ADVERTISEMENT

ಮುಂಡರಗಿ: ಒಕ್ಕಲುತನದಲ್ಲಿ ಸೈ ಎನಿಸಿಕೊಂಡ ಮಹಿಳೆ

ಏಳು ಎಕರೆ ಜಮೀನಿನಲ್ಲಿ ವಿವಿಧ ಬೆಳೆ ತೆಗೆಯುತ್ತಿರುವ ಲಕ್ಷ್ಮಿ ಪಾಟೀಲ

ಕಾಶಿನಾಥ ಬಿಳಿಮಗ್ಗದ
Published 12 ಏಪ್ರಿಲ್ 2024, 5:01 IST
Last Updated 12 ಏಪ್ರಿಲ್ 2024, 5:01 IST
ತಮ್ಮ ಜಮೀನಿನಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುತ್ತಿರುವ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಪಾಟೀಲ
ತಮ್ಮ ಜಮೀನಿನಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುತ್ತಿರುವ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಪಾಟೀಲ   

ಮುಂಡರಗಿ: ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಸೋಮನಗೌಡರ ಪಾಟೀಲ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದು, ಎಲ್ಲ ಕೃಷಿ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸುತ್ತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡೋಣಿ ಗ್ರಾಮದಲ್ಲಿ ಏಳು ಎಕರೆ ನೀರಾವರಿ ಜಮೀನು ಹೊಂದಿರುವ ಲಕ್ಷ್ಮಿ ಅವರು ಅದರಲ್ಲಿಯೇ ವೈವಿಧ್ಯಮಯ ಬೆಳೆ ತೆಗೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ದೀರ್ಘಾವಧಿಯಲ್ಲಿ ಫಸಲು ನೀಡುವ ಗಿಡ, ಮರಗಳನ್ನು ಬೆಳೆದು ಆರ್ಥಿಕ ಸಂಕಷ್ಟವನ್ನು ದೂರವಾಗಿಸಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದಿಂದ ಎಲ್ಲ ಖರ್ಚು ಕಳೆದು ₹20ಸಾವಿರ ಲಾಭ ಪಡೆದಿದ್ದಾರೆ. ತರಕಾರಿ ಬೆಳಗಳ ಮೂಲಕ ನಿಯಮಿತ ಆದಾಯ ಗಳಿಸುತ್ತಿದ್ದಾರೆ. ಎರಡು ಎಕರೆಯಲ್ಲಿ ತೆಂಗು ನಾಟಿ ಮಾಡಿದ್ದು, ಸದ್ಯ ತೆಂಗಿನ ಮರಗಳು ಚಿಕ್ಕದಿರುವ ಕಾರಣ ಅವುಗಳ ಮಧ್ಯದಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತೆಂಗಿನ ಮರಗಳೂ ತುಂಬಾ ಸೊಗಸಾಗಿ ಬೆಳೆಯುತ್ತಿವೆ.

ADVERTISEMENT

ಡಂಬಳ ಹೋಬಳಿಯಲ್ಲಿ ತುಂಬಾ ವಿಶೇಷವಾದ ಪೇರಲ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದನ್ನರಿತ ಲಕ್ಷ್ಮಿ ತಮ್ಮ ಜಮೀನಿನ ಎರಡು ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ಪೇರಲ ಗಿಡಗಳನ್ನು ನೆಟ್ಟಿದ್ದು, ಈ ವರ್ಷ ಅವು ಭರಪೂರ ಫಲ ನೀಡಲಿವೆ. ಡಂಬಳ ಭಾಗದಲ್ಲಿ ಬೆಳೆದ ಪೇರಲ ಹಣ್ಣುಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಇದೆ.

ಎರಡೂವರೆ ಎಕರೆಯಲ್ಲಿ ಮಹಾಗನಿ ಗಿಡಗಳನ್ನು ನೆಟ್ಟಿದ್ದು, ದಶಕದ ನಂತರ ಅವುಗಳು ಲಕ್ಷಾಂತರ ರೂಪಾಯಿ ಆದಾಯ ನೀಡಲಿವೆ.

ಲಕ್ಷ್ಮಿ ಅವರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ನಿಭಾಯಿಸುತ್ತಿದ್ದು, ನಾಲ್ಕು ಹಸುಗಳನ್ನು ಸಾಕಿದ್ದಾರೆ. ಪತಿ ಸೋಮನಗೌಡರ ಹಾಗೂ ಕುಟುಂಬ ವರ್ಗದವರು ಲಕ್ಷ್ಮಿ ಅವರ ಕೃಷಿ ಕಾಯಕಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿರುವ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಪಾಟೀಲ

ಕಷ್ಟಪಟ್ಟು ದುಡಿದರೆ ಯಾರಿಗಾದರೂ ಪ್ರತಿಫಲ ದೊರೆಯುತ್ತದೆ. ಮಹಿಳೆಯರು ಮನೆಗೆಲಸದ ನಂತರ ಕೃಷಿ ಕಾರ್ಯದಲ್ಲಿ ತೊಡಗಿ ಹಣ ಸಂಪಾದಿಸಬಹುದು

-ಲಕ್ಷ್ಮಿ ಪಾಟೀಲ ಕೃಷಿ ಮಹಿಳೆ ಡೋಣಿ

ರಾಸಾಯನಿಕಗಳಿಂದ ದೂರ

ಲಕ್ಷ್ಮಿ ಅವರು ಬೆಳೆಗಳಿಗೆ ರಾಸಾಯನಿಕಗಳ ಬದಲಾಗಿ ಸಾವಯವಗಳನ್ನು ಬಳಸುತ್ತಿದ್ದಾರೆ. ಅವರೇ ಸಾಕಿರುವ ಹಸುಗಳ ಸಗಣಿ ಮತ್ತಿತರ ತ್ಯಾಜ್ಯವನ್ನು ಬೆಳೆಗಳಿಗೆ ನೀಡುತ್ತಿದ್ದಾರೆ. 2 ಲೀಟರ್ ಬೆಲ್ಲ 2 ಲೀಟರ್ ಹಿಟ್ಟು 10 ಲೀಟರ್ ಗೋಮೂತ್ರ ಮೊದಲಾದವುಗಳ ಮಿಶ್ರಣವನ್ನು 200 ಲೀಟರ್ ಬ್ಯಾರಲ್‍ನಲ್ಲಿ ನೆನೆಹಾಕಿ ಗೋಕೃಪಾಮೃತವನ್ನು ತಯಾರಿಸುತ್ತಾರೆ. ಈ ಮಿಶ್ರಣವು ಚೆನ್ನಾಗಿ ಕಳಿತ ನಂತರ ಅದನ್ನು ನೀರಿನೊಂದಿಗೆ ಬೆಳೆಗಳಿಗೆ ನೀಡುತ್ತಾರೆ. ಹೀಗಾಗಿ ಚೆನ್ನಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.