ADVERTISEMENT

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಅಬ್ದುಲ್ ರಹಿಮಾನ್
Published 4 ಫೆಬ್ರುವರಿ 2024, 0:15 IST
Last Updated 4 ಫೆಬ್ರುವರಿ 2024, 0:15 IST
<div class="paragraphs"><p>ದೂರದಿಂದ ಮಲಗಿರುವ ಆನೆಯಂತೆ ಕಾಣುವ ಗಡಾಯಿಕಲ್ಲು...</p></div>

ದೂರದಿಂದ ಮಲಗಿರುವ ಆನೆಯಂತೆ ಕಾಣುವ ಗಡಾಯಿಕಲ್ಲು...

   

ಇತ್ತೀಚಿನ ದಿನಗಳಲ್ಲಿ ಅದ್ಭುತ ಅನುಭವ ನೀಡಿದ್ದು ಅಚಾನಕ್ಕಾಗಿ ಆಯೋಜನೆಗೊಂಡ ಗಡಾಯಿಕಲ್ಲು ಚಾರಣ. ನಮ್ಮ ಮನೆಯ ಸಮೀಪ ಇರುವ, ದೂರದಿಂದ ದೊಡ್ಡ ಆನೆಯೊಂದು ಮೈಚೆಲ್ಲಿ ಮಲಗಿದಂತೆ ಕಾಣುವ ಈ ಕೋಟೆ ಸಣ್ಣ ಚಾರಣಕ್ಕೆ ಸೂಕ್ತ ಸ್ಥಳ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಡ ಎನ್ನುವ ಗ್ರಾಮದಲ್ಲಿ ಈ ಕೋಟೆ ಇದೆ. ಕಲ್ಲನ್ನು ಕೊರೆದು ಕೋಟೆಯನ್ನಾಗಿ ಮಾಡಿದ್ದರಿಂದ ಇದನ್ನು ತುಳುವರು ‘ಗಡಾಯಿಕಲ್‌’ ಎಂದು ಕರೆಯುತ್ತಾರೆ. ಇದಕ್ಕೆ ಜಮಲಾಬಾದ್‌, ನರಸಿಂಹಗಡ ಎನ್ನುವ ಹೆಸರೂ ಇದೆ. ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಈ ಕೋಟೆಯ ತುದಿ ತಲುಪಬೇಕಾದರೆ ಸುಮಾರು 2,800ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಇದನ್ನು ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವುದರಿಂದ ಇಲ್ಲಿಗೆ ಪ್ರವೇಶಕ್ಕೆ ಅನುಮತಿ ಕಡ್ಡಾಯ.

ಈ ಚಾರಣ ನಿಗದಿಯಾಗಿದ್ದೇ ಹಿಂದಿನ ರಾತ್ರಿ. ಮರುದಿನ ಬೆಳಿಗ್ಗೆ 10 ಗಂಟೆಯ ಹೊತ್ತಿಗೆಲ್ಲಾ ಐದು ಮಂದಿಯ ತಂಡ ಕೋಟೆಯ ಬುಡದಲ್ಲಿತ್ತು. ಅಂದು ಕರಾವಳಿಯಲ್ಲಿ ಸೂರ್ಯನ ನೋಟ ಅಷ್ಟೊಂದು ಪ್ರಖರವಾಗಿರಲಿಲ್ಲ. ಅಲ್ಲಿರುವ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಟಿಕೆಟ್‌ ಖರೀದಿಸಿ ಮೆಟ್ಟಿಲುಗಳನ್ನು ಏರುವ ಸಾಹಸ ಆರಂಭವಾಯಿತು. ಆರಂಭದಲ್ಲಿ ಕಲ್ಲುಗಳನ್ನು ಇಟ್ಟು ನಿರ್ಮಾಣ ಮಾಡಲಾಗಿರುವ ದೊಡ್ಡ ದೊಡ್ಡ ಮೆಟ್ಟಿಲುಗಳನ್ನು ಏರಬೇಕು. ಕೆಲವೇ ಮೆಟ್ಟಿಲುಗಳನ್ನು ದಾಟುವಷ್ಟರಲ್ಲಿ ನನ್ನನ್ನು ಸೇರಿಸಿ ಮೂರು ಮಂದಿ ಸುಸ್ತಾಗಿ ಕುಳಿತುಬಿಟ್ಟೆವು. ಅಷ್ಟೊತ್ತಿಗಾಗಲೇ ಕೋಟೆಯ ತುದಿವರೆಗೂ ಹೋಗಿ, ಇನ್ನು ಕೆಲವರು ಸುಸ್ತಾಗಿ ಅರ್ಧದಾರಿಯಿಂದಲೇ ವಾಪಸ್‌ ಬರುತ್ತಿದ್ದರು.

ADVERTISEMENT

ಕಲ್ಲನ್ನೇ ಕಡಿದು ಮಾಡಿರುವ ಮೆಟ್ಟಿಲುಗಳು

‘ಇದು ಆರಂಭವಷ್ಟೇ.. ಇನ್ನೂ ಎರಡೂವರೆ ಸಾವಿರ ಮೆಟ್ಟಿಲು ಬಾಕಿ ಇದೆ. ಇಲ್ಲೇ ಕುಳಿತರೇ ಹೇಗೆ? ಸುಲಭವಾಗಿ ಏರಬಹುದು’ ಎಂದು ಕೋಟೆಯನ್ನು ಹತ್ತಿ ವಾಪಸ್‌ ಬರುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರ ಮಾತು ನಮಗೆ ಶಕ್ತಿ ತುಂಬಿತು. ಮತ್ತೆ ಮುಂದುವರಿದೆವು. ಇಳಿಯುತ್ತಿದ್ದವರಲ್ಲಿ ನಮ್ಮದು ಒಂದೇ ಪ್ರಶ್ನೆ, ‘ಇನ್ನೆಷ್ಟು ಉಂಟು?’. ಒಬ್ಬೊಬ್ಬರದ್ದು ತರಹೇವಾರಿ ಉತ್ತರ. 15 ವರ್ಷದ ಹಿಂದೊಮ್ಮೆ ಇದೇ ಕಲ್ಲನ್ನು ಹತ್ತಿದ್ದೆಯಾದರೂ, ನನಗೆ ನೆನಪು ಅಸ್ಪಷ್ಟವಾಗಿತ್ತು. ಬದಲಾವಣೆಗಳೂ ಸಾಕಷ್ಟಾಗಿದ್ದವು. ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳುತ್ತಾ, ಬಂಡೆ ಸಿಕ್ಕಲ್ಲೆಲ್ಲಾ ಮೈ ಒಡ್ಡುತ್ತಾ, ನಮ್ಮ ಏರುವ ಸಾಹಸ ಮುಂದುವರಿದಿತ್ತು.

ಗಂಟೆಯ ಹಾದಿ ಕ್ರಮಿಸಿದ ಬಳಿಕ ವಿಶಾಲ ಬಯಲಿನಂತಹ ಪ್ರದೇಶ ಸಿಕ್ಕಿತು. ಅಲ್ಲಿ ಮೆಟ್ಟಿಲುಗಳು ಇದ್ದವು ಎನ್ನುವ ಕುರುಹುಗಳಷ್ಟೇ ಕಾಣಬಹುದು. ಹಸಿರ ಹೊದಿಕೆ ಹಾಗೂ ಆಕರ್ಷಕ ಮರಗಳು ಇರುವುದರಿಂದ ಅದು ಫೋಟೊಗ್ರಫಿ ತಾಣವಾಗಿ ಮಾರ್ಪಾಡಾಗಿತ್ತು. ಪೂರ್ತಿ ಚಾರಣ ಮುಗಿಸಿ ಬರುತ್ತಿರುವವರ ‘ಇನ್ನೊಂದು ಅರ್ಧಗಂಟೆ ಅಷ್ಟೇ.. ಮುಕ್ಕಾಲು ಗಂಟೆ ಅಷ್ಟೇ’ ಎನ್ನುವ ಮಾತು ನಮ್ಮನ್ನು ಬಡಿದೆಬ್ಬಿಸುತ್ತಿತ್ತು. ನಡು ನಡುವೆ ಫೋಟೊಗೆ ಕ್ಯಾಮೆರಾ ಎದುರು ನಿಂತಾಗ ಸುಸ್ತೆಲ್ಲಾ ಮಾಯವಾದಂತೆ ನಟಿಸಿ, ಅನಿವಾರ್ಯ ನಗು ಚೆಲ್ಲಿ ನೆನಪುಗಳನ್ನು ಮೊಬೈಲಿನಲ್ಲಿ ಹಿಡಿದಿಡುವ ಪ್ರಯತ್ನ ನಡೆದೇ ಇತ್ತು.

ಚಪ್ಪಲಿ, ಜೀನ್ಸ್‌ ಪ್ಯಾಂಟ್ ಧರಿಸಿ ಬಂದಿದ್ದವರ ಪಡಿಪಾಟಲು ನಮಗೆ ರಸದೌತಣ. ಮೇಲೆ ಬರಲೊಲ್ಲದವನನ್ನು, ತಂಡದ ಇತರ ಸದಸ್ಯರು ಒತ್ತಾಯಿಸಿ, ಪ್ರೇರೇಪಿಸುವ ದೃಶ್ಯಗಳು, ಫೋಟೊಗಾಗಿ ಮಾಡುವ ಸಾಹಸಗಳು, ಕೈಯಲ್ಲಿ ನಾಲ್ಕೈದು ನೀರಿನ ಬಾಟಲಿಗಳನ್ನು ಹಿಡಿದುಕೊಂಡು, ತಂಡದ ಇತರ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದ ವ್ಯಕ್ತಿ, ತಂಡದಿಂದ ಬೇರೆಯಾಗಿ ಒಬ್ಬಂಟಿಯಾಗಿದ್ದವನ ವ್ಯಥೆ, ಯಾವುದೇ ತಯಾರಿ ಇಲ್ಲದೇ ಬಂದು ಸೊರಗಿರುವವರ ಯಾತನೆಗಳು, ನಮಗೆ ತಮಾಷೆಯ ವಸ್ತುಗಳಾಗಿದ್ದವು.

ಗಡಾಯಿಕಲ್ಲಿನ ಮೇಲೆ ಇರುವ ಫಿರಂಗಿ

ಕೋಟೆಯ ಮುಕ್ಕಾಲು ಭಾಗ ಏರಿದ ಬಳಿಕ ಕಮಾನು ಗೋಚರಿಸುತ್ತದೆ. ಶಿಥಿಲಾವಸ್ಥೆಯಲ್ಲಿರುವ ಅದರಲ್ಲಿ, ಎಲ್ಲಾ ಪ್ರವಾಸ ತಾಣಗಳಲ್ಲಿ ಇರುವಂತೆ ಪ್ರೇಮಿಗಳು ತಮ್ಮ ಹೆಸರು ಕೆತ್ತಿಟ್ಟಿದ್ದಾರೆ! ಪ್ಲಾಸ್ಟಿಕ್ ತ್ಯಾಜ್ಯಗಳೂ ಬಿದ್ದಿವೆ. ಇದಾಗಿ ಮುಂದೆ ಹೋದರೆ ಕೋಟೆ ಕೆಳಭಾಗಕ್ಕೆ ಗುರಿಯಾಗಿಟ್ಟುಕೊಂಡಿರುವ ಫಿರಂಗಿ ಕಾಣಿಸುತ್ತದೆ. ಟಿಪ್ಪು ಸುಲ್ತಾನನ ಕಾಲದ ಫಿರಂಗಿ ಅದು. ಅದಾದ ಬಳಿಕ ಬಂಡೆಯನ್ನು ಕೊರೆದು ನಿರ್ಮಿಸಲಾಗಿರುವ ಸುಸಜ್ಜಿತ ಮೆಟ್ಟಲುಗಳಿವೆ. ಬಂಡೆಗಳ ನಡುವಿನಿಂದ ಬರುವ ನೀರು ಮೆಟ್ಟಿಲ ಮೇಲೆ ಇಳಿದು ಹೋಗುವುದರಿಂದ ಅಲ್ಲಿ ಪಾಚಿಗಟ್ಟಿದೆ. ಸುಮಾರು ಎರಡೂವರೆ ಗಂಟೆ ಬಳಿಕ ಕೋಟೆಯ ತುದಿ ತಲುಪಿದೆವು. ಅಲ್ಲಿ ಟಿಪ್ಪು ನಿರ್ಮಿಸಿದ ಶಸ್ತ್ರಾಸ್ತ್ರಗಳ ಕೋಠಿ ಇದೆ. ಅದೂ ಭಾಗಶಃ ಧ್ವಂಸವಾಗಿದೆ. ಅಲ್ಲಿ ಎಂದೂ ಬತ್ತದ ಕೊಳ ಇದೆ.

ಅಂದಹಾಗೆ ಈ ಕೋಟೆ ಕಟ್ಟಿಸಿದ್ದು ಬಂಗವಾಡಿಯ (ಈಗಿನ ಬಂಗಾಡಿ) ಬಂಗ ಅರಸರು. ಬಂಗ ಮನೆತನದ ಮೊದಲ ಅರಸನಾಗಿದ್ದ ವೀರ ನರಸಿಂಹ ಬಂಗ ಕ್ರಿ.ಶ 1157ರಲ್ಲಿ ತನ್ನ ಪ್ರಾಂತ್ಯದ ರಕ್ಷಣೆಗಾಗಿ ಈ ಕೋಟೆಯನ್ನು ಕಟ್ಟಿಸಿದ್ದ. ಬಂಗವಾಡಿಯ ಸಮೀಪವೇ ಇದ್ದ ಈ ಬೃಹತ್‌ ಗುಡ್ಡವನ್ನೇ ಕೋಟೆಯನ್ನಾಗಿ ಪರಿವರ್ತಿಸಿದ. ಬಳಿಕ ಅದಕ್ಕೆ ತನ್ನ ಹೆಸರನ್ನೇ ಇಟ್ಟ. ಹೀಗಾಗಿ ಇದಕ್ಕೆ ನರಸಿಂಹಗಡ ಎನ್ನುವ ಹೆಸರಿದೆ. 1794ರಲ್ಲಿ ಈ ಕೋಟೆ ಟಿಪ್ಪು ಸುಲ್ತಾನ್‌ ವಶವಾಗುತ್ತದೆ. ಅಲ್ಲಿರುವ ಕಮಾನು, ಕೋಠಿ ಎಲ್ಲವೂ ಟಿಪ್ಪು ಕಾಲದ್ದೇ. ಟಿಪ್ಪು ತನ್ನ ತಾಯಿಯ ನೆನಪಿಗಾಗಿ ‘ಜಮಲಾಬಾದ್’ ಎಂದು ನಾಮಕರಣ ಮಾಡುತ್ತಾನೆ. ನರಸಿಂಹಗಡ, ಜಮಲಾಬಾದ್ ಎನ್ನುವ ಹೆಸರುಗಳಿದ್ದರೂ, ಸ್ಥಳೀಯರಿಗೆ ಇದು ಗಡಾಯಿಕಲ್ಲು.

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.

ಆಕಾಶದೆತ್ತರದಿಂದ ಕಾಣುವ ಭುವಿಯ ಸೌಂದರ್ಯ

ತಲುಪುವುದು ಹೇಗೆ?
ಬೆಳ್ತಂಗಡಿ ತಾಲ್ಲೂಕು ಕೇಂದ್ರದಿಂದ ಒಂದು ಕಿ.ಮೀ ದೂರದಲ್ಲಿರುವ ಲಾಯಿಲಾ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ 5 ಕಿ.ಮೀ ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ. ಅಲ್ಲಿಂದ 3 ಕಿ.ಮೀ ಹಾದಿ ಕ್ರಮಿಸಿದರೆ ಕೋಟೆಯ ಬುಡಕ್ಕೆ ತಲುಪಬಹುದು. ಮಂಜೊಟ್ಟಿವೆಗೂ ಬಸ್‌ ಸೌಕರ್ಯ ಇದೆ. ಬಳಿಕ ಆಟೊ ಹಿಡಿದು ಸಾಗಬೇಕು. ಸ್ವಂತ ಗಾಡಿಗಳಲ್ಲಿ ಬಂದವರಿಗೆ ಕೋಟೆಯ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇದೆ. ಮಂಗಳೂರು ಜಿಲ್ಲಾ ಕೇಂದ್ರದಿಂದ 2 ಗಂಟೆಯ ದಾರಿ. ಗೂಗಲ್ ಮ್ಯಾಪ್‌ ಬಳಿ ಕೇಳಿದರೆ, ಗಡಾಯಿಕಲ್ಲಿನ ಬುಡದ ಸಮೀಪಕ್ಕೇ ನಿಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.