ADVERTISEMENT

ದಲಿತ ಯುವಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಚೆನ್ನೈ/ತಿರುಪೂರ್‌ (ಪಿಟಿಐ):   ಸಾರ್ವಜನಿಕರ ಎದುರಿನಲ್ಲಿ ಅಳಿಯನನ್ನು ಭಾನುವಾರ ಹತ್ಯೆ ಮಾಡಿದ ವ್ಯಕ್ತಿ ಸೋಮವಾರ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ಇದೊಂದು ಮರ್ಯಾದೆಗೇಡು ಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ.

ಮೂರು ಜನ ಸೇರಿ ದಲಿತ ಯುವಕನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ತಿರುಪೂರ್‌ ಜಿಲ್ಲೆಯ ಉದುಮಲಪೇಟೆಯಲ್ಲಿ ಪತಿ ಶಂಕರನ ಜತೆ ಹೋಗುತ್ತಿದ್ದಾಗ ತಂದೆ ಮತ್ತು ಇನ್ನಿಬ್ಬರು ಸೇರಿಕೊಂಡು ಹಲ್ಲೆ ಮಾಡಿ, ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಕೌಸಲ್ಯಾ ಹೇಳಿದ್ದಾರೆ.

ಜನನಿಬಿಡ ರಸ್ತೆಯಲ್ಲಿ ಈ ಹತ್ಯೆ ನಡೆದರೂ ಜನರು ಸಹಾಯಕ್ಕೆ ಧಾವಿಸದೆ ರಸ್ತೆ ಬದಿಯಲ್ಲಿ ನಿಂತು ನೋಡುತ್ತಿದ್ದರು. ಶಂಕರ್ ರಕ್ತಡ ಮಡುವಿನಲ್ಲಿ ಬಿದ್ದ ನಂತರ ಮೂವರೂ ದ್ವಿಚಕ್ರ ವಾಹನದಲ್ಲಿ ಪರಾರಿ ಆದರು. ತಂದೆ ಹಾಗೂ ಇನ್ನಿಬ್ಬರು ತನ್ನ ಮೇಲೂ ಹಲ್ಲೆ ನಡೆಸಿದರು ಎಂದು ಕೌಸಲ್ಯಾ ಹೇಳಿದ್ದಾರೆ.

ಘಟನೆಯ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಟಿಎನ್‌ಸಿಸಿ, ಎಂಡಿಎಂಕೆ, ವಿಸಿಕೆ ಮತ್ತು ಡಿಕೆ ಪಕ್ಷದ ಮುಖಂಡರು ದಲಿತ ಯುವಕನ ಹತ್ಯೆಯನ್ನು ಖಂಡಿಸಿದ್ದಾರೆ ಹಾಗೂ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ನಮಕ್ಕಲ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಗೋಕುಲ್ ರಾಜ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಈ ಹತ್ಯೆಯೂ ಮರ್ಯಾದೆಗೇಡು ಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ.

ಪ್ರಕ್ಷುಬ್ಧ ವಾತಾವರಣ:  ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಶಂಕರನ ಕುಟುಂಬದ ಸದಸ್ಯರು ಉದುಮಲಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು ಹಾಗೂ ಶವವನ್ನು ಪಡೆಯಲು ನಿರಾಕರಿಸಿದರು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.