ADVERTISEMENT

ಲೋಕಸಭೆ ಚುನಾವಣೆ: ಜಮ್ಮುವಿನಲ್ಲಿ ಬಿಜೆಪಿಯ ಶರ್ಮಾ, ಕಾಂಗ್ರೆಸ್‌ನ ಭಲ್ಲಾ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 19:30 IST
Last Updated 25 ಏಪ್ರಿಲ್ 2024, 19:30 IST
<div class="paragraphs"><p>ಜುಗಲ್‌ ಕಿಶೋರ್ ಶರ್ಮಾ,&nbsp;ರಮಣ್‌ ಭಲ್ಲಾ</p></div>

ಜುಗಲ್‌ ಕಿಶೋರ್ ಶರ್ಮಾ, ರಮಣ್‌ ಭಲ್ಲಾ

   

ಜುಗಲ್‌ ಕಿಶೋರ್ ಶರ್ಮಾ: ಬಿಜೆಪಿ

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಜಮ್ಮು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಈ ಬಾರಿಯೂ ಜುಗಲ್‌ ಕಿಶೋರ್ ಶರ್ಮಾ ಅವರನ್ನೇ ಸ್ಪರ್ಧೆಗಿಳಿಸಿದೆ. 2019ರ ಚುನಾವಣೆಯಲ್ಲಿ ಶರ್ಮಾ ಅವರು 3,02,875 ಮತಗಳ ಭಾರಿ ಅಂತರದಿಂದ ಕಾಂಗ್ರೆಸ್‌ನ ರಮಣ್‌ ಭಲ್ಲಾ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

ಶರ್ಮಾ ಅವರು ಈ ಹಿಂದೆ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿರಿಸಿ, ಶರ್ಮಾ ಅವರು ಮತಯಾಚಿಸಿದ್ದಾರೆ.

ಆರ್‌ಎಸ್‌ಎಸ್‌ ಹಿನ್ನೆಲೆಯ ಶರ್ಮಾ ಅವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.

ರಮಣ್‌ ಭಲ್ಲಾ: ಕಾಂಗ್ರೆಸ್

ಜುಗಲ್‌ ಕಿಶೋರ್ ಶರ್ಮಾ ಅವರ ವಿರುದ್ಧ ಸೆಣಸಲು ‘ಇಂಡಿಯಾ’ ಒಕ್ಕೂಟವು ಕಾಂಗ್ರೆಸ್‌ನ ರಮಣ್‌ ಭಲ್ಲಾ ಅವರನ್ನು ಅಖಾಡಕ್ಕಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪಕ್ಷಗಳಾದ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿಯು ಬೆಂಬಲ ಸೂಚಿಸಿರುವುದು ಭಲ್ಲಾ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.

ಭಲ್ಲಾ ಅವರು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ಲೋಪಗಳು, ನಿರುದ್ಯೋಗ ಸಮಸ್ಯೆ ಮೊದಲಾದವುಗಳನ್ನು ಭಲ್ಲಾ ಅವರು ಪ್ರಮುಖ ಚುನಾವಣಾ ವಿಷಯವಾಗಿಸಿದ್ದಾರೆ. ಈ ಬಾರಿ ಭಲ್ಲಾ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್‌ ಮುಖಂಡರು ಭಲ್ಲಾ ಪರವಾಗಿ ಕ್ಷೇತ್ರದಲ್ಲಿ ರೋಡ್‌ ಶೋಗಳನ್ನು ನಡೆಸಿದ್ದಾರೆ.

ಗುಲಾಂ ನಬಿ ಆಜಾದ್‌ ಅವರ ಡೆಮಾಕ್ರಟಿಕ್ ಪ್ರೋಗ್ರೆಸಿವ್‌ ಆಜಾದ್‌ ಪಕ್ಷವು (ಡಿಪಿಎಪಿ) ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಭಲ್ಲಾ ಅವರಿಗೆ ಅನುಕೂಲವಾಗಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಮಣ್‌ ಭಲ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.