ADVERTISEMENT

ಸ್ತ್ರೀ ತಲ್ಲಣಗಳ ಅಡಗಿಸಿಕೊಂಡ ಗೆರೆಗಳು

ಕಲಾಪ

ಅನಿತಾ ಎಚ್.
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಪೋಲೆಂಡ್‌ ವ್ಯಂಗ್ಯಚಿತ್ರಕಾರ ರಚಿಸಿರುವ ಈ ಕಲಾಕೃತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ
ಪೋಲೆಂಡ್‌ ವ್ಯಂಗ್ಯಚಿತ್ರಕಾರ ರಚಿಸಿರುವ ಈ ಕಲಾಕೃತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ   

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ವ್ಯಂಗ್ಯಚಿತ್ರಕಾರರ ಗ್ಯಾಲರಿಯು ‘ಮಹಿಳೆಯರ ಹಕ್ಕುಗಳ’ ಕುರಿತು ಭಾರತ ಸೇರಿದಂತೆ ವಿವಿಧ ದೇಶಗಳ ವ್ಯಂಗ್ಯಚಿತ್ರಕಾರರು ರಚಿಸಿರುವ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಿದೆ. ಮಾರ್ಚ್‌ 19ರವರೆಗೆ ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವೀಕ್ಷಣೆಗೆ ಅವಕಾಶವಿದೆ.

‘ದೇಶ, ಭಾಷೆ, ಸಂಸ್ಕೃತಿ ಬೇರೆಯಾದರೂ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮಾತ್ರ ಸಾರ್ವತ್ರಿಕ. ಮಹಿಳೆಯರ ಮೇಲಿನ ಶೋಷಣೆ ವಿರುದ್ಧ, ಮಹಿಳಾ  ಹಕ್ಕುಗಳಿಗಾಗಿನ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ವಿವಿಧ ದೇಶಗಳ ವ್ಯಂಗ್ಯಚಿತ್ರಕಾರರೂ ವ್ಯಂಗ್ಯಚಿತ್ರಗಳ ಮೂಲಕ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ವಿ.ಜಿ.ನರೇಂದ್ರ.

‘ಪ್ರಪಂಚದ ಮೊದಲ ಆನ್‌ಲೈನ್‌ ವ್ಯಂಗ್ಯಚಿತ್ರ ಪತ್ರಿಕೆ ‘toons Mag’   ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಹಕ್ಕುಗಳ ವಿಷಯದ ಮೇಲೆ ವ್ಯಂಗ್ಯಚಿತ್ರ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಗೆ 79 ದೇಶಗಳ 562 ವ್ಯಂಗ್ಯಚಿತ್ರಕಾರರು 1,592 ವ್ಯಂಗ್ಯಚಿತ್ರಗಳನ್ನು ಕಳುಹಿಸಿದ್ದರು. ಆಯ್ದ 60 ವ್ಯಂಗ್ಯಚಿತ್ರಗಳನ್ನು ಸಂಸ್ಥೆಗೆ ಕಳುಹಿಸುವಂತೆ ‘toons Mag’  ಸಂಸ್ಥಾಪಕ ಆರಿಫ್‌ ಉರ್‌ ರೆಹಮಾನ್‌ ಅವರಿಗೆ ಮನವಿ ಮಾಡಿದ್ದೆವು.

ಅಂತೆಯೇ ಭಾರತ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಕೆನಡಾ, ಟರ್ಕಿ, ಗ್ರೀಸ್‌, ಸರ್ಬಿಯಾ, ನಾರ್ವೆ, ಉಕ್ರೇನ್‌, ಆಸ್ಟ್ರೇಲಿಯಾ, ಕೊಲಂಬಿಯಾ ಮುಂತಾದ ದೇಶಗಳ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿದೆ’ ಎನ್ನುತ್ತಾರೆ ಅವರು.


‘ಭಾರತ ಮತ್ತು ನಾರ್ವೆಯಲ್ಲಿ ಏಕಕಾಲದಲ್ಲಿ ಪ್ರದರ್ಶನ ನಡೆಯುತ್ತಿದ್ದು, ಸ್ಪರ್ಧೆಯಲ್ಲಿ ಪೋಲೆಂಡ್‌, ಕ್ರೊವೇಷಿಯಾ ಮತ್ತು ಅಮೆರಿಕದ ವ್ಯಂಗ್ಯಚಿತ್ರಗಳು  ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡಿವೆ’ ಎನ್ನುವ ಮಾಹಿತಿ ನೀಡುತ್ತಾರೆ ಅವರು.

‘ಸದ್ಯ ನಾರ್ವೆಯಲ್ಲಿ ನೆಲೆಸಿರುವ ಆರಿಫ್‌ ಉರ್‌ ರೆಹಮಾನ್‌ ಬಾಂಗ್ಲಾದೇಶ ಮೂಲದವರು. ಅವರಿಗೆ ಬಾಲ್ಯದಿಂದಲೂ ವ್ಯಂಗ್ಯಚಿತ್ರಗಳ ಬಗ್ಗೆ ಅಪಾರ ಆಸಕ್ತಿ. 2004ರಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಅವರ ಮೊದಲ ವ್ಯಂಗ್ಯಚಿತ್ರ ಪ್ರದರ್ಶನಗೊಂಡಿತ್ತು. ಸುಮಾರು 10 ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ಭ್ರಷ್ಟಾಚಾರ ವಿರೋಧಿ ಹಾಗೂ ರಾಜಕೀಯ ವ್ಯಂಗ್ಯಚಿತ್ರಗಳಿಗೆ 2006–2008ರ ಅವಧಿಯಲ್ಲಿ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದವು’ ಎಂದು ಆರಿಫ್‌ ಅವರ ಪರಿಚಯ ನೀಡುತ್ತಾರೆ ನರೇಂದ್ರ.

‘‘ನನ್ನ ತಾಯಿಯದು ಬಾಲ್ಯ ವಿವಾಹ. ಮದುವೆ ಎಂದರೆ ಏನೆಂದು ಗೊತ್ತಿರಲಿಲ್ಲವಂತೆ. ಹನ್ನೆರಡನೇ ವಯಸ್ಸಿಗೇ ಗರ್ಭಿಣಿಯಾದಳು. ಆದರೆ ಮಗು ಬದುಕುಳಿಯಲಿಲ್ಲ. ಹದಿಮೂರನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾದಳು. ಆಗ ಹುಟ್ಟಿದವನೇ ನಾನು. ನಂತರ ನನಗೊಬ್ಬ ತಂಗಿ ಹುಟ್ಟಿದಳು. ಸ್ವಲ್ಪ ಸಮಯದ ನಂತರ ತಂದೆ ನನ್ನ ತಾಯಿಗೆ ವಿಚ್ಛೇದನ ನೀಡಿದರು. ಆಗ ಆಕೆ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.

‘ನಾನು ಓದಿದ್ದರೆ ಉದ್ಯೋಗ ಪಡೆದು ನಿಮ್ಮಿಬ್ಬರನ್ನು ಚೆನ್ನಾಗಿ ಸಾಕಬಹುದಿತ್ತು’ ಎಂದು ಸದಾ ಕೊರಗುತ್ತಿದ್ದಳು. ನನ್ನ ತಾಯಿ ಅನಕ್ಷರಸ್ಥೆಯಾದರೂ ಅತ್ಯಂತ ಮಾನವೀಯ ವ್ಯಕ್ತಿತ್ವದವಳು. ಆಕೆಯ ಬಗ್ಗೆ ನನಗೆ ಹೆಮ್ಮ ಇದೆ. 2012ರ ಏಪ್ರಿಲ್‌ನಲ್ಲಿ ಆಕೆಯನ್ನು ಕಳೆದುಕೊಂಡೆ.

ಮಹಿಳಾ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜನೆಗೆ ನನ್ನ ತಾಯಿಯೇ ಪ್ರೇರಣೆ’’ ಎಂದು ನೆನೆಯುತ್ತಾರೆ ಆರಿಫ್‌ ಉರ್‌ ರೆಹಮಾನ್‌.
ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಗ್ಯಾಲರಿ, ಎಂ.ಜಿ. ರಸ್ತೆ. ಮಾಹಿತಿಗೆ: 09980091428 

*
ಆರಿಫ್‌ ಬದುಕಿನ ಕಷ್ಟದ ಹಾದಿ
2007ರಲ್ಲಿ ಬಾಂಗ್ಲಾದೇಶದ ಪತ್ರಿಕೆಯೊಂದು ಆರಿಫ್‌ ಅವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಈ ವ್ಯಂಗ್ಯಚಿತ್ರ ಪ್ರವಾದಿ ಮೊಹಮದ್‌ ಅವರನ್ನು ಅವಮಾನಿಸುವಂತಿದೆ ಎಂದು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದವು. ಸರ್ಕಾರದಿಂದಲೂ ಬಂಧನ, ಚಿತ್ರಹಿಂಸೆಗಳನ್ನು ಎದುರಿಸಬೇಕಾಯಿತು.

ಕುಟುಂಬ ಸದಸ್ಯರ ಭೇಟಿಗೂ ಅವಕಾಶ ನಿರಾಕರಿಸಲಾಗಿತ್ತು.  ಯಾವ ವಕೀಲರೂ ಅವರ ಪರ ವಕಾಲತ್ತು ಮಾಡಲು ತಯಾರಿರಲಿಲ್ಲ. ಕಾರಾಗೃಹದಲ್ಲಿ ಇದ್ದ ಸಂದರ್ಭದಲ್ಲಿ ಮೂಲಭೂತವಾದಿಗಳು ಅವರ ಹತ್ಯೆಗೂ ಯತ್ನ ನಡೆಸಿದ್ದರಂತೆ. ಸುಮಾರು ಆರು ತಿಂಗಳ ಬಳಿಕ ವಕೀಲರೊಬ್ಬರ ಸಹಾಯದಿಂದ ಜಾಮೀನಿನ ಮೇಲೆ ಅವರು ಬಿಡುಗಡೆಯಾದರು.

ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ಎರಡು ತಿಂಗಳ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನೂ ತೆರಬೇಕಾಯಿತು. ಈ ಎಲ್ಲದರಿಂದ ನೊಂದು ಬಾಂಗ್ಲಾದೇಶ ತನಗೆ ಸುರಕ್ಷಿತವಲ್ಲ ಎಂದು ಭಾವಿಸಿ ನಾರ್ವೆಯಲ್ಲಿ ನೆಲೆಸಿದ್ದಾರೆ ಆರಿಫ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.