ADVERTISEMENT

ಮಠಗಳಲ್ಲಿ ಜೋಶಿ ರಾಜಕಾರಣ: ದಿಂಗಾಲೇಶ್ವರ ಸ್ವಾಮೀಜಿ ಟೀಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 16:16 IST
Last Updated 27 ಏಪ್ರಿಲ್ 2024, 16:16 IST
ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ‘ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಮಠಗಳನ್ನು ರಾಜಕಾರಣಕ್ಕೆ ಬಳಸಿಕೊಂಡು ಒಡಕು ಮೂಡಿಸುತ್ತಿದ್ದಾರೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ

ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗುರುಗಳಾದ ಫಕೀರ ಸಿದ್ಧರಾಮ ಸ್ವಾಮೀಜಿ ಅವರನ್ನು ಪದೇ ಪದೇ ಭೇಟಿಯಾಗಿ, ಎರಡು ಬಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ’ ಆರೋಪಿಸಿದರು.

‘ಕೇಂದ್ರ ಸಚಿವರಾದಾಗ ಒಮ್ಮೆಯೂ ಗುರುಗಳನ್ನು ಭೇಟಿಯಾಗಿಲ್ಲ. ಗುರುಗಳು ಹಿಂದೆ ದೂರವಾಣಿ ಕರೆ ಮಾಡಿದ್ದಾಗ ಸ್ವೀಕರಿಸಿರಲಿಲ್ಲ. ಈಗ  ಯಾವ ಮುಖ ಇಟ್ಟುಕೊಂಡು ಹೋಗಿದ್ದೀರಿ’ ಎಂದು ಹರಿಹಾಯ್ದರು.

ADVERTISEMENT

‘ಗುರುಗಳು ಮತ್ತು ನನ್ನ ನಡುವೆ ಮಧ್ಯೆ ಒಡಕು ಮೂಡಿಸುವ ಪಾಪದ ಕೆಲಸಕ್ಕೆ ಸಂಸರು ಕೈ ಹಾಕಿದ್ದು ಸರಿಯಲ್ಲ. ಗುರು–ಶಿಷ್ಯನನ್ನು ಬೇರೆ ಮಾಡಿದರೆ, ಪತಿ ಮತ್ತು ಪತ್ನಿಯನ್ನು ಬೇರೆ ಮಾಡಿದಂತೆ’ ಎಂದರು.

‘ಚುನಾವಣೆ ಬಂದಾಗ ಲಿಂಗಾಯತ ಮಠ, ಸ್ವಾಮೀಜಿಗಳು, ಸಮಾಜ ಬೇಕು. ಗೆದ್ದ ಬಳಿಕ ಯಾವ ಮಠಕ್ಕೂ ಭೇಟಿ ನೀಡಿಲ್ಲ. ಯಾವ ಸ್ವಾಮೀಜಿಯನ್ನೂ ಸನ್ಮಾನಿಸಿಲ್ಲ. 20 ವರ್ಷ ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದಾರೆ? ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. 15 ವರ್ಷಗಳಿಂದ ಒಂದು ಮಠಕ್ಕೂ ಅನುದಾನ ಕೊಟ್ಟಿಲ್ಲ. ಅವರಿಗೆ ಮಾನ ಮರ್ಯಾದೆ ಇದೆಯೇ’ ಎಂದು ಪ್ರಶ್ನಿಸಿದರು.

‘ನಾನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಯಾವ ತಂತ್ರಗಾರಿಕೆ ನಡೆಯಿತು ಎಂದು ಈಗಲೂ ನನಗೆ ಗೊತ್ತಿಲ್ಲ. ಗುರುಗಳ ಮಾತಿಗೆ ಗೌರವ ನೀಡಿ ಹಿಂದೆ ಸರಿದಿದ್ದೇನೆ. ನಾನು ಸ್ಪರ್ಧಿಸಿದ್ದಾಗ ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳು, ಬಿಜೆಪಿಯ ಅನೇಕರು ನನ್ನ ನಿಲುವು ಬೆಂಬಲಿಸಿದ್ದರು. ಈಗ ಜೋಶಿ ಅವರನ್ನು ಸೋಲಿಸುವ ಮೂಲಕ ನನ್ನ ಮೇಲಿನ ಅಭಿಮಾನವನ್ನು ತೋರ್ಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.