ADVERTISEMENT

ಬಾಣಸಿಗ ಸನ್ನಿಯ ಅಡುಗೆ ವೈವಿಧ್ಯ

ನಳಪಾಕ

ಸತೀಶ ಬೆಳ್ಳಕ್ಕಿ
Published 11 ಮಾರ್ಚ್ 2016, 19:55 IST
Last Updated 11 ಮಾರ್ಚ್ 2016, 19:55 IST
-ಪೇಶಾವರಿ ಮುರ್ಗ್‌
-ಪೇಶಾವರಿ ಮುರ್ಗ್‌   

ಬಾಣಸಿಗ ಸತ್ಯನಾರಾಯಣ ಕೇದಾರನಾಥ್‌ ಪಾಕಶಾಸ್ತ್ರಜ್ಞರ ವಲಯದಲ್ಲಿ ಸನ್ನಿ ಎಂದೇ ಜನಪ್ರಿಯರು. ಇವರು ಕೇಟರಿಂಗ್ ಕೋರ್ಸ್ ಅನ್ನು 1986ರಲ್ಲಿ ಪೂರೈಸಿ ಬೆಂಗಳೂರಿನ ತಾಜ್ ರೆಸಿಡೆನ್ಸಿಯಲ್ಲಿ ತಮ್ಮ ಅಡುಗೆ ವೃತ್ತಿಯನ್ನು ಬೇಕರಿ ಕಿಚನ್‌ನಿಂದ ಆರಂಭಿಸಿದರು. ರೂಮ್ ಡೈನಿಂಗ್, ಕಾಫಿ ಶಾಪ್ ಮತ್ತು ಬ್ಯಾಂಕ್ವೆಟ್ ಹಾಲ್‌ನಂತಹ ವಿವಿಧ ಕಿಚನ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಏರೋ ಶೋ, ವಿದೇಶಿ ರಾಕ್ ಬ್ಯಾಂಡ್‌ಗಳು, ಹೈ ಪ್ರೊಫೈಲ್ ಅತಿಥಿಗಳಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ವಾರೆನ್ ಬಫೆಟ್ ಮೊದಲಾದವರಿಗೆ ತಮ್ಮ ತಿನಿಸುಗಳ ಕೈರುಚಿ ಉಣಬಡಿಸಿರುವ ಸನ್ನಿ 2001ರಲ್ಲಿ ಚೆನ್ನೈಗೆ ತೆರಳಿ ಅಲ್ಲಿ ಕಾಫಿ ಶಾಪ್ ಮತ್ತು ರೂಮ್ ಡೈನಿಂಗ್‌ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಬಳಿಕ 2003ರಲ್ಲಿ ಮರಳಿ ಬೆಂಗಳೂರಿಗೆ ಬಂದರು. ಸನ್ನಿಗೆ ಇಲ್ಲಿ ಬೃಹತ್ ಬ್ಯಾಂಕ್ವೆಟ್ ಕಾರ್ಯಾಚರಣೆಯ ಜವಾಬ್ದಾರಿ ನೀಡಲಾಯಿತು.

ಹೊಸ ಜವಾಬ್ದಾರಿಯ ಜೊತೆಗೆ ಕಾರ್ಯನಿರ್ವಾಹಕ ಸೌಸ್ ಶೆಫ್ ಆಗಿ ಬಡ್ತಿಯನ್ನೂ ನೀಡಲಾಯಿತು. ಈ ಸವಾಲನ್ನು ಸಂತೋಷದಿಂದಲೇ ಸ್ವೀಕರಿಸಿದ ಸನ್ನಿ ತಾಜ್ ವೆಸ್ಟ್ ಎಂಡ್‌ನ ಅನೇಕ ಯಶಸ್ವಿ ಕಾರ್ಯಕ್ರಮಗಳ ಸೂತ್ರಧಾರರೆನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಏಳು ವರ್ಷ ಕೆಲಸ ಮಾಡಿದ ಬಳಿಕ ಸನ್ನಿಗೆ ವಿದೇಶಕ್ಕೆ ಪಯಣಿಸುವ ಅವಕಾಶ ಲಭಿಸಿತು. ದಕ್ಷಿಣ ಶ್ರೀಲಂಕಾದಲ್ಲಿರುವ ತಾಜ್ ರೆಸಾರ್ಟ್‌ನ  ಕಿಚನ್‌ಗಳ ಉಸ್ತುವಾರಿ ವಹಿಸಿಕೊಂಡರು. ಅಲ್ಲಿ ಅವರು ಎಕ್ಸ್‌ಕ್ಯುಟಿವ್ ಶೆಫ್ ಆಗಿ ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು.

ಮೂರು ವರ್ಷ ಅಲ್ಲಿದ್ದು ಕಿಚನ್ ವ್ಯವಸ್ಥೆಗೊಳಿಸಿದರು ಮತ್ತು ರೆಸಾರ್ಟ್‌ನ ಆಹಾರಕ್ಕೆ ವಿಭಿನ್ನ ಆಯಾಮ ನೀಡಿದರು. ಇದು ಇವರ ಸಾಧನೆಯ ಹಾದಿಯಲ್ಲಿ ಕಾಣಿಸುವ ಪ್ರಮುಖ ಮೈಲಿಗಲ್ಲು. ಶ್ರೀಲಂಕಾದಿಂದ ಮರಳಿದ ಶೆಫ್‌ ಸನ್ನಿ ಪ್ರಸ್ತುತ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವಿವಾಂತಾ ಬೈ ತಾಜ್‌ ನಲ್ಲಿ ಕಾರ್ಯನಿರ್ವಾಹಕ ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

* * *
ಪೇಶಾವರಿ ಮುರ್ಗ್‌
ಸಾಮಗ್ರಿ:
500 ಗ್ರಾಂ ಚಿಕನ್ ಲೆಗ್‌, ಒಂದು ಟೇಬಲ್ ಸ್ಪೂನ್ ನಿಂಬೆ ರಸ, ಎರಡು ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು,  50 ಎಂ.ಎಲ್‌. ದಾಳಿಂಬೆ ರಸ, ಒಂದು ಟೇಬಲ್ ಸ್ಪೂನ್ ಗರಂ ಮಸಲಾ ಪುಡಿ, ಮೂರು ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ,  ಎರಡು ಟೇಬಲ್ ಸ್ಪೂನ್ ಗಟ್ಟಿಮೊಸರು, 10 ಗ್ರಾಂ ಚೀಸ್/ಬೆಣ್ಣೆ, ಅರ್ಧ ಟೇಬಲ್ ಸ್ಪೂನ್ ಚಾಟ್ ಮಸಾಲಾ.

ವಿಧಾನ: ಚಿಕನ್ ಪೀಸ್‌ಗಳನ್ನು ತೊಳೆದು ಸ್ವಚ್ಛಗೊಳಿಸಿದ ನಂತರ ಚಿಕನ್‌ ಅನ್ನು ಹಿಂಡಿ ಅದರಲ್ಲಿನ ನೀರನ್ನು ಹೊರತೆಗೆಯಬೇಕು. ನಂತರ ಚಿಕನ್‌ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಲಿಂಬೆ ರಸ, ಕೆಂಪುಮೆಣಸಿನ ಪುಡಿ, ದಾಳಿಂಬೆ ರಸ, ಗಟ್ಟಿ ಮೊಸರು ಬೆರೆಸಿ ಸ್ವಲ್ಪ ಹೊತ್ತು ನೆನಯಿಸಬೇಕು. ನಂತರ ಅದರ ಮಸಾಲೆ ಮತ್ತು ಖಾರದ ಮಟ್ಟವನ್ನು ಪರೀಕ್ಷಿಸಬೇಕು.

ಮಸಾಲೆ ಚೆನ್ನಾಗಿ ಅಂಟಿದ ನಂತರ ಚಿಕನ್ ಅನ್ನು ಸ್ಕ್ಯೂವರ್ಸ್‌ನೊಂದಿಗೆ ಜೋಡಿಸಿ ಒಲೆಯಲ್ಲಿ ಬೇಯಿಸಬೇಕು. (ಸ್ಕೂವರ್ಸ್‌ ಇಲ್ಲದವರು ಕುಕ್ಕರ್‌ಗೆ ಹಾಕಿ ಒಂದು ವಿಶಲ್‌ ಕೂಗಿಸಿ ನಂತರ ನಾನ್‌ಸ್ಟಿಕ್‌ ತವಾ ಮೇಲೆ ಬೇಯಿಸಬಹುದು). ಹೀಗೆ ಬೇಯಿಸಿದ ಚಿಕನ್ ಹೊರತೆಗೆದು ಅದರ ಮೇಲೆ ನಿಂಬೆ ರಸ, ಬೆಣ್ಣೆ ಮತ್ತು ಚಾಟ್ ಮಸಲಾ ಲೇಪಿಸಬೇಕು. ನಂತರ ಚಿಕ್‌ನ್‌ ಪೀಸ್‌ಗಳನ್ನು ಪ್ಲೇಟ್‌ನಲ್ಲಿಟ್ಟು ಈರುಳ್ಳಿ ರಿಂಗ್‌ಗಳು ಮತ್ತು ಮಿಂಟ್ ಚಟ್ನಿಯೊಂದಿಗೆ ಸವಿಯಬಹುದು.

ತಯಾರಿ: 15 ನಿಮಿಷಗಳು, ಅಡುಗೆ: 25 ನಿಮಿಷಗಳು, ನಾಲ್ಕು ಜನರಿಗೆ ಬಡಿಸಬಹುದು.

* * *
ಗಲೋತಿ ಕಬಾಬ್
ಸಾಮಗ್ರಿಗಳು:
ಅರ್ಧ ಕಿಲೋ ಮಾಂಸ, ಪಪ್ಪಾಯ 100 ಗ್ರಾಂ, ಕೆಂಪು ಮೆಣಸಿನ ಪುಡಿ ಮೂರು ಟೇಬಲ್ ಸ್ಪೂನ್, ಕರಿ ಮೆಣಸು ಪುಡಿ ಒಂದು ಟೇಬಲ್ ಸ್ಪೂನ್,  ಏಲಕ್ಕಿ ಎರಡು ಟೇಬಲ್ ಸ್ಪೂನ್, ಗರಂ ಮಸಲಾ ಪುಡಿ ಮೂರು ಟೇಬಲ್ ಸ್ಪೂನ್, ಹುರಿದ ಈರುಳ್ಳಿ 100 ಗ್ರಾಂ, ರೋಸ್ಟ್ ಮಾಡಿದ ಚನ್ನಾ ಪುಡಿ 50 ಗ್ರಾಂ,  ಗೋಡಂಬಿ 50 ಗ್ರಾಂ, ಸ್ವಲ್ಪ ತುಪ್ಪ, ಲವಂಗ ಐದು. ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಪಪ್ಪಾಯಿಯನ್ನು ತೊಳೆದು ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಂಡ ನಂತರ ಅದಕ್ಕೆ ಉಪ್ಪು ಸೇರಿಸಬೇಕು.  ಹುರಿದ ಈರುಳ್ಳಿ ಮತ್ತು ಗೋಡಂಬಿಯನ್ನು  ಪೇಸ್ಟ್ ಮಾಡಿಕೊಂಡ ನಂತರ ಅದನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಎಲ್ಲ ಬಗೆಯ ಮಸಾಲೆ ಮತ್ತು ಪೇಸ್ಟ್ ಅನ್ನು ಚೆನ್ನಾಗಿ ಕೊಚ್ಚಿದ ಮಟನ್‌ನೊಂದಿಗೆ ಮಿಶ್ರಣ ಮಾಡಬೇಕು. ಅಷ್ಟರಲ್ಲಿ ತುಪ್ಪ ಮತ್ತು ಲವಂಗವನ್ನು ಸುವಾಸನೆ ಬರುವ ತನಕ ಹುರಿದುಕೊಂಡಿರಬೇಕು. ಮಸಾಲೆ ಮಿಶ್ರಿತ ಮಾಂಸವನ್ನು ಸಣ್ಣ ರೌಂಡ್ ಕೇಕ್ ರೀತಿ ಮಾಡಿ ಮತ್ತು ಅದನ್ನು ತವಾ ಮೇಲೆ ಹರಡಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಬೇಕು. ಚೆನ್ನಾಗಿ ಬೆಂದನಂತರ ಬಿಸಿ ಬಿಸಿಯಾಗಿ ಬಡಿಸಿ.

ಪ್ರತಿಕ್ರಿಯೆ
ಅಪ್ಪನ ಕುರಿತು ಬಿ.ಟಿ. ಲಲಿತಾ ನಾಯಕ್ ಅವರ ನೆನಪಿನಾಳದಿಂದ ಹೆಕ್ಕಿ ತೆಗೆದ ಘಟನಾವಳಿಗಳು ಪ್ರಶಾಂತ್ ಡಿ.ಕುರ್ಕೆ ಯವರ ನಿರೂಪಣೆಯಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಲಲಿತಾ ನಾಯಕ್ ಅವರೇ ಎದುರು ಕುಳಿತು ಕಥೆ ಹೇಳಿದಂತೆ ಭಾಸವಾಗುತ್ತದೆ. ಲಲಿತಾ ನಾಯಕ್ ಅವರ ಸಂಬಂಧಿಯೊಬ್ಬರು ತನ್ನ ಅತ್ತೆಯ ಕಾಟದಿಂದ ಪಾರಾಗಲು ಮತ್ತು ಮೊಸರನ್ನದ ಅಭಿಲಾಷೆಯಿಂದ ಮೈ ಮೇಲೆ ದೆವ್ವ ಬಂದಂತೆ ನಟಿಸುತ್ತಿದ್ದದ್ದು, ಮಗಳ ಲೇಖನ, ಪದ್ಯಗಳನ್ನು ದಶಕಗಟ್ಟಲೇ ಅಪ್ಪ ಪೆಟ್ಟಿಗೆಯಲ್ಲಿ ಕಾಪಿಟ್ಟಿದ್ದು, ಚಪ್ಪಲಿ ಹಾಕಿಸಿ ಶಾಲೆಗೆ ಕಳುಹಿಸಿದುದು ಎಲ್ಲವೂ ಅಪ್ಪನ ಅಂತಃಕರಣದ ಅನುಭೂತಿಯನ್ನು ಸಾರಿ ಹೇಳುತ್ತವೆ. ಅದನ್ನು ಓದುತ್ತಿದ್ದಂತೆಯೇ ಎದೆಯಲ್ಲಿ ಆರ್ದ್ರತೆಯುಂಟಾಗಿ ನನ್ನಪ್ಪನ ನೆನಪೂ ನನ್ನನ್ನು ಆವರಿಸುವಂತೆ ಮಾಡಿದ ‘ಭೂಮಿಕಾ’ಗೆ ಕೃತಜ್ಞತೆಗಳು.
–ಡಾ. ವಸುಂಧರಾ ಭೂಪತಿ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.