಜಯಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು. </p></div>

ಕಾರ್ಯಕ್ರಮದಲ್ಲಿ ಅವಿರತ ಹರೀಶ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು.

   

ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚಿನವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಅಭದ್ರತೆ ಕಾಡುತ್ತಿದೆ. ಆದ್ದರಿಂದ ಗುತ್ತಿಗೆ ಪದ್ಧತಿಯಿಂದ ಮುಕ್ತಿ ನೀಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. 

ಅವಿರತ ಹರೀಶ್ ಗೆಳೆಯರ ಬಳಗ ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಅವಿರತ ಹರೀಶ್ 60ರ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಕಾಶಕ, ಲೇಖಕ ಹಾಗೂ ಸಂಘಟಕರಾಗಿರುವ ಅವಿರತ ಹರೀಶ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಗೌರವಿಸಿ, ಮಾತನಾಡಿದರು. 

ADVERTISEMENT

‘ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇರುವ ಬಹಳಷ್ಟು ಮಂದಿ ಸಂಚಿತ ವೇತನ ಪಡೆಯುವ ನೌಕರರಾಗಿದ್ದಾರೆ. ಯಾವುದೇ ಕೆಲಸಕ್ಕೆ ಸೇರಿದರೂ ನಿವೃತ್ತಿ ಕಾಯಂ ಆಗಿದೆ. ಆದರೆ, ಹುದ್ದೆ ಕಾಯಂ ಇಲ್ಲವಾಗಿದೆ. ರಾಜ್ಯದಲ್ಲಿನ 410 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೇವಲ ನಾಲ್ಕು ಕಾಲೇಜುಗಳಲ್ಲಿ ಮಾತ್ರ ಕಾಯಂ ಪ್ರಾಂಶುಪಾಲರು ಇದ್ದಾರೆ. 14 ಸಾವಿರ ಅತಿಥಿ ಉಪನ್ಯಾಸಕರು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ 23,700ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿವೆ’ ಎಂದು ಹೇಳಿದರು. 

‘ದೇಶದಲ್ಲಿ ವಿದ್ಯಾವಂತರಿಗೆ ಕಾಯಂ ಉದ್ಯೋಗ ನೀಡದಿದ್ದರೆ ಅದೆಂತಹ ಪ್ರಜಾಪ್ರಭುತ್ವ ಎಂಬ ಪ್ರಶ್ನೆ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಉದ್ಯೋಗ ನೀತಿಯಲ್ಲಿ ಇರುವಂತಹ ಅಪಾಯಗಳ ಬಗ್ಗೆ ಜಾಗೃತವಾಗಬೇಕಿದೆ. ಕನಿಷ್ಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾದರೂ ಗುತ್ತಿಗೆ ಪದ್ಧತಿ ಬಿಡಬೇಕು’ ಎಂದರು. 

‘ಇತ್ತೀಚಿನ ದಿನಗಳಲ್ಲಿ ಅಭಿನಂದನೆಯ ಮೌಲ್ಯ ಕುಸಿದಿದೆ. ಅಭಿನಂದನೆ ಮಾಡಿಸಿಕೊಳ್ಳುವವರು ಜಾಸ್ತಿಯಾಗಿದ್ದು, ಅಭಿನಂದನೆ ಮಾಡುವವರು ಕಡಿಮೆಯಾಗಿದ್ದಾರೆ’ ಎಂದು ಹೇಳಿದರು.

ಪತ್ರಕರ್ತ ಜಿ.ಎನ್. ಮೋಹನ್ ಅವರು ಅಭಿನಂದನಾ ನುಡಿಗಳನ್ನಾಡಿದರು. ಹರೀಶ್ ಅವರ ಬರಹಗಳ ಬಗ್ಗೆ ಪ್ರಾಧ್ಯಾಪಕ ರಾಜಶೇಖರ ಮಠಪತಿ ಮಾತನಾಡಿದರು. ಇದಕ್ಕೂ ಮೊದಲು ಗಾಯನ ಹಾಗೂ ನೃತ್ಯ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.