ADVERTISEMENT

‘ಲಕ್ಷ್ಮಣ ಗೆಲ್ಲಿಸಿ’ ಅಭಿಯಾನಕ್ಕೆ ಚಾಲನೆ

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ; ‘ದೇಶದಲ್ಲಿ ಕಾರ್ಪೊರೇಟ್ ಆಡಳಿತ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:28 IST
Last Updated 19 ಏಪ್ರಿಲ್ 2024, 16:28 IST
ನಗರದಲ್ಲಿ ಆಯೋಜಿಸಿದ್ದ ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿ’ ಎಂಬ ಅಭಿಯಾನಕ್ಕೆ ರಂಗಕರ್ಮಿ ಸಿ.ಬಸವಲಿಂಗಯ್ಯ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಆಯೋಜಿಸಿದ್ದ ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿ’ ಎಂಬ ಅಭಿಯಾನಕ್ಕೆ ರಂಗಕರ್ಮಿ ಸಿ.ಬಸವಲಿಂಗಯ್ಯ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಸಮಾಜದವರು ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿ’ ಎಂಬ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಹಾಪುರದಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ನಡೆಸಲಾಯಿತು.

ರಂಗಕರ್ಮಿ ಸಿ. ಬಸವಲಿಂಗಯ್ಯ ಮಾತನಾಡಿ, ‘ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ, ಕಲಾವಿದ. ಹಲವು ಸರ್ಕಾರಗಳನ್ನು ನೋಡಿದ್ದೇವೆ. ಆದರೆ, 10 ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ನೋಡಿದರೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳು ಉಳಿಯುತ್ತವೆಯೇ ಎಂಬ ಆತಂಕವಾಗುತ್ತಿದೆ. ಸರ್ವಾಧಿಕಾರದತ್ತ ದೇಶ ಚಲಿಸುತ್ತಿದೆ. ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಆದರೆ, ಈಗ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರು ನಮ್ಮ ವಂಶದವರು ಆರ್‌ಎಸ್‌ಎಸ್‌ನಲ್ಲಿದ್ದೆವು ಎನ್ನುತ್ತಾರೆ. ಆರ್‌ಎಸ್‌ಎಸ್‌ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ದೇಶದ್ರೋಹದ ಕೆಲಸವನ್ನೇ ಮಾಡುತ್ತಿತ್ತು. ಗಾಂಧಿ ಹಂತಕರು ಈಗ ಮುಖ್ಯವಾದ ಸ್ಥಾನದಲ್ಲಿ ಕುಳಿತಿದ್ದಾರೆ. ದೇಶವನ್ನು ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ವಿಭಜಿಸಲಾಗುತ್ತಿದೆ. ಇದೆಲ್ಲವನ್ನೂ ಮತದಾರರು ಧಿಕ್ಕರಿಸಬೇಕು’ ಎಂದು ಕೋರಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ದೇಶದಲ್ಲಿ ಕಾರ್ಪೊರೇಟ್ ಆಡಳಿತ ಅಧಿಕಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿದ್ದಾರೆ. ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಸಂವಿಧಾನವನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಹೇಳಿದರು.

‘ಈ ಚುನಾವಣೆಯು ಎಲ್ಲ ಹಿಂದುಳಿದ ವರ್ಗದವರು, ಶೋಷಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಗಳೇ ನಡೆಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದೇ ತಿಂಗಳ 24ರವರೆಗೆ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ಮಹೇಶ್ ಚಂದ್ರಗುರು, ನಗರ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಎನ್.ಆರ್. ನಾಗೇಶ್, ಉಪ್ಪಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಯೋಗೇಶ್‌ ಉಪ್ಪಾರ, ಕುಂಬಾರರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಮಡಿವಾಳ, ಮಡಿವಾಳ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರವಿನಂದನ್, ವಿಶ್ವಕರ್ಮ ಬಡಗಿಗಳ ಸಂಘದ ಅಧ್ಯಕ್ಷ ಮೊಗಣ್ಣಚಾರ್, ಲೋಕೇಶ್ ಕುಮಾರ್ ಮಾದಾಪುರ, ಸವಿತಾ ಸಮಾಜದ ಮುತ್ತುರಾಜ್, ಮಂಜುನಾಥ್, ಕೊಲ್ಹಾಪುರದಮ್ಮ ದೇವಸ್ಥಾನದ ಅಧ್ಯಕ್ಷ ನಾಗರಾಜ್, ವಿಶ್ವ, 23ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಆನಂದ್, ಕಾಂಗ್ರೆಸ್ ಮುಖಂಡರಾದ ರಾಜೀವ್, ಸುಂದರ್ ಕುಮಾರ್, ಬ್ರಾಡ್‌ವೇ ಕಿರಣ್, ಡಿ.ಪಿ. ಪ್ರಕಾಶ್, ಸುನೀಲ್‌ ನಾರಾಯಣ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಾಮಾಜಿಕ ಆರ್ಥಿಕವಾಗಿ ಶಕ್ತಿ ತುಂಬುತ್ತಿದ್ದಾರೆ. ಅವರ ಕೈಬಲಪಡಿಸಬೇಕು
ಕೆ.ಎಸ್. ಶಿವರಾಮು ಅಧ್ಯಕ್ಷ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ
ನಾವು ಕಲಾವಿದರು ನಾಟಕ ಮಾಡುತ್ತೇವೆ. ಆದರೆ ಕೇಂದ್ರದಲ್ಲಿ ನಮಗಿಂತಲೂ ಅದ್ಭುತವಾಗಿ ನಾಟಕ ಮಾಡುವವರನ್ನು ನೋಡುತ್ತಿದ್ದೇವೆ
ಸಿ.ಬಸವಲಿಂಗಯ್ಯ ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.