ADVERTISEMENT

ಚಿತ್ರ ನಟ ‘ಕಲಾತಪಸ್ವಿ’ ರಾಜೇಶ್ ನಿಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 5:41 IST
Last Updated 19 ಫೆಬ್ರುವರಿ 2022, 5:41 IST
ರಾಜೇಶ್‌
ರಾಜೇಶ್‌   

ಬೆಂಗಳೂರು: ಚಿತ್ರ ನಟ ‘ಕಲಾತಪಸ್ವಿ’ ರಾಜೇಶ್ (82) ಅವರು ಬೆಳಗಿನ ಜಾವ 2.30ರ ಸುಮಾರಿಗೆ ನಿಧನರಾದರು. ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ಅವರ ಅಳಿಯ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

ಪಾರ್ಥಿವ ಶರೀರವನ್ನು ಇಂದು ಸಂಜೆ 6.30ರವರೆಗೆ ವಿದ್ಯಾರಣ್ಯಪುರದ ಅವರ ನಿವಾಸದಲ್ಲಿ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಶ್ರೀನಿ ಅಭಿನಯದ ‘ಓಲ್ಡ್‌ಮಾಂಕ್’ ಚಿತ್ರದಲ್ಲಿ ಇತ್ತೀಚೆಗೆ ಅವರು ಅಭಿನಯಿಸಿದ್ದರು. ಆರೋಗ್ಯದ ಕಾರಣದಿಂದ ಕೆಲಕಾಲ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

ADVERTISEMENT

ರಾಜೇಶ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ರಂಗಭೂಮಿ ನಟನೆಯ ವೇಳೆ ಅವರು ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಕಟ್ಟಿದ್ದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಈ ನಡುವೆ ಕೆಲಕಾಲ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಮಾಡಿದ್ದರು.

1960ರ ದಶಕದಲ್ಲಿ ಅವರು ‘ವೀರ ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. 1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದ ಬಳಿಕ ಅವರು ತಮ್ಮ ಹೆಸರನ್ನು ಹೆಸರು ರಾಜೇಶ್‌ ಎಂದು ಬದಲಾಯಿಸಿಕೊಂಡರು. ಈ ಚಿತ್ರಕ್ಕೆ ಅವರು ಹಿನ್ನೆಲೆ ಗಾಯಕರೂ ಆಗಿದ್ದರು.
‘ಕಪ್ಪು ಬಿಳುಪು’, ‘ಎರಡು ಮುಖ’, ‘ಪುಣ್ಯ ಪುರುಷ’, ‘ಕಾಣಿಕೆ’, ‘ಬೃಂದಾವನ’, ‘ಸುಖ ಸಂಸಾರ’, ‘ದೇವರ ಮಕ್ಕಳು’, ‘ಪೂರ್ಣಿಮಾ’, ‘ನಮ್ಮ ಬದುಕು’, ‘ಭಲೇ ಅದೃಷ್ಟವೋ ಅದೃಷ್ಟ’, ‘ಭಲೇ ಭಾಸ್ಕರ’, ‘ಹೆಣ್ಣು ಹೊನ್ನು ಮಣ್ಣು’, ‘ವಿಷ ಕನ್ಯೆ’, ‘ಕ್ರಾಂತಿ ವೀರ’, ‘ಬಿಡುಗಡೆ’, ‘ಊರ್ವಶಿ’, ‘ದೇವರ ಗುಡಿ’, ‘ಕಾವೇರಿ’, ‘ಬದುಕು ಬಂಗಾರವಾಯಿತು’, ‘ದೇವರ ದುಡ್ಡು’, ‘ಸೊಸೆ ತಂದ ಸೌಭಾಗ್ಯ’, ‘ಚದುರಿದ ಚಿತ್ರಗಳು’, ‘ವಸಂತ ನಿಲಯ’, ‘ಕಲಿಯುಗ’, ‘ದೇವರ ಮನೆ’, ‘ತವರು ಮನೆ’, ‘ತವರು ಮನೆ ಉಡುಗೊರೆ’ ಸೇರಿದಂತೆ ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರು ನೀಡಿರುವ ಅಪಾರ ಕೊಡುಗೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ರಾಜೇಶ್‌ ಪುತ್ರಿ ಆಶಾರಾಣಿ (ನಟ ಅರ್ಜುನ್‌ ಸರ್ಜಾ ಪತ್ನಿ) ‘ರಥಸಪ್ತಮಿ’ ಚಿತ್ರದಲ್ಲಿ ನಾಯಕಿಯಾಗಿದ್ದರು. ಆಶಾರಾಣಿ– ಅರ್ಜುನ್‌ ಸರ್ಜಾ ದಂಪತಿ ಹಾಗೂ ಪುತ್ರಿಐಶ್ವರ್ಯಾ ಸರ್ಜಾ ಕೂಡಾ ನಟಿ.

ರಾಜೇಶ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.

‘ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟುಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಬೊಮ್ಮಾಯಿ ಅವರು ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

‘ಕನ್ನಡ ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ರಾಜೇಶ್ ಅವರು ನಿಧನರಾದ ಸುದ್ದಿ ತೀವ್ರ ಆಘಾತ ತಂದಿದೆ. 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ರಾಜೇಶ್ ಅವರ ನಿಧನ ಕನ್ನಡ ಕಲಾ ರಂಗಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ಆರಗ ಜ್ಞಾನೇಂದ್ರ ಸಂದೇಶ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.