ADVERTISEMENT

ಪಿತ್ರಾರ್ಜಿತ ಆಸ್ತಿ ತೆರಿಗೆ | ‘ಕೈ’–‘ಕಮಲ’ದ ಸಂಘರ್ಷ

ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರಿಕೆ ಕುರಿತು ಆರೋಪ–ಪ್ರತ್ಯಾರೋಪ

ಪಿಟಿಐ
Published 24 ಏಪ್ರಿಲ್ 2024, 21:25 IST
Last Updated 24 ಏಪ್ರಿಲ್ 2024, 21:25 IST
   

ಅಂಬಿಕಾಪುರ/ನವದೆಹಲಿ: ಕಾಂಗ್ರೆಸ್‌ ಪಕ್ಷವು ಜನರ ಆಸ್ತಿ ಕಸಿದುಕೊಳ್ಳುವ ಬಗೆಗಿನ ತಮ್ಮ ಆರೋಪಕ್ಕೆ ಹೊಸ ರೂಪ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪಕ್ಷವು ದೇಶದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರಿ, ಜನರು ಮತ್ತು ಅವರ ಮಕ್ಕಳ ಹಕ್ಕು ಕಸಿದುಕೊಳ್ಳಲು ಹೊರಟಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಸ್ಯಾಮ್ ಪಿತ್ರೋಡಾ ಅವರು ಅಮೆರಿಕದಲ್ಲಿ ನೀಡಿದ್ದರೆನ್ನಲಾದ ಹೇಳಿಕೆಯನ್ನು ಆಧರಿಸಿ ಮೋದಿ, ಬುಧವಾರ ವಾಗ್ದಾಳಿ ಮುಂದುವರಿಸಿದರು.

ಛತ್ತೀಸಗಢದ ಸುರ್ಗುಜ ಜಿಲ್ಲಾ ಕೇಂದ್ರವಾದ ಅಂಬಿಕಾಪುರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಅಪಾಯಕಾರಿ ಉದ್ದೇಶಗಳು ಒಂದೊಂದಾಗಿ ಹೊರಬರುತ್ತಿವೆ. ಈಗ ಅವರು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸುವುದಾಗಿ ಹೇಳುತ್ತಿದ್ದಾರೆ. ಅಧಿಕಾರಕ್ಕಾಗಿ ದೇಶವನ್ನು ನಾಶ ಮಾಡುವುದೇ ಕಾಂಗ್ರೆಸ್ ಚರಿತ್ರೆಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಶಾಹಿ’ ಪರಿವಾರದ ‘ಶೆಹಜಾದ’ನ ಸಲಹೆಗಾರ ಮತ್ತು ಅವರ ತಂದೆಯ ಸಲಹೆಗಾರರೂ ಆಗಿದ್ದ ವ್ಯಕ್ತಿಯೊಬ್ಬರು ಮಧ್ಯಮ ವರ್ಗ, ಶ್ರಮಿಕರ ಮೇಲೆ ಹೆಚ್ಚು ತೆರಿಗೆ ವಿಧಿಸಬೇಕು ಎಂದಿದ್ದಾರೆ’ ಎಂದು ಸ್ಯಾಮ್ ಪಿತ್ರೋಡಾ ಹಾಗೂ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ಕುಟುಕಿದರು.

‘ಕಾಂಗ್ರೆಸ್ ಜನ ಅವರ ಪೋಷಕರಿಂದ ಪಿತ್ರಾರ್ಜಿತವಾಗಿ ಪಡೆದ ಆಸ್ತಿ ಮೇಲೆ ತೆರಿಗೆ ವಿಧಿಸಲಿದೆ. ಅದರ ‘ಪಂಜಾ’ (ಹಸ್ತ) ನಿಮ್ಮ ಮಕ್ಕಳಿಂದ ಆಸ್ತಿ ಕಸಿದುಕೊಳ್ಳಲಿದೆ’ ಎಂದು ಹೇಳಿದರು.

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಡಿಬರಹವನ್ನು ಬದಲಾಯಿಸಿದ ಮೋದಿ, ‘ಕಾಂಗ್ರೆಸ್ ಕಾ ಮಂತ್ರ್ ಹೆ ಕಾಂಗ್ರೆಸ್ ಕಿ ಲೂಟ್ ಜಿಂದಗೀ ಕೆ ಸಾಥ್ ಬಿ, ಜಿಂದಗೀ ಕೆ ಬಾದ್ ಬಿ’ (ಜನ ಬದುಕಿದ್ದಾಗಲೂ, ಸತ್ತ ಮೇಲೆಯೂ ಅವರನ್ನು ಸುಲಿಯುವುದೇ ಕಾಂಗ್ರೆಸ್ ಮಂತ್ರ) ಎಂದರು.

‘ನೀವು ಬದುಕಿರುವವರೆಗೆ ಕಾಂಗ್ರೆಸ್ ನಿಮ್ಮ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತದೆ. ನೀವು ಸತ್ತ ನಂತರವೂ ಪಿತ್ರಾರ್ಜಿತ ತೆರಿಗೆಯ ಹೊರೆಯನ್ನು ಹೇರುತ್ತದೆ. ಅವರು ನಿಮ್ಮ ಆಸ್ತಿ ಮತ್ತು ನಿಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಮಧ್ಯಪ್ರದೇಶದ ರ್‍ಯಾಲಿಯಲ್ಲಿಯೂ ಅವರು ಇಂಥವೇ ಆರೋಪಗಳನ್ನು ಮಾಡಿದ್ದರು.

‘ಭಾರತವು ‘ಆತ್ಮನಿರ್ಭರ’ವಾದರೆ (ಸ್ವಾವಲಂಬಿ), ತಮ್ಮ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಅರಿತಿರುವ ಕೆಲವು ಶಕ್ತಿಗಳಿಗೆ ದೇಶದಲ್ಲಿ ಕಾಂಗ್ರೆಸ್ ಮತ್ತು ‘ಇಂಡಿ’ ಕೂಟದ ದುರ್ಬಲ ಸರ್ಕಾರ ಬೇಕು’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಕಣ್ಣು ನಿಮ್ಮ ಮೀಸಲಾತಿ ಮೇಲಷ್ಟೇ ಅಲ್ಲ, ನಿಮ್ಮ ಸಂಪಾದನೆ, ಮನೆ, ಅಂಗಡಿ, ಜಮೀನಿನ ಮೇಲೂ ಇದೆ’ ಎಂದು ಹೇಳಿದ ಮೋದಿ, ‘ನಿಮ್ಮ ಆಸ್ತಿ ಕಸಿದುಕೊಂಡು ಅವರು ಯಾರಿಗೆ ಹಂಚುತ್ತಾರೆ ಗೊತ್ತಾ’ ಎಂದು ಕೇಳಿದಾಗ ಕಾರ್ಯಕ್ರಮದಲ್ಲಿ ಇದ್ದವರು ‘ಗೊತ್ತಿದೆ’ ಎಂದು ಕೂಗಿದರು.

ಕಾಂಗ್ರೆಸ್ ತಂತ್ರ ಏನೆಂದರೆ ಬದುಕಿರುವಾಗ–ತೆರಿಗೆ. ಸತ್ತ ಮೇಲೆ–ತೆರಿಗೆ (ಪಿತ್ರಾರ್ಜಿತ ಆಸ್ತಿ). ಕಾಂಗ್ರೆಸ್‌ ಪಕ್ಷವು ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡಿದೆ.
–ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ಕಾಂಗ್ರೆಸ್‌ನ ಓಲೈಕೆ ರಾಜಕಾರಣ ಬಹಿರಂಗಗೊಂಡಿದೆ. ಬಹುಸಂಖ್ಯಾತರ ಆಸ್ತಿ ಕಸಿದುಕೊಂಡು ಅದನ್ನು ಅಲ್ಪಸಂಖ್ಯಾತರಿಗೆ ಹಂಚುವ ಪಕ್ಷದ ಉದ್ದೇಶವನ್ನು ಮತ್ತೆ ದೃಢಪಡಿಸಿದ್ದಾರೆ.
–ಅಮಿತ್ ಶಾ, ಗೃಹ ಸಚಿವ
ಕಾಂಗ್ರೆಸ್ ನಾಯಕರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ. ಇದು ಅವರ ಮೇಲೆ ಪರಿಣಾಮ ಬೀರುತ್ತಿದೆ. ಜೂನ್ ನಾಲ್ಕರಂದು (ಫಲಿತಾಂಶದ ದಿನ) ಕಾಂಗ್ರೆಸ್ ಅದರ ಸಾರ್ವಕಾಲಿಕ ಕನಿಷ್ಠ ಮಟ್ಟ ಕಾಣಲಿದೆ. 
–ಚಿರಾಗ್ ಪಾಸ್ವಾನ್, ಲೋಕ ಜನಶಕ್ತಿ ಮುಖಂಡ

ಪಿತ್ರೋಡಾ ಸ್ಪಷ್ಟೀಕರಣ

ನವದೆಹಲಿ (ಪಿಟಿಐ): ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಅಮೆರಿಕದಲ್ಲಿ ಸಂಪತ್ತಿನ ಮರುಹಂಚಿಕೆಯ ಬಗ್ಗೆ ಚರ್ಚಿಸುವ ವೇಳೆ ಪಿತ್ರಾರ್ಜಿತ ಆಸ್ತಿ ತೆರಿಗೆಯ ಕುರಿತು ಮಾತನಾಡಿದ್ದರು.

ತಮ್ಮ ಹೇಳಿಕೆಯ ಸುತ್ತ ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ಪಿತ್ರೋಡಾ ಸ್ಪಷ್ಟೀಕರಣ ನೀಡಿದ್ದಾರೆ.

‘ಮೋದಿ ಅವರು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಹರಡುತ್ತಿರುವ ಸುಳ್ಳುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ನನ್ನ ಹೇಳಿಕೆಯನ್ನು ‘ಗೋದಿ ಮಾಧ್ಯಮ’ ತಿರುಚಿದೆ. ಮಂಗಳಸೂತ್ರ ಮತ್ತು ಚಿನ್ನ ಕಸಿದುಕೊಳ್ಳುವ ಬಗ್ಗೆ ಮೋದಿ ಹೇಳಿಕೆಗಳು ಅವಾಸ್ತವಿಕವಾಗಿವೆ’ ಎಂದು ಹೇಳಿದ್ದಾರೆ.

ನಾನು ಅಮೆರಿಕದ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಅಮೆರಿಕದಲ್ಲಿ ಟಿ.ವಿಯ ಚರ್ಚೆಯಲ್ಲಿ ನಿದರ್ಶನವನ್ನಾಗಿ ಮಾತ್ರ ಪ್ರಸ್ತಾಪಿಸಿದ್ದೆ. ನಾನು ಸತ್ಯಸಂಗತಿಗಳನ್ನು ಪ್ರಸ್ತಾಪಿಸಬಾರದೇ? ಇಂಥ ವಿಚಾರಗಳ ಬಗ್ಗೆ ಜನ ಚರ್ಚೆ, ಸಂವಾದ ಮಾಡಬೇಕು ಎಂದು ಹೇಳಿದ್ದೆ. ನನ್ನ ಮಾತಿಗೂ ಕಾಂಗ್ರೆಸ್ ಪಕ್ಷದ ನೀತಿಗೂ ಸಂಬಂಧವಿಲ್ಲ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಶೇ 55ರಷ್ಟು ಕಸಿದುಕೊಳ್ಳುತ್ತಾರೆ ಎಂದು ಹೇಳಿದ್ದು ಯಾರು? ಇಂಥದ್ದನ್ನು ಭಾರತದಲ್ಲಿ ಜಾರಿ ಮಾಡಬೇಕು ಎಂದು ಹೇಳಿದ್ದು ಯಾರು? ಬಿಜೆಪಿ ಮತ್ತು ಮಾಧ್ಯಮಗಳು ಏಕೆ ಕಂಗಾಲಾಗಿವೆ’ ಎಂದು ಪ್ರಶ್ನಿಸಿದ್ದಾರೆ.

‘ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರಲು ಹೊರಟಿದ್ದ ಬಿಜೆಪಿ’

ನವದೆಹಲಿ: ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸುವ ಯಾವುದೇ ಆಲೋಚನೆಯನ್ನು ಕಾಂಗ್ರೆಸ್ ಹೊಂದಿಲ್ಲ. ವಾಸ್ತವವಾಗಿ, ರಾಜೀವ್ ಗಾಂಧಿ 1985ರಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ರದ್ದುಪಡಿಸಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೋದಿ ಸರ್ಕಾರ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಹೇರಲು ಮುಂದಾಗಿತ್ತು’ ಎಂದು ಆರೋಪಿಸಿದ್ದಾರೆ.

‘ವಾಸ್ತವಾಂಶ 1: ಜಯಂತ್ ಸಿನ್ಹ, ಆಗಿನ ಹಣಕಾಸು ರಾಜ್ಯ ಸಚಿವ, ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಲು ಬಯಸುವುದಾಗಿ 2014ರಲ್ಲಿ ಹೇಳಿದ್ದರು.

ವಾಸ್ತವಾಂಶ 2: 2017ರಲ್ಲಿ, ಮೋದಿ ಸರ್ಕಾರವು ಪಿತ್ರಾರ್ಜಿತ ಆಸ್ತಿ ತೆರಿಗೆಯ ಮರುಜಾರಿಗೆ ಮುಂದಾಗಿರುವುದಾಗಿ ವರದಿಗಳು ಬಂದಿದ್ದವು.

ವಾಸ್ತವಾಂಶ 3: 2018ರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳಿಗೆ ದೊಡ್ಡ ಮಟ್ಟದಲ್ಲಿ ದಾನ ನೀಡುವುದನ್ನು ಪ್ರಚೋದಿಸುವ ಪಶ್ಚಿಮದ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಶ್ಲಾಘಿಸಿದ್ದರು.

ವಾಸ್ತವಾಂಶ 4: 2019ರ ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರವು ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಪರಿಚಯಿಸಲಿದೆ ಎಂದು ವರದಿಗಳು ಬಂದಿದ್ದವು’ ಎಂದು ಉಲ್ಲೇಖಿಸಿದ್ದಾರೆ.

‘ಮೋದಿಯವರೇ, ಇದರ ಬಗ್ಗೆ ನಿಮ್ಮ ನಿಲುವೇನು’ ಎಂದು ಪ್ರಶ್ನಿಸಿರುವ ಅವರು, ತಮ್ಮ ಆರೋಪ ಗಳಿಗೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಪೋಸ್ಟ್ ಮಾಡಿದ್ದಾರೆ. 

‘ಪಿತ್ರೋಡಾ ಅವರ ದೃಷ್ಟಿಕೋನವು ಸದಾ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತದೆ ಎಂದು ಅರ್ಥವಲ್ಲ. ಹೆಚ್ಚಿನ ಸಲ ಹಾಗೆ ಇರುವುದಿಲ್ಲ. ಪಿತ್ರೋಡಾ ಅವರ ಹೇಳಿಕೆಗಳನ್ನು ವೈಭವೀಕರಿಸುವುದು ನರೇಂದ್ರ ಮೋದಿ ಅವರ ದುರುದ್ದೇಶಪೂರಿತ ಚೇಷ್ಟೆಯಾಗಿದೆ.’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.