ADVERTISEMENT

ಲೋಕಸಭೆ ಚುನಾವಣೆ ಬಳಿಕ ಬಿಜೆಪಿಗೆ ವಾರಂಟಿ ಇರುವುದಿಲ್ಲ: ಮಧು ಬಂಗಾರಪ್ಪ ಲೇವಡಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 15:40 IST
Last Updated 20 ಏಪ್ರಿಲ್ 2024, 15:40 IST
ಶಿಕಾರಿಪುರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಗ್ಯಾರಂಟಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು
ಶಿಕಾರಿಪುರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಗ್ಯಾರಂಟಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು   

ಶಿಕಾರಿಪುರ: ಲೋಕಸಭೆ ಚುನಾವಣೆ ನಂತರ ಬಿಜೆಪಿಗೆ ವಾರಂಟಿ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಗ್ಯಾರಂಟಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಬಿಜೆಪಿಗೆ ಮತ ಹಾಕಿದವರ ಮನೆಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ತಲುಪಿದೆ. ಗ್ಯಾರಂಟಿ ನಮಗೆ ವಾರಂಟಿಯಾಗಿದೆ. ಗ್ಯಾರಂಟಿ ಯೋಜನೆಯ ಹಣ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಟ್ಟಿದೆ. ಬಡವರ ಮನೆಗೆ ಬೆಳಕು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಮೂಲಕ ಹಣವನ್ನು ರಾಜ್ಯದ ಜನತೆಗೆ ಪ್ರಾಮಾಣಿಕವಾಗಿ ನೀಡುತ್ತಿದ್ದಾರೆ ಎಂದರು. 

ADVERTISEMENT

ಬಡವರಿಗೆ ಸುಳ್ಳು ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದರು. 10 ವರ್ಷ ಮೋದಿ ಭರವಸೆ ಖಾಲಿ ಚೆಂಬು ಆಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಗೆಲ್ಲಲ್ಲು ಬಂಗಾರಪ್ಪ ಕಾರಣರಾಗಿದ್ದನ್ನು ಸಂಸದ ರಾಘವೇಂದ್ರ ಮರೆಯಬಾರದು. ತಾಲ್ಲೂಕಿಗೆ ನೀರಾವರಿ ಯೋಜನೆ ಅನುಷ್ಠಾನ ಮಾಡಿಸಿದ್ದು ನಾನು. ಸೊರಬ ತಾಲ್ಲೂಕಿನಲ್ಲಿ 6 ಸಾವಿರಕ್ಕೂ ಹೆಚ್ಚು ಹಕ್ಕು ಪತ್ರ ನೀಡಿದ್ದೇನೆ. ಆದರೆ ಅಧಿಕಾರದಲ್ಲಿದ್ದರೂ ಸಂಸದ ರಾಘವೇಂದ್ರ ಹಕ್ಕು ಪತ್ರ ನೀಡಿಲ್ಲ ಎಂದು ಟೀಕಿಸಿದರು.

‘ಕಾಂಗ್ರೆಸ್ ಗ್ಯಾರಂಟಿ ಯೋಜನೆ ಈ ಚುನಾವಣೆಗೆ ಸಹಕಾರಿಯಾಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ಹಣ ನಡೆಯುವುದಿಲ್ಲ. ನಿಮ್ಮ ಭ್ರಷ್ಟಾಚಾರವನ್ನು ಬೀದಿಗೆ ತರುತ್ತೇವೆ. ಶಿಕಾರಿಪುರ ತಾಲ್ಲೂಕಿನ ಜನತೆ ಗೀತಾ ಶಿವರಾಜಕುಮಾರ್ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನೀಡಿದ ಅನ್ನದ ಋಣವನ್ನು ಬಡ್ಡಿ ಸಮೇತ ತೀರಿಸಲಿದ್ದಾರೆ. ಮುಖಂಡರು ಹಾಗೂ ಕಾರ್ಯಕರ್ತರಿಗೆ ನಮ್ಮ ಬೂತ್ ನಮ್ಮ ಜವಾಬ್ದಾರಿಯಾಗಬೇಕು. ಕಚೇರಿಯಲ್ಲಿ ಸಮಯ ಕಳೆಯದೇ ನಿಮ್ಮ ಬೂತ್‌ಗಳನ್ನು ಗಟ್ಟಿಗೊಳಿಸಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ. ನಾಗರಾಜಗೌಡ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಮ್, ಶಿರಾಳಕೊಪ್ಪ ಘಟಕದ ಅಧ್ಯಕ್ಷ ವೀರನಗೌಡ, ಮುಖಂಡರಾದ ಕಲಗೋಡು ರತ್ನಾಕರ, ನಗರದ ಮಹಾದೇವಪ್ಪ, ಚುರ್ಚಿಗುಂಡಿ ಫಾಲಾಕ್ಷಪ್ಪ, ಎಚ್.ಎಸ್. ರವೀಂದ್ರ, ಶಿವ್ಯಾನಾಯ್ಕ, ಉಮೇಶ್ ಮಾರವಳ್ಳಿ, ಉಳ್ಳಿದರ್ಶನ್, ಭಂಡಾರಿ ಮಾಲತೇಶ್, ರೋಷನ್, ಬಡಗಿ ಫಾಲಾಕ್ಷಪ್ಪ, ರಾಘವೇಂದ್ರನಾಯ್ಕ, ಖಾಸೀಂಸಾಬ್, ಕೃಷ್ಣೋಜಿರಾವ್, ಹುಲ್ಮಾರ್ ಶಿವು, ಮಂಜ್ಯಾನಾಯ್ಕ, ನಾಗರಾಜನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.