ADVERTISEMENT

ಅತಿಥಿ ಉಪನ್ಯಾಸಕರ ಹುದ್ದೆ: ಈಚೆಗೆ ಪಿಎಚ್.ಡಿ ಪಡೆದವರಿಗೆ ಅನ್ಯಾಯ

ಬಾಲಚಂದ್ರ
Published 10 ಜನವರಿ 2023, 23:45 IST
Last Updated 10 ಜನವರಿ 2023, 23:45 IST
   

ಮೈಸೂರು: ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆನ್‌ಲೈನ್‌ ಮೂಲಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಿದ್ದು, ಈಚೆಗೆ ಪಿಎಚ್‌.ಡಿ ಮುಗಿಸಿ ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವವರ ಅರ್ಹತೆಯನ್ನು ಪರಿಗಣಿಸದ ಬಗ್ಗೆ ಅರ್ಹ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಕಾಶ ಕೈತಪ್ಪುವ ಆತಂಕ ಅವರದಾಗಿದೆ.

ಜ.3ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಜ.10 ಕೊನೆ ದಿನವಾಗಿದೆ. ಮೆರಿಟ್‌ ಆಧಾರದಲ್ಲಿ ಇದೇ 16ರಿಂದ 25ರವರೆಗೆ ಕೌನ್ಸೆಲಿಂಗ್‌ ನಡೆಯಲಿದ್ದು, ಫೆ.1ರಂದು ಸ್ಥಳ ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸರ್ಕಾರ ತಿಳಿಸಿದೆ.

ಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಅಂಕಗಳ ಶೇ 25 ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕ ಪಡೆಯಬಹುದು. ಪಿಎಚ್.ಡಿ ಪಡೆದಿದ್ದಲ್ಲಿ 12 ಅಂಕ,‌ ರಾಷ್ಟೀಯ ಅರ್ಹತಾ ಪರೀಕ್ಷೆ (ನೆಟ್) ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ (ಕೆ–ಸೆಟ್‌) ಉತ್ತೀರ್ಣರಾಗಿದ್ದರೆ 9 ಅಂಕ, ಎಂಫಿಲ್ ಪದವಿ ಪಡೆದರೆ 6 ಅಂಕಗಳು ಸಿಗುತ್ತವೆ.

ADVERTISEMENT

ಈಚೆಗೆ ನಡೆದ ನೆಟ್, ಕೆ–ಸೆಟ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಫಲಿತಾಂಶದ ಪ್ರಮಾಣಪತ್ರ ಕೈಸೇರದ ಕಾರಣ, ಅಧಿಕೃತ ಜಾಲತಾಣದಿಂದ ಡೌನ್‌ಲೋಡ್ ಮಾಡಿದ ಫಲಿತಾಂಶ ಪತ್ರಕ್ಕೆ ಸಂಬಂಧಪಟ್ಟ ನಿರ್ವಹಣಾ ಕೇಂದ್ರದ ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಆದರೆ, ಪಿಎಚ್.ಡಿ ಪದವಿ ಪಡೆದ ಅಭ್ಯರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ತಾತ್ಕಾಲಿಕ ಪ್ರಮಾಣಪತ್ರ ಪಡೆದಿದ್ದರೂ ಅವಕಾಶ ನೀಡುತ್ತಿಲ್ಲ ಎನ್ನುವುದು ಅಭ್ಯರ್ಥಿಗಳ ದೂರು.

‘ಐದು ವರ್ಷಗಳಿಂದ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ 10 ತಿಂಗಳು ಕಳೆದಿವೆ. ಪಿಎಚ್.ಡಿ ಪದವಿ ನೀಡಿರುವ ಕುರಿತು ವಿವಿಯು ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ, ಘಟಿಕೋತ್ಸವ ಇನ್ನೂ ನಡೆಯದ ಕಾರಣ ಪ್ರಮಾಣಪತ್ರ ಸಿಕ್ಕಿಲ್ಲ. ಇದರಿಂದ 12 ಅಂಕಗಳಿಂದ ವಂಚಿತರಾಗಬೇಕಾಗುತ್ತದೆ. ನಮ್ಮಂತಹ ನೂರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ತಾತ್ಕಾಲಿಕ ಪ್ರಮಾಣಪತ್ರವನ್ನೇ ಪರಿಗಣಿಸಿ ಅವಕಾಶ ಕಲ್ಪಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಭ್ಯರ್ಥಿಯೊಬ್ಬರು ಕೋರಿದರು.

‘ಸಮಸ್ಯೆಯನ್ನು ಅಭ್ಯರ್ಥಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಗಿರಿಧರ್‌ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.