ADVERTISEMENT

ಪ್ರಯಾಣ ಪ್ರಿಯೆ ಆಲಿಯಾ

ಪ್ರಜಾವಾಣಿ ವಿಶೇಷ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಆಲಿಯಾ ಭಟ್, - ಚಿತ್ರ: ಆರ್. ಶ್ರೀಕಂಠ ಶರ್ಮಾ
ಆಲಿಯಾ ಭಟ್, - ಚಿತ್ರ: ಆರ್. ಶ್ರೀಕಂಠ ಶರ್ಮಾ   

* ನಿಮ್ಮ ಮುಖದಲ್ಲಿ ಇರುವಷ್ಟೇ ಮುಗ್ಧತೆ ಜೀವನದಲ್ಲೂ ಇದೆಯೇ?
ನನಗನಿಸುವ ಮಟ್ಟಿಗೆ ಹೌದು. ನಾನು ತುಂಬಾ ಭಾವುಕಳಾಗ್ತೀನಿ, ಅಷ್ಟೇ ಕೋಪವೂ ಬರುತ್ತೆ. ಇನ್ನೂ ಚಿಕ್ಕ ವಯಸ್ಸು, ಸಹಜವಾಗೇ ಇವೆಲ್ಲ ಇರುತ್ತೆ.

* ಕೌಟುಂಬಿಕ ಕಥೆಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದೀರಲ್ಲ? ಹಿಂದೆ ‘ಶಾಂದಾರ್’, ಈಗ ‘ಕಪೂರ್...’
ಖಂಡಿತ. ಆದರೆ ಹಿಂದಿನ ಸಿನಿಮಾಕ್ಕಿಂತ ಈ ಚಿತ್ರದಲ್ಲಿ ಕಥೆ, ಚಿತ್ರಕಥೆ ತುಂಬಾ ಭಿನ್ನವಾಗಿದೆ. ಸಾಮಾನ್ಯ ಸಿನಿಮಾಗಳಂತೆ ಒಂದು ಹಾಡು, ಅದಾದ ನಂತರ ಫೈಟಿಂಗ್–ಈ ರೀತಿಯ ಸಿನಿಮಾ ಇದಲ್ಲ. ಕೌಟುಂಬಿಕ ಸಿನಿಮಾಗಳಲ್ಲಿ ಒಂದು ಭಾವವಿರುತ್ತಲ್ಲ, ಅದು ನೋಡಲು ತುಂಬಾ ಆಸಕ್ತಿಕರವಾಗಿರುತ್ತದೆ. ಹಾಗಾಗಿ ನನಗೂ ಇಂಥ ಸಿನಿಮಾಗಳು ಇಷ್ಟವಾಗುತ್ತವೆ.

* ‘ಕಪೂರ್ ಅಂಡ್ ಸನ್ಸ್’ ಜೊತೆ ಹೇಗಿತ್ತು?
ಮಜವಾಗಿತ್ತು. ತುಂಬಾ ಕಲಾವಿದರಿದ್ದಾರೆ. ಸೆಟ್‌ನಲ್ಲಿ ಎಲ್ಲರೂ ಒಟ್ಟಾಗಿ ಇರುತ್ತಿದ್ದೆವು. ಒಂಟಿ ಎನ್ನಿಸುವ ಪ್ರಮೇಯವೇ ಇರಲಿಲ್ಲ. ಸಾಕಷ್ಟು ಮಾತುಗಳಿರುತ್ತಿದ್ದವು. ಸಿನಿಮಾದಲ್ಲಿ ವಿಚಿತ್ರ ಕುಟುಂಬ ‘ಕಪೂರ್’. ಯಾವಾಗಲೂ ಕಿತ್ತಾಡುತ್ತ ಇರುತ್ತೀವಿ. ಪ್ರೀತಿಯೂ ಇದ್ದೇ ಇದೆ. ಪ್ರತಿ ಮನೆಯಲ್ಲೂ ಇರುವ ಕಥೆ ಇದು. ನನ್ನದು ತುಂಬಾ ಖುಷಿ ಖುಷಿಯಾಗಿರುವ ಪಾತ್ರ. ಪಾರ್ಟಿ, ಮಸ್ತಿ ಮಾಡಿಕೊಂಡಿರುತ್ತೇನೆ. ಇದು ಚಿತ್ರಕಥೆಯ ಏಕತಾನತೆಯನ್ನು ದೂರಮಾಡುತ್ತದೆ.

* ನಿಮ್ಮ ಸಹ ಕಲಾವಿದರ ಬಗ್ಗೆ ಹೇಳಿ.
ಸಿದ್ದಾರ್ಥ್ ಮತ್ತೆ ಫವಾದ್ ಇಬ್ಬರಲ್ಲೂ ಒಳ್ಳೆಯ ಹೊಂದಾಣಿಕೆ ಇದೆ. ಎಲ್ಲರೂ ಅವರ ಹಿಂದೆ ಬಿದ್ದಿರುತ್ತಾರೆ. ಪ್ರೆಸ್ ಮೀಟ್‌ಗಳಲ್ಲೂ ಆಗಿದ್ದು ಅದೇ! ಸಿದ್ದಾರ್ಥ್ ಜೊತೆ ಎರಡನೇ ಬಾರಿ ಕೆಲಸ ಮಾಡುತ್ತಿರುವುದು. ಕ್ಯಾಮೆರಾ ಮುಂದೆ ತುಂಬಾ ಕೂಲ್ ಆಗಿರುತ್ತಾರೆ. ವೈಯಕ್ತಿಕವಾಗಿಯೂ ಹಾಗೆಯೇ. ಅವರಿಬ್ಬರೂ ಸೆಟ್‌ನಲ್ಲಿ ಎಲ್ಲರೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಶೂಟಿಂಗ್‌ನ ಕೊನೇ ದಿನ ಅವರಿಗೆಂದೇ ಪಾರ್ಟಿ ಇತ್ತು. ಏಕೆಂದರೆ ಇಬ್ಬರೂ ನಾಯಕರು ಸೆಟ್‌ನಲ್ಲಿ ಯಾವಾಗಲೂ ಸಾಕಷ್ಟು ಬ್ಯುಸಿ ಆಗಿಯೇ ಇರುತ್ತಿದ್ದರು.

* ರೊಮ್ಯಾಂಟಿಕ್, ಹಾಟ್ ದೃಶ್ಯಗಳಲ್ಲಿ ಅಭಿನಯಿಸುವಾಗ ಹೇಗನ್ನಿಸುತ್ತೆ? ಉದಾಹರಣೆಗೆ ನಿಮ್ಮನ್ನು ‘ಶಾಂದಾರ್’ನಲ್ಲಿ ಬಿಕಿನಿಯಲ್ಲಿ ನೋಡಿದ್ದೆವು.
ಆ ದೃಶ್ಯ ಬೀಚ್‌ನಲ್ಲಿತ್ತು. ಹಾಗಾಗಿ ಬಿಕಿನಿ ಹಾಕಬೇಕಾಯ್ತು. ಆ ಸಂದರ್ಭದಲ್ಲಿ ಸ್ವಲ್ಪ ಚಳಿ ಚಳಿ ಅನ್ನಿಸುತ್ತಿತ್ತು (ನಗುತ್ತಾ). ಇಂಥ ದೃಶ್ಯಗಳಲ್ಲಿ ಕಲಾವಿದರು ಸ್ವಲ್ಪ ಹೆಚ್ಚೇ ಜಾಗ್ರತರಾಗಿರುವಂತೆ ಕಾಣುತ್ತಾರೆ. ಅದರ ಹೊರತಾಗಿ ಅದೂ ಒಂದು ಅಭಿನಯವಷ್ಟೇ. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಅಭಿನಯಿಸುವುದು ಸಾಹಸ ದೃಶ್ಯಗಳಲ್ಲಿ ಅಭಿನಯಿಸುವುದಕ್ಕೆ ಸಮ.

* ನೀವು ರೊಮ್ಯಾಂಟಿಕ್ ಸಿನಿಮಾಗಳನ್ನು ಇಷ್ಟಪಡುತ್ತೀರಿ ಅನ್ನಿಸುತ್ತೆ? ‘ಟೂ ಸ್ಟೇಟ್ಸ್’ ಚಿತ್ರಕ್ಕಾಗಿ ‘ಮೋಸ್ಟ್ ಎಂಟರ್‌ಟೇನಿಂಗ್ ಆ್ಯಕ್ಟರ್ ಇನ್ ಎ ರೊಮ್ಯಾಂಟಿಕ್ ಫಿಲ್ಮ್’ ಪ್ರಶಸ್ತಿಯೂ ನಿಮ್ಮದಾಗಿದೆ.
ಅದರಲ್ಲಿ ಎರಡು ಮಾತೇ ಇಲ್ಲ. ಸಿನಿಮಾ ಉದ್ಯಮದಲ್ಲಿ ರೊಮ್ಯಾಂಟಿಕ್ ಸಿನಿಮಾಗಳ ಪಾಲು ದೊಡ್ಡದು. ನಾವು ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡುತ್ತಲೇ ಬೆಳೆದಿದ್ದು. ಈ ಸಿನಿಮಾಗಳು ನನಗೂ ಇಷ್ಟವೇ. ಆದರೆ ನನಗೆ ಆ್ಯಕ್ಷನ್ ಸಿನಿಮಾಗಳನ್ನು ಮಾಡಬೇಕೆಂಬ ಆಸೆಯೂ ಇದೆ. ಹುಡುಗಿಯರು ಹೆಚ್ಚಾಗಿ ಸಾಹಸ ಪ್ರಧಾನ ಪಾತ್ರಗಳನ್ನು ಮಾಡುವುದಿಲ್ಲವಲ್ಲ, ಹಾಗಾಗಿ.

* ನಟನೆ ಬಿಟ್ಟು ಇನ್ನೇನು ಇಷ್ಟ?
ಪ್ರಯಾಣ ಇಷ್ಟ. ಓದುವುದು, ಈಜುವುದು ಹವ್ಯಾಸ. ಖಾಲಿ ಇದ್ದಾಗ ಕಣ್ತುಂಬ ನಿದ್ದೆ ಮಾಡುತ್ತೇನೆ.

* ಟೀವಿ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಇದೆಯೇ?
ರಿಯಾಲಿಟಿ ಷೋಗಳಲ್ಲಿ ಪಾಲ್ಗೊಳ್ಳುವ ಆಸೆ ಇದೆ. ಇನ್ನೂ ಅಂಥ ಅವಕಾಶ ಬಂದಿಲ್ಲ.

* ಮುಂದಿನ ಸಿನಿಮಾಗಳು?
ಅಭಿಷೇಕ್ ಚೌಬೆ ನಿರ್ದೇಶನದ ‘ಉಡ್ತಾ ಪಂಜಾಬ್’ ಜೂನ್‌ನಲ್ಲಿ ಬಿಡುಗಡೆಯಾಗುತ್ತದೆ. ಅದನ್ನು ಬಿಟ್ಟು ಗೌರಿ ಶಿಂಧೆ ನಿರ್ದೇಶನದ ಮತ್ತೊಂದು ಸಿನಿಮಾ ಇದೆ. ಅದರಲ್ಲಿ ಶಾರುಕ್ ಖಾನ್ ಅವರೊಂದಿಗೆ ಅಭಿನಯಿಸುತ್ತಿದ್ದೇನೆ. ಈ ವರ್ಷಾಂತ್ಯದಲ್ಲಿ ಆ ಸಿನಿಮಾವೂ ತೆರೆಗೆ ಬರಲಿದೆ.

* ಮದುವೆ, ಕನಸಿನ ಹುಡುಗ, ಬಾಯ್ ಫ್ರೆಂಡ್ ಬಗ್ಗೆ ಏನಾದರೂ ಕನಸುಗಳು?
ಖಂಡಿತ ಇಲ್ಲ. ಮದುವೆ ಇನ್ನು ತುಂಬಾ ದೂರದ ಮಾತು. ಸದ್ಯ ಕೆಲಸದ ಕುರಿತಾದ ಯೋಚನೆಗಳು ಮಾತ್ರ.

* ಬೆಂಗಳೂರಿನ ಬಗ್ಗೆ ಏನಾದರೂ ಮಧುರ ಭಾವಗಳು...
ಬೆಂಗಳೂರು ನಾನು ಇಷ್ಟ ಪಡುವ ನಗರಗಳಲ್ಲೊಂದು. ಸಿನಿಮಾ ಪ್ರಚಾರಕ್ಕಾಗಿ ಆಗಾಗ ಇಲ್ಲಿ ಬರುತ್ತಲೇ ಇರುತ್ತೇನೆ. ನನಗೆ ಹಸಿರು ಇಷ್ಟ. ಇಲ್ಲಿ ಎಷ್ಟೊಂದು ಮರಗಳು, ಹಸಿರು. ವಾತಾವರಣ ಎಷ್ಟು ಆಹ್ಲಾದವಾಗಿರುತ್ತದೆ. ಇಲ್ಲಿನ ಸಂಸ್ಕೃತಿಯೂ ನನ್ನ ಮನಸಿಗೆ ಹಿಡಿಸುತ್ತದೆ.

ದಕ್ಷಿಣ ಭಾರತದ ತಿಂಡಿಗಳೆಂದರೆ ಖುಷಿ. ಇಲ್ಲಿ ಎಲ್ಲ ರೀತಿಯ ತಿನಿಸುಗಳೂ ಸಿಗುತ್ತವೆ. ಎಷ್ಟೊಂದು ಮ್ಯೂಸಿಯಂ, ಅಮ್ಯೂಸ್‌ಮೆಂಟ್ ಪಾರ್ಕ್ ಇರುವ ಈ ನಗರವನ್ನು ಗಾರ್ಡನ್ ಸಿಟಿ ಎಂದೇ ನಾನು ನೆನೆಯುವುದು. ಇಲ್ಲಿಗೆ ಬಂದರೆ ಒಂದು ದಿನವಾದರೂ ಉಳಿಯುತ್ತೇನೆ. ಹೊರಗಡೆ ಸುತ್ತಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.