ADVERTISEMENT

ಆನಂದ ಭೋಜನ!

ರಸಾಸ್ವಾದ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2016, 19:55 IST
Last Updated 11 ಮಾರ್ಚ್ 2016, 19:55 IST
ಚಿಕನ್‌ ಹಾಗೂ ಮಟನ್‌ ಬಿರಿಯಾನಿ
ಚಿಕನ್‌ ಹಾಗೂ ಮಟನ್‌ ಬಿರಿಯಾನಿ   

‘ಭೋಜನದಲ್ಲಿ ಆನಂದ’ ಎಂಬ ತತ್ವದೊಂದಿಗೆ ಅಚ್ಚುಕಟ್ಟಾದ ಆಂಧ್ರ ಶೈಲಿಯ ತಿನಿಸುಗಳನ್ನು ಒದಗಿಸುತ್ತಾ ಬಂದಿರುವ ನಂದನ ಪ್ಯಾಲೆಸ್‌ ಈಗ ಜೆ.ಪಿ.ನಗರದಲ್ಲಿ ತನ್ನ ಹೊಸ ಶಾಖೆ ತೆರೆದಿದೆ. ಮಟನ್‌ ಬೋನ್‌ ಸೂಪ್‌, ಆಂಧ್ರ ರಾಯಲು (ಸಿಗಡಿ ಖಾದ್ಯ), ಅಮರಾವತಿ ಬೋನ್‌ಲೆಸ್‌ ಚಿಕನ್‌ ಹಾಗೂ ಹೈದರಾಬಾದಿ ದಮ್‌ ಬಿರಿಯಾನಿ ಈ ರೆಸ್ಟೊರೆಂಟ್‌ನ ಸಿಗ್ನೇಚರ್‌ ತಿನಿಸುಗಳು.

‘ನಂದನ ಪ್ಯಾಲೆಸ್‌ ಆಂಧ್ರ ಶೈಲಿಯ ತಿನಿಸುಗಳಿಗೆ ಹೆಸರುವಾಸಿ. ಹೊಸ ರೆಸ್ಟೊರೆಂಟ್‌ನಲ್ಲಿ ನಾವು ಕೆಲವು ಹೊಸ ತಿನಿಸುಗಳನ್ನು ಪರಿಚಯಿಸಿದ್ದೇವೆ. ಆಂಧ್ರ ಶೈಲಿಯಲ್ಲಿ ನೀಡುವ ಆಂಧ್ರ ರಾಯಲು ಸಿಗಡಿಪ್ರಿಯರು ರುಚಿ ನೋಡಬೇಕಾದ ಖಾದ್ಯ. ಪೂರ್ವ ಗೋದಾವರಿ, ವೈಜಾಗ್‌ ರುಚಿಯಲ್ಲಿಯೇ ನಾವು ಆ ಖಾದ್ಯವನ್ನು ಒದಗಿಸುತ್ತಿದ್ದೇವೆ. ಆ ಭಾಗದ ಜನರು ಸಿಗಡಿ ಖಾದ್ಯ ಮಾಡಲು ಏನೇನು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ ಎಂಬುದನ್ನು ನಮ್ಮ ಬಾಣಸಿಗರ ತಂಡ ತಿಳಿದುಕೊಂಡು ಬಂದು ಅದರಂತೆ ಮಾಡಿಕೊಡುತ್ತಿದ್ದಾರೆ.

ಗೋದಾವರಿಯಲ್ಲಿ ಆಡಿ ಬೆಳೆದ ಪುಟ್ಟ ಸಿಗಡಿಗಳನ್ನು ಸವಿಯುವ ಅವಕಾಶ ಈ ತಿನಿಸಿನಿಂದ ಸಾಧ್ಯವಿದೆ. ಸಣ್ಣ ಪ್ರಾನ್‌ಗಳಾದ್ದರಿಂದ ಖಾರ ಮಸಾಲೆ ಚೆನ್ನಾಗಿ ಹತ್ತಿರುತ್ತದೆ. ಸಿಗಡಿಪ್ರಿಯರಿಗೆ ಇಷ್ಟವಾಗುವ ಈ ತಿನಿಸು ನಮ್ಮ ಸಿಗ್ನೇಚರ್‌ ಡಿಷ್‌ ಕೂಡ ಹೌದು. ಇದನ್ನು ಬೇರೆಲ್ಲೂ  ಸವಿಯಲು ಸಾಧ್ಯವಿಲ್ಲ’ ಎನ್ನುತ್ತಾರೆ ರೆಸ್ಟೊರೆಂಟ್‌ನ ವ್ಯವಸ್ಥಾಪಕ ಲಕ್ಷ್ಮಣ್‌.

‘ಟ್ವಿಸ್ಟ್‌ ಆಫ್‌ ಟೇಸ್ಟ್‌’ ಹೆಸರಿನಲ್ಲಿ ಈ ರೆಸ್ಟೊರೆಂಟ್‌ ಹಲವು ಹೊಸ ಕಾಂಬಿನೇಷನ್‌ ಅನ್ನು ಆಹಾರಪ್ರಿಯರಿಗೆ ಒದಗಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ನುಗ್ಗೆಕಾಯಿ ಚಿಕನ್‌ ಕರಿ, ಅವರೆಕಾಯಿ ಚಿಕನ್‌ ಕರಿ ರುಚಿಯನ್ನು ನೆನೆಯಬಹುದು. ಆಂಧ್ರ ಮಸಾಲೆಯಲ್ಲಿ ತಯಾರಾಗಿರುವ ಈ ಕರಿಗಳು ಅನ್ನಕ್ಕೆ ಅತ್ಯುತ್ತಮ ಕಾಂಬಿನೇಷನ್‌. ಒಂದು ಕರಿ ಜೊತೆಗೆ ಒಂದು ಬೌಲ್‌ ಅನ್ನ ತಿಂದರೆ ಹೊಟ್ಟೆ ಸಂತೃಪ್ತಗೊಳ್ಳುತ್ತದೆ.

‘ಅಮರಾವತಿ ಬೋನ್‌ಲೆಸ್‌ ಚಿಕನ್‌ ಮತ್ತು ಹೈದರಾಬಾದ್‌ ದಮ್‌ ಬಿರಿಯಾನಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಲವರು ಒಂದು ಪ್ಲೇಟ್‌ ರುಚಿ ನೋಡಿ ಇನ್ನೆರಡು ಪ್ಲೇಟ್‌ ಅನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಮಟನ್‌ಪ್ರಿಯರಿಗಾಗಿ ಆಂಧ್ರ ಶೈಲಿಯ ಮಟನ್‌ ನಲ್ಲಿ ರೋಸ್ಟ್‌, ಮಟನ್‌ ಇಗುರು (ಸೆಮಿ ಡ್ರೈ) ಒದಗಿಸುತ್ತಿದ್ದೇವೆ. ಜೆ.ಪಿ.ನಗರ ಭಾಗದಲ್ಲಿ ಹೈದರಾಬಾದಿ ಬಿರಿಯಾನಿಗೆ ತುಂಬ ಬೇಡಿಕೆ ಇದೆ. ನಾವು ಬಿರಿಯಾನಿಯನ್ನು ತಯಾರಿಸಲು ಕಟ್ಟಿಗೆ ಬಳಸುತ್ತಿದ್ದೇವೆ. ಹಾಗಾಗಿ, ನೈಸರ್ಗಿಕ ಸುವಾಸನೆಯ ಜೊತೆಗೆ ಒಳ್ಳೆ ರುಚಿಯೂ ನಮ್ಮ ಬಿರಿಯಾನಿಯಲ್ಲಿದೆ.

ನಾಟಿ ಕೋಳಿ ಬಿರಿಯಾನಿ ವಾರದಲ್ಲಿ ಮೂರು ದಿನ ಲಭ್ಯವಿದೆ’ ಎನ್ನುತ್ತಾರೆ ನಂದನ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌.ರವಿಚಂದರ್‌. ಸಸ್ಯಾಹಾರಿಗಳಿಗೂ ಇಲ್ಲಿ ವಿಪುಲ ಆಯ್ಕೆಗಳಿವೆ. ಇಲ್ಲಿನ ಬಾಣಸಿಗರ ತಂಡ ವೆಜ್‌ ಪ್ರಿಯರಿಗಾಗಿ ಹಲವು ಹೊಸ ಹೊಸ ರೆಸಿಪಿಗಳನ್ನು ಪರಿಚಯಿಸಿದ್ದಾರೆ. ಕ್ಯಾರೆಟ್‌ 65, ಕ್ಯಾರೆಟ್‌ ಪೆಪ್ಪರ್‌ ಡ್ರೈ, ಕ್ಯಾರೆಟ್‌ ಪುದಿನಾ ಡ್ರೈ ಹೀಗೆ ಒಂದೊಂದು ತರಕಾರಿಯಿಂದಲೂ ನಾಲ್ಕೈದು ಆಯ್ಕೆಗಳನ್ನು ಒದಗಿಸಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಆಂಧ್ರ ಮೀಲ್ಸ್‌ ಲಭ್ಯವಿದೆ.

₹150 ಬೆಲೆಯ ಮೀಲ್ಸ್‌ನಲ್ಲಿ ಅನ್ನ, ತುಪ್ಪ, ಗನ್‌ಪೌಡರ್‌, ಉಪ್ಪಿನಕಾಯಿ, ಗುಂಗುರ ಚಟ್ನಿ, ಪಪ್ಪು, ಸಾಂಬಾರ್‌, ರಸಂ, ಡ್ರೈ ವೆಜಿಟೇಬಲ್ಸ್‌ ಅನ್ನು ಅನಿಯಮಿತವಾಗಿ ನೀಡುತ್ತಾರೆ. ನಂದನಾ ಪ್ಯಾಲೆಸ್‌ ಮುಖ್ಯವಾಗಿ ಆಂಧ್ರ ತಿನಿಸುಗಳನ್ನು ಒದಗಿಸಿದರೂ ಕೂಡ ನಾರ್ಥ್‌ ಇಂಡಿಯನ್‌ ಹಾಗೂ ಚೈನೀಸ್‌ ಪ್ರಿಯರಿಗೆ ಇಷ್ಟವಾಗುವಂತಹ  ಆಯ್ಕೆಯನ್ನು ಒದಗಿಸಿದೆ.ಆರಂಭಿಕ ಕೊಡುಗೆಯಾಗಿ ಈ ರೆಸ್ಟೊರೆಂಟ್‌ ತನ್ನ ಗ್ರಾಹಕರಿಗೆ ವೆಲ್‌ಕಂ ಬ್ಯಾಕ್‌ ಕೂಪನ್‌ ನೀಡುತ್ತಿದೆ.

ಆ ಪ್ರಕಾರ ಮುಂದಿನ ಬಾರಿ ಹೋಟೆಲ್‌ಗೆ ಬಂದವರಿಗೆ ಬಿಲ್‌ನಲ್ಲಿ ಶೇ 15 ಡಿಸ್ಕೌಂಟ್‌ ದೊರೆಯಲಿದೆ. ಮತ್ತೊಮ್ಮೆ ಬಂದವರಿಗೆ ಡೆಸರ್ಟ್‌ ಅನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೇ ಪ್ರಮೋಷನ್‌ ದೃಷ್ಟಿಯಿಂದ ಈಗ ಹೋಟೆಲ್‌ಗೆ ಊಟಕ್ಕೆ ಬರುವವರಿಗೆ ಕಾಂಪ್ಲಿಮೆಂಟರಿಯಾಗಿ ಎಗ್‌ ಫ್ರೈ ಹಾಗೂ ಗೋಬಿ ಫ್ರೈ ನೀಡುತ್ತಿದ್ದಾರೆ. ಇದು ಈ ತಿಂಗಳ ಕೊನೆಯವರೆಗೆ ಚಾಲ್ತಿಯಲ್ಲಿರುತ್ತದೆ. ಆಂಧ್ರ ಶೈಲಿ ಇಷ್ಟಪಡುವವರಿಗೆ ಇಲ್ಲಿ ಬೊಂಬಾಟ್‌ ಭೋಜನವಂತೂ ಸಿಗುತ್ತದೆ. 

ರೆಸ್ಟೊರೆಂಟ್‌: ನಂದನ ಪ್ಯಾಲೆಸ್‌
ಶೈಲಿ: ಆಂಧ್ರ
ಸಿಗ್ನೇಚರ್‌ ತಿನಿಸುಗಳು: ಮಟನ್‌ ಬೋನ್‌, ಸೂಪ್‌, ಅಮರಾವತಿ ಚಿಕನ್‌
ಇಬ್ಬರಿಗೆ ತಗಲುವ ವೆಚ್ಚ: ₹800
ಹೋಂ ಡೆಲಿವರಿ: ಇದೆ (5 ಕಿ.ಮೀ. ಒಳಗೆ)
ಟೇಬಲ್‌ ಕಾಯ್ದಿರಿಸಲು: 7898842094, 26547222, 26547555
ಸ್ಥಳ: ಮೊದಲನೇ ಮಹಡಿ, ಫುಡ್‌ವರ್ಲ್ಡ್‌ ಎದುರು, ಐಸಿಐಸಿಐ ಬ್ಯಾಂಕ್‌ ಮೇಲೆ, 24ನೇ ಮುಖ್ಯರಸ್ತೆ, ಜೆ.ಪಿ.ನಗರ 1ನೇ ಹಂತ, ರಾಘವೇಂದ್ರ ಮಠ ಸರ್ಕಲ್‌ ಬಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.