ADVERTISEMENT

ಜಾತಿ ಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2024, 6:05 IST
Last Updated 24 ಏಪ್ರಿಲ್ 2024, 6:05 IST
<div class="paragraphs"><p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ </p></div>

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

   

ನವದೆಹಲಿ: ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೇ 90ರಷ್ಟು ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಜಾತಿ ಗಣತಿಯ ಮೂಲಕ ಈ ಅನ್ಯಾಯವನ್ನು ತಡೆಯಬೇಕೆಂದು ನಾನು ಕರೆ ನೀಡಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ನನ್ನ ಮೇಲೆ ಮುಗಿಬಿದ್ದರು’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ದೇಶದ ಶೇ 90ರಷ್ಟು ಜನರು ಜಾತಿ ಗಣತಿ ಬಗ್ಗೆ ಅರ್ಥಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಖಂಡಿತವಾಗಿ ಜಾತಿ ಗಣತಿ ನಡೆಸುತ್ತೇವೆ. ದೇಶದಲ್ಲಿ ದೊಡ್ಡ ಉದ್ಯಮಗಳಿಗೆ ಸಹಾಯ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದೆ. ಜತೆಗೆ, ಒಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಏನು ಮಾಡಿದೆ’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

‘ರಾಮಮಂದಿರ ನಿರ್ಮಾಣವಾಗಿದೆ. ಆದರೆ, ದೇಗುಲ ನಿರ್ಮಾಣ ಕಾರ್ಯದಲ್ಲಿ ಹಿಂದುಳಿದ ಸಮುದಾಯದ ಯಾರೊಬ್ಬರು ಭಾಗವಹಿಸಿರಲಿಲ್ಲ. ಹೊಸ ಸಂಸತ್‌ ಕಟ್ಟಡ ನಿರ್ಮಾಣದಲ್ಲೂ ಅದೇ ರೀತಿ ಆಯಿತು. ಜತೆಗೆ, ರಾಮಮಂದಿರ, ಸಂಸತ್ ಭವನ ಉದ್ಘಾಟನೆಯಲ್ಲಿ ಯಾವೊಬ್ಬ ದಲಿತ, ಆದಿವಾಸಿ ಜನಾಂಗದವರು ಕಾಣಿಸಲಿಲ್ಲ’ ಎಂದು ರಾಹುಲ್ ಕಿಡಿಕಾರಿದ್ದಾರೆ.

‘ದೇಶಕ್ಕಾಗಿ ಅಂಬೇಡ್ಕರ್ ಜೀ, ಸಾವಿತ್ರಿಬಾಯಿ ಫುಲೆ ಜೀ... ಅವರಂತಹ ಕೋಟ್ಯಂತರ ಜನರು ಹಗಲಿರುಳು ದುಡಿದಿದ್ದಾರೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಆದರೆ ಅವರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹಾಗಾಗಿ ಇತಿಹಾಸವನ್ನು ನಾವು ಪರಿಷ್ಕರಿಸಬೇಕಿದೆ ಎಂದು ರಾಹುಲ್ ಕರೆ ನೀಡಿದ್ದಾರೆ.

‘ಬಿಜೆಪಿಗರು ನಿಮಗೆ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕು. ಇತಿಹಾಸವನ್ನು ಅಳಿಸುವುದೇ ಅವರ ಮುಖ್ಯ ಉದ್ದೇಶವಾಗಿದೆ’ ಎಂದು ರಾಹುಲ್ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.