ADVERTISEMENT

ಕುಮಟೆ ಮಾರುಕಟ್ಟೆಯ ದಿಟ್ಟೆಯರು

ಸಂಧ್ಯಾ ಹೆಗಡೆ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST
ಕುಮಟೆ ಮಾರುಕಟ್ಟೆಯ ದಿಟ್ಟೆಯರು
ಕುಮಟೆ ಮಾರುಕಟ್ಟೆಯ ದಿಟ್ಟೆಯರು   

ಈ ಮಹಿಳೆಯರಿಗೆ ಅಕ್ಷರದ ಹಂಗಿಲ್ಲ. ಆದರೆ ಮಾರುಕಟ್ಟೆಯ ಕೊಂಡಿಯನ್ನು ಗಟ್ಟಿಗೊಳಿಸಿರುವ ಶಕ್ತಿ ಇವರಲ್ಲಿದೆ. ಈ ಶ್ರಮಿಕ ಜೀವಿಗಳು ಗ್ರಾಮ್ಯ ಬದುಕಿನ ಚಿತ್ರಣದಲ್ಲಿ ಸ್ತ್ರೀ ಅಸ್ಮಿತೆಯ ಪ್ರಜ್ಞೆ ಮೂಡಿಸಿರುವ ಸಾಧಕಿಯರಾಗಿ ಕಾಣುತ್ತಾರೆ.

ಹೆಬ್ಬಾವಿನಂತೆ ಮೈಚಾಚಿರುವ ರಾಷ್ಟ್ರೀಯ ಹೆದ್ದಾರಿ 17 ಕುಮಟಾ ಪಟ್ಟಣವನ್ನು ಇಬ್ಭಾಗ ಮಾಡಿದೆ. ಹೆದ್ದಾರಿಯ ಮಗ್ಗುಲಲ್ಲಿ ಸಾಲಾಗಿ ಕುಳಿತುಕೊಳ್ಳುವ ಹಾಲಕ್ಕಿ ಮಹಿಳೆಯರು ‘ಬರ್ರಾ ತಾಜಾ ಅದೆ ತರಕಾರಿ ತೆಕಂಡ್ ಹೋಗ್ರಾ’ ಎಂದು ಕೂಗಿ ಕರೆಯುತ್ತಾರೆ ನಗುಮೊಗದಲ್ಲಿ. ಅಲ್ಲಿಂದ ಮುಂದೆ ಪೇಟೆ ಕಡೆ ಹೆಜ್ಜೆ ಹಾಕಿದರೆ ಓಣಿ, ಸಂದಿಗಳ ಬದಿಯಲ್ಲಿ ಅಷ್ಟಿಷ್ಟು ದೂರಕ್ಕೆ ತರಕಾರಿ ರಾಶಿ ಹಾಕಿಕೊಂಡಿರುವ ಹಾಲಕ್ಕಿ ಗೌಡ್ತಿಯರು ಮತ್ತೆ ಕಾಣಸಿಗುತ್ತಾರೆ. ಹಾಗೇ ಬಂದರು ರಸ್ತೆಯಲ್ಲಿ ಮೀನು ಖರೀದಿಗೆ ಹೋದರೆ ಅಲ್ಲಿ ವ್ಯಾಪಾರಕ್ಕೆ ಕುಳಿತಿರುವವರೂ ಮಹಿಳೆಯರೇ! ಕುಮಟಾ ಪೇಟೆ ನಿಜಕ್ಕೂ ಪ್ರಮೀಳಾ ಪ್ರಪಂಚ.

ಪರಂಪರೆಯ ಜ್ಞಾನವನ್ನು ತಲೆಮಾರಿಗೆ ಹಸ್ತಾಂತರಿಸುವ ಜೊತೆಗೆ ಮಹಿಳಾ ನಿಯಂತ್ರಿತ ಮಾರುಕಟ್ಟೆಯ ಕೊಂಡಿಯನ್ನು ಗಟ್ಟಿಗೊಳಿಸಿರುವ ಈ ಶ್ರಮಿಕ ಜೀವಿಗಳು ಗ್ರಾಮ್ಯ ಬದುಕಿನ ಚಿತ್ರಣದಲ್ಲಿ ಸ್ತ್ರೀ ಅಸ್ಮಿತೆಯ ಪ್ರಜ್ಞೆ ಮೂಡಿಸಿರುವ ಸಾಧಕಿಯರಾಗಿ ಕಾಣುತ್ತಾರೆ. ಅಕ್ಷರದ ಅರಿವಿಲ್ಲದೆ ಅನುಭವದ ಪಾಠಶಾಲೆಯಲ್ಲಿ ಪಳಗಿದ ಹಾಲಕ್ಕಿಗರು, ಮೀನುಗಾರ ಮಹಿಳೆಯರು ಸ್ವಾಭಿಮಾನಿ ಸ್ತ್ರೀ ಸಮುದಾಯದ ಮಾದರಿಗಳಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ಸಾವಯವ ತರಕಾರಿಯ ತವರು. ಗೋಕರ್ಣ ಬದನೆ, ಮಜ್ಜಿಗೆ ಮೆಣಸು, ಬಸಳೆ, ಪಡುವಲಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಸೌತೆಕಾಯಿ, ಅಲಸಂದೆ ಬೀನ್ಸ್, ಹರಿವೆಸೊಪ್ಪು, ಮೂಲಂಗಿ, ಬಿಳಿ ಗೆಣಸು, ನವಿಲುಕೋಸು ಹೀಗೆ ಇಲ್ಲಿನ ತಾಜಾ ತರಕಾರಿ ಗೊತ್ತಿಲ್ಲದವರಿಲ್ಲ. ತಣ್ಣೀರುಕುಳಿ ಮತ್ತು ಮಾದನಗೇರಿ ಗ್ರಾಮಗಳ ಹಾಲಕ್ಕಿಗರ ಹಸಿರು ಪಯಣದಲ್ಲಿ ಈ ಕಾಯಿಪಲ್ಯೆಗಳು ನಳನಳಿಸಿ ಬೆಳೆಯುತ್ತವೆ. ಬೆಳಕು ಹರಿಯುವ ಹೊತ್ತಿಗೆ ತರಕಾರಿ ಮೂಟೆ ಹೊತ್ತುಕೊಂಡು ಪೇಟೆಗೆ ಬರುವ 50ಕ್ಕೂ ಹೆಚ್ಚು ಹಾಲಕ್ಕಿಗರು ಗಳಿಕೆಯನ್ನು ಸೆರಗಿನಲ್ಲಿ ಕಟ್ಟಿಕೊಂಡು ಗೋವು ಮರಳುವ ಹೊತ್ತಿಗೆ ಮನೆ ಸೇರುತ್ತಾರೆ.

ಮನೆಗೆಲಸ, ಮಕ್ಕಳ ಚಾಕರಿ ಮುಗಿದ ಮೇಲೆ ರಾತ್ರಿ 10ರ ವೇಳೆಗೆ ಗಂಡಸರು ಗದ್ದೆಯಿಂದ ಕೊಯ್ದು ತಂದಿಟ್ಟಿರುವ ಕಾಯಿಪಲ್ಯೆಗಳ ಕಟ್ಟು ಕಟ್ಟುವ ಕೆಲಸ ಶುರು. ಹೆಂಗಸರ ಜೊತೆ ಮನೆಮಂದಿ ಕೈಜೋಡಿಸಿದರೆ ತುಸು ಬೇಗ ಈ ಕೆಲಸಕ್ಕೆ ವಿರಾಮ. ಚಾಪೆಯ ಮೇಲೆ ತಲೆಯಿಡುವ ಹೊತ್ತಿಗೆ ಬೆಳಗಿನ ಜಾವ ಒಂದು ಗಂಟೆ. ಮತ್ತೆ ಏಳುವುದು ನಾಲ್ಕು ಗಂಟೆಗೆ. ದಣಿದ ದೇಹಕ್ಕೆ ವಿಶ್ರಾಂತಿ 3–4 ತಾಸು ಅಷ್ಟೆ. ನಸುಕಿನಲ್ಲಿ ಗಿಡಗಳಿಗೆ ನೀರು ಹಾಯಿಸಿ ಮನೆ ಮಂದಿಗೆ ಮಧ್ಯಾಹ್ನದ ಊಟ ತಯಾರಿಸಿಟ್ಟು ನಿತ್ಯ ಬೆಳಿಗ್ಗೆ 7 ಗಂಟೆಗೆ ಊರಿನಿಂದ ಹೊರಡುವ ಟೆಂಪೋಗೆ ತಾಜಾ ತರಕಾರಿ ಹೊರೆ ಹಾಕಿಪಟ್ಟಣ ಸೇರುವುದು ಈ ಮಹಿಳೆಯರ ದಿನಚರಿ.

ಮಹಾನಗರಗಳ ಹವಾನಿಯಂತ್ರಿತ ಮಾಲ್‌ಗಳಿಗೆ ಹೋಗುವವರು ಸಹ ದೊಡ್ಡ ಕಾರನ್ನು ದೂಳಿನಲ್ಲಿ ತಂದು ನಿಲ್ಲಿಸಿ ರಸ್ತೆ ಬದಿ ಸುಡುಬಿಸಿಲಿನಲ್ಲಿ ತಲೆಯ ಮೇಲೊಂದು ಪಂಜಿ ಹಾಕಿಕುಳಿತುಕೊಳ್ಳುವ ಹಾಲಕ್ಕಿ ಮಹಿಳೆಯರು ಇಟ್ಟುಕೊಂಡ ಕಾಯಿಪಲ್ಯೆ ಖರೀದಿಸುತ್ತಾರೆ. ‘ನಮ್ಮಲ್ಲಿ ತುಂಡು ಭೂಮಿ ಇದ್ದವರೂ ಕಡಿಮೆ. ಹೆಚ್ಚಿನವರೆಲ್ಲ ಬಾಡಿಗೆ ಕೊಟ್ಟು ಬೇರೆಯವರ ಗದ್ದೆಯಲ್ಲಿ ತರಕಾರಿ ಬೆಳೆಯುತ್ತಾರೆ. ನಮಗೆ ನೌಕರಿ ಯಾರು ಕೊಡ್ತಾರೆ. ಬಿಸಿಲು, ಬೆಂಕಿಗೆ ಹೆದರುತ್ತ ಕೂರುವವರು ನಾವಲ್ಲ. ದುಡಿದು ತಿನ್ನುವ ತಾಕತ್ತಿದೆ ನಮಗೆ’ ಎಂದು ಗಿರಾಕಿಗಳೊಂದಿಗೆ ವ್ಯಾಪಾರ ಮಾಡುತ್ತಲೇ ಹೇಳುತ್ತಿದ್ದರು ಹಿರಿಯೆ ದೇವಿ ಗೌಡ.

‘ನಮ್ ಅಪ್ಪ, ಅಮ್ಮ, ಅತ್ತಿ, ಮಾವ ಎಲ್ಲ ಇದೇ ಕೆಲ್ಸ ಮಾಡ್ತಿರು. ನಾವು ಇದೇ ಮಾಡುದೆಯಾ. ಹಾಲಕ್ಕಿ ಗೌಡ್ರ ದಂದೇನೇ ತರಕಾರಿ ಬೆಳುದು. ನಾನು ಹತ್ ವರ್ಸದಂವ ಇದ್ದಾಗಿಂದ ತರ್ಕಾರಿ ಕೆಲ್ಸ ಮಾಡುಕ್ ಸುರು ಮಾಡಿದ್ದೆ. 50 ವರ್ಸದಿಂದ್ ತರ್ಕಾರಿ ಬೆಳದ್ ಮಾರಾಟ ಮಾಡಿದ್ ಬಿಟ್ರೆ ದುಡ್ಡು, ಕಾಸು, ಮನೆ ಎಂತ ಮಾಡ್ಕಳುಕು ಆಗ್ಲಿಲ್ಲ ಕಾಣಿ’ ಎಂದು ಹೇಳುವಾಗ ನಿರ್ಲಿಪ್ತ ಭಾವ ಅವರ ಮುಖದಲ್ಲಿ. ‘ಕಾರ್ಯಕಟ್ಟಳೆ ಇದ್ದಾಗ ಮಾತ್ರ ನಮಗೆ ಕೆಲಸಕ್ಕೆ ರಜೆ. ತರಕಾರಿ ಮಾರಾಟವೇ ನಮ್ಮ ಬದುಕು.

ಮಳೆಗಾಲದಲ್ಲಿ ನಾಲ್ಕೈದು ತಿಂಗಳು ಮಾತ್ರ ಮಾರಾಟಕ್ಕೆ ಬಿಡುವು. ಇಷ್ಟೆಲ್ಲ ದುಡಿದರೂ ನಮಗೆ ದಿನಕ್ಕೆ ದಕ್ಕುವುದು 150–200 ರೂಪಾಯಿ ಮಾತ್ರ. ಅದರಲ್ಲೇ ಮಧ್ಯಾಹ್ನದ ಊಟ, ಸಂಜೆಯ ಚಹಾ ಖರ್ಚು ಕಳೆಯಬೇಕು’ ಎನ್ನುತ್ತಿದ್ದರು ಬೀರಮ್ಮ ಗೌಡ. ‘ಸೆಗಣಿ ಗೊಬ್ಬರ ಹಾಕಿ ತರಕಾರಿ ಗದ್ದೆ ಸಿದ್ಧಪಡಿಸುವವರು ಗಂಡಸರು. ನಾವು ಮನೆ ಸೇರಲು ತಡವಾದರೆ ಅವರೇ ಗಿಡಕ್ಕೂ ನೀರನ್ನೂ ಹಾಕುತ್ತಾರೆ. ರಾಸಾಯನಿಕ ಇಲ್ಲದ ಸಾವಯವ ತರಕಾರಿ ಬೆಳೆಸಲು ಗಂಡಸರ ಸಹಕಾರವೂ ಇದೆ’ ಎನ್ನಲು ಬೀರಮ್ಮ ಮರೆಯಲಿಲ್ಲ.

ಸಾಮ್ಯ ಬದುಕು
ಹಾಲಕ್ಕಿ ಗೌಡ್ತಿಯರು ಹಾಗೂ ಅಂಬಿಗರ ಮಹಿಳೆಯರ ಜೀವನ ಚಕ್ರದಲ್ಲಿ ಬಹು ಸಾಮ್ಯಗಳಿವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಇವರಿಬ್ಬರ ದಿನಚರಿಯಲ್ಲಿ ಕೊಂಚವೂ ವ್ಯತ್ಯಾಸವಿಲ್ಲ. ಈ ಮಹಿಳಾ ಪಾರುಪತ್ಯದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲು ಹತ್ತಿದವರು ಕೆಲವರು ಮಾತ್ರ. ಆದರೆ ಆರ್ಥಿಕ ಲೆಕ್ಕಾಚಾರದಲ್ಲಿ ಇವರು ಪದವಿ ಪಡೆದವರನ್ನೂ ಹಿಂದಿಕ್ಕಬಲ್ಲರು. ಮೀನು ಮಾರುಕಟ್ಟೆಯ ವ್ಯವಹಾರವೆಂದರೆ ಶೇರು ಪೇಟೆಗಿಂತ ಕಡಿಮೆಯದೇನಲ್ಲ. ಬಾನಿಗೆ ನೆಗೆಯುವ ಮೀನಿನ ದರ ಎರಡು ಬೋಟು ಬರುವಷ್ಟರಲ್ಲಿ ಪಾತಾಳಕ್ಕೆ ಕುಸಿದು ಬೀಳುವ ಪರಿಸ್ಥಿತಿಯನ್ನು ನಿಭಾಯಿಸಲ್ಲ ಚಾಕಚಕ್ಯತೆ ಹೊಂದಿರುವವರು ಮೀನುಗಾರ ಮಹಿಳೆಯರು.

ಇಲ್ಲಿಯ ಮೀನು ಮಾರುಕಟ್ಟೆಯಲ್ಲಿ ಅಂಬಿಗ ಮಹಿಳೆಯರದೇ ದರ್ಬಾರು. ಸುತ್ತಲಿನ ಸುಮಾರು 18 ಹಳ್ಳಿಗಳ ನೂರಾರು ಮಹಿಳೆಯರು ತೆರೆದ ಬಯಲಿನಲ್ಲಿ ಮೀನು ಮಾರಾಟಕ್ಕೆ ಕುಳಿತುಕೊಳ್ಳುತ್ತಾರೆ. ಬಂಗಡೆ, ಭೂತಾಯಿ, ಸಮದಾಳೆ, ಕರಳಗಿ, ನೊಗ್ಲಿ, ಮಡ್ಲೆ, ಕಿಂಗ್‌ಫಿಶ್, ಏಡಿ, ಸಿಗಡಿ ಎಷ್ಟೆಲ್ಲ ವೈವಿಧ್ಯಗಳು. ಗಂಡಸರು ನಸುಕಿನಲ್ಲಿ ಎದ್ದು ಬೋಟಿಗೆ ಹೋದರೆ ತಿರುಗಿ ಬರುವುದು 11 ಗಂಟೆಯ ವೇಳೆಗೆ. ಆನಂತರವೇ ಮೀನು ಪೇಟೆ ರಂಗೇರುವುದು.

‘ಮತ್ಸ್ಯ ನೆರೆಯಾದರೆ ಲಾಭವಿಲ್ಲ, ಬರವಾದರೆ ಕೂಳಿಲ್ಲ. ಮೀನು ವ್ಯಾಪಾರದಲ್ಲಿ ಸಿಕ್ಕರೆ ಲಾಭ ಇಲ್ಲಾಂದ್ರೆ ಗೋವಿಂದ’ ಎಂದು ಮೀನು ವಹಿವಾಟಿನ ಚಿತ್ರಣವನ್ನು ಚುಟುಕಾಗಿ ಹೇಳಿದವರು ಸಾತು ಹರಿಕಂತ್ರ. ‘ತಾಜಾ ಮೀನಿಗೆ ದುಬಾರಿ ಬೆಲೆ ಕೊಟ್ಟು ಖರೀದಿಸಿ ವ್ಯಾಪಾರಕ್ಕೆ ಕುಳಿತುಕೊಳ್ತೇವೆ. ಅಷ್ಟೊತ್ತಿಗೆ ಇನ್ನೆರಡು ಬೋಟುಗಳು ಭರ್ಜರಿ ಬೇಟೆ ಮಾಡಿ ಬಂದಿದ್ದರೆ ಮುಗೀತು. ಹಾಕಿದ ಬಂಡವಾಳವೂ ಗಿಟ್ಟುವುದಿಲ್ಲ’ ಎನ್ನುತ್ತ ಒಣಮೀನು ಹರಡುತ್ತಿದ್ದರು.

‘ನಮ್ಮ ಮೀನುಗಾರ ಮಹಿಳೆಯರು ಗಟ್ಟಿಗರು. ಮಾರುಕಟ್ಟೆಯಲ್ಲಿ ಒತ್ತಡ ಆದರೆ ಟೊಂಕಕಟ್ಟಿ ಹೊರಟೇ ಬಿಡ್ತಾರೆ ಶಿರಸಿ, ಸಿದ್ದಾಪುರದ ಕಡೆಗೆ. ಕರಾವಳಿಯ ರುಚಿಕಟ್ಟಾದ ಮೀನನ್ನು ಘಟ್ಟದವರಿಗೆ ಉಣಬಡಿಸಿ ಕಾಸು ಎಣಿಸುತ್ತಾರೆ’ ಎಂದು ಗ್ರಾಹಕ ಎಂ.ಜಿ. ನಾಯ್ಕ ಹೆಮ್ಮೆಯಿಂದ ಹೇಳುತ್ತಾರೆ. 

‘ಬಾಯಲ್ಲಿ ನೀರೂರುವ ಕುಮಟಾದ ಕಲ್ಲೆಸಡಿ ಸಿಂಗಾಪುರದ ಜನರ ನಾಲಿಗೆ ಚಪ್ಪರಿಕೆಯನ್ನು ತಣಿಸಿದೆ. ಗಜನಿ ಭೂಮಿಯದಲ್ಲಿ ಧಾರಾಳವಾಗಿ ಸಿಗುವ ಕಲ್ಲೆಸಡಿ ಕೊಂಬಿಗೆ ಚಾವಿ ಹಾಕುವ ಕಲೆ ಇಲ್ಲಿನವರಿಗೆ ಕರಗತ’ ಎಂದು ಗೋವಾ ಮೂಲಕ ಸಿಂಗಪುರಕ್ಕೆ ಹೋಗುವ ಕಲ್ಲೆಸಡಿ ಕತೆ ಹೇಳಿದರು. ಬದುಕಿಗಾಗಿ ನಿತ್ಯ ಹೋರಾಡುವ ಇವರು ಕುಮಟೆ ಮಾರುಕಟ್ಟೆಯ ದಿಟ್ಟೆಯರು.

***
ಎಚ್‌.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಣ್ಣೀರುಕುಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ‘ಮುಖ್ಯಮಂತ್ರಿ ಬಂದಾಗ್ ಬಡಸ್ಲಿಕ್ಕೆ ಹೋಗಿದ್ದು ಖುಷಿ ಆಗಿತ್ತು. ನಾನೇ ದೃಷ್ಟಿ ತೆಗೆದಿದ್ದೆ. ನಂಗ್ ಐನೂರು ರೂಪಾಯಿ ಕೊಟ್ಟಿರು. ಅವ್ರು ಬಂದ್ರು ಹೋದ್ರು. ನಾಂವ್ ಹೆಂಗ್ ಇದ್ದೇವ ಹಾಂಗೆ ಇದ್ದೇವೆ’– ಹೀಗೆ ಮಾರ್ಮಿಕವಾಗಿ ಹೇಳಿದ್ದು ಅವರಿಗೆ ಬಸಳೆ ಸಾರು ಬಡಿಸಿದ್ದ ದೇವಿ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.