ADVERTISEMENT

ಸಂಕನೂರು: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ‌ ನಾಲ್ವರ ಮೃತದೇಹ ಪತ್ತೆ

ಒಂದು ತಿಂಗಳ ಅಂತರದಲ್ಲಿ ಯಲಬುರ್ಗಾ ತಾಲ್ಲೂಕಿನಲ್ಲಿ ಎರಡನೇ ಘಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 9:42 IST
Last Updated 2 ಅಕ್ಟೋಬರ್ 2022, 9:42 IST
ಗಿರಿಜಾ, ರೇಖಾ, ವೀಣಾ, ಭುವನೇಶ್ವರಿ
ಗಿರಿಜಾ, ರೇಖಾ, ವೀಣಾ, ಭುವನೇಶ್ವರಿ   

ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ‌ಸಂಕನೂರು ಬಳಿ ಶನಿವಾರ ರಾತ್ರಿ‌ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ಕನೇ ಮಹಿಳೆಯ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಯಿತು.

ರೇಖಾ ಸಿದ್ದಯ್ಯ ಪೊಲೀಸ್ ಪಾಟೀಲ (40) ಮೃತಪಟ್ಟವರು. ಬೆಳಿಗ್ಗೆ ಪತ್ತೆಯಾಗಿದ್ದ ಸಂಕನೂರು ಗ್ರಾಮದ ಗಿರಿಜಾ ಕಲ್ಲನಗೌಡ ಪೊಲೀಸ್‌ ಪಾಟೀಲ (28), ಭುವನೇಶ್ವರಿ ಶಾಂತವೀರಯ್ಯ ಪೊಲೀಸ್‌ ಪಾಟೀಲ (32) ಹಾಗೂ ವೀಣಾ ಬಸವರಾಜ ಪೊಲೀಸ್‌ ಪಾಟೀಲ (22) ಮೃತದೇಹಗಳ ಅಂತಿಮ ಸಂಸ್ಕಾರ ಗ್ರಾಮದಲ್ಲಿ ನೆರವೇರಿತು.

ಹೊಲದಲ್ಲಿ ಕೆಲಸಕ್ಕೆ ಹೋಗಿ ವಾಪಸ್‌ ಮನೆಗೆ ಮರಳುವಾಗ ನಾಲ್ಕು ಜನ ಮಹಿಳೆಯರು ಶನಿವಾರ ರಾತ್ರಿ ಯಲಬುರ್ಗಾ ತಾಲ್ಲೂಕಿನ ಸಂಕನೂರು ಬಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅವರ ಶೋಧಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿದ್ದರು. ಮಳೆ ಮತ್ತು ಬೆಳಕಿನ ಕೊರತೆಯ ಕಾರಣದಿಂದ ಕಾರ್ಯಾಚರಣೆ ಸುಲಭವಾಗಿ ಸಾಧ್ಯವಾಗಲಿಲ್ಲ. ಮಳೆಯ ನಡುವೆಯೇ ಸ್ಥಳೀಯರು, ರಕ್ಷಣಾ ಸಿಬ್ಬಂದಿ ನಾಪತ್ತೆಯಾದವರ ಶೋಧಕ್ಕೆ ಕೈ ಜೋಡಿಸಿದ್ದರು.

ADVERTISEMENT

‘ಹತ್ತಿ ಜೀನ್‌ನಿಂದ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಹೋಗುವಾಗ ಸಂಕನೂರು ಗ್ರಾಮದ ನಾಲ್ಕು ಜನ ಹೆಣ್ಣುಮಕ್ಕಳು ಹಳ್ಳದಾಟುವ ಸಮಯದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಶೋಧ ಕಾರ್ಯ ನಡೆದಿದೆ’ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಘಟನಾ ಸ್ಥಳದಲ್ಲಿ ಯಲಬುರ್ಗಾ ತಹಶೀಲ್ದಾರ್‌ ಶ್ರೀಶೈಲ್‌ ತಳವಾರ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

‘ನೀರಿನ ರಭಸ ಲೆಕ್ಕಿಸದೇ ಹಳ್ಳಕ್ಕೆ ಇಳಿದ ಮಹಿಳೆಯರು ಅಪಾಯಕ್ಕೆ ಸಿಲುಕಿದರು. ಹಳ್ಳದಲ್ಲಿ ಇಳಿಯುತ್ತಲೇ ಇಬ್ಬರು ಕೊಚ್ಚಿಕೊಂಡು ಹೋದರು. ಗಿರಿಜಾ ಹಾಗೂ ಭುವನೇಶ್ವರಿ ಕೆಲ ಹೊತ್ತು ಹಳ್ಳದಲ್ಲಿನ ಗಿಡಗಳನ್ನು ಹಿಡಿದುಕೊಂಡಿದ್ದರು. ಗ್ರಾಮಸ್ಥರು ರಕ್ಷಿಸಲು ಮುಂದಾಗುವಷ್ಟರಲ್ಲಿಯೇ ಇವರಿಬ್ಬರೂ ಕೊಚ್ಚಿಕೊಂಡು ಹೋದರು’ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು. ಘಟನೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಯಲಬುರ್ಗಾದಲ್ಲಿ ಶನಿವಾರ ರಾತ್ರಿಯೂ ಮಳೆ ಬಂತು.

ಎರಡನೇ ಘಟನೆ: ಒಂದು ತಿಂಗಳ ಅಂತರದಲ್ಲಿ ಯಲಬುರ್ಗಾ ತಾಲ್ಲೂಕಿನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ತಾಲ್ಲೂಕಿನ ತೊಂಡೆಹಳ್ಳದಲ್ಲಿ ಕರ್ತವ್ಯದ ಮೇಲೆ ತೆರಳಿದ್ದ ಗದಗ ಜಿಲ್ಲೆಯ ಇಬ್ಬರು ಪೊಲೀಸರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಎರಡು ದಿನಗಳ ಬಳಿಕ ಇಬ್ಬರು ಪೊಲೀಸರ ಮೃತದೇಹಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.