ADVERTISEMENT

ಹಿಂಗಾರು ಬರ: ₹ 1417 ಕೋಟಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ನವದೆಹಲಿ: ಹಿಂಗಾರು ಮಳೆ ಅಭಾವದಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ₹ 6733 ಕೋಟಿ ಮೊತ್ತದ ಬೆಳೆ ಹಾನಿಯಾಗಿದ್ದು, ಬರಗಾಲ ಪರಿಹಾರ ನಿಧಿಯಿಂದ ತಕ್ಷಣ ₹ 1417 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸೋಮವಾರ ಕೇಂದ್ರಕ್ಕೆ ಆಗ್ರಹಿಸಿದೆ.

ಉತ್ತರ ಕರ್ನಾಟಕದ 62 ತಾಲೂಕುಗಳ 22.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ಹಾಳಾಗಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಕೃಷಿ ಸಚಿವರಾದ ರಾಧ ಮೋಹನ್‌ಸಿಂಗ್‌ ಅವರ ಗಮನಕ್ಕೆ  ತಂದಿದ್ದಾರೆ.

ಹಿರಿಯ ಅಧಿಕಾರಿ ದಿನೇಶ್‌ ಕುಮಾರ್‌ ನೇತೃತ್ವದ ಕೇಂದ್ರ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ಕೊಟ್ಟು ಬರಗಾಲ ಸ್ಥಿತಿ ವೀಕ್ಷಿಸಿದೆ.  ಒಂದೆರಡು ಅದು ಕೃಷಿ ಸಚಿವರಿಗೆ ವರದಿ ಕೊಡಲಿದ್ದು, ಕರ್ನಾಟಕ ಕೇಳಿರುವಷ್ಟು ನೆರವು ನೀಡುವಂತೆ ಒತ್ತಾಯ ಮಾಡಲಾಗಿದೆ ಎಂದು ಇಬ್ಬರೂ ಸಚಿವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಹಿಂದೆಂದೂ ಕಂಡರಿಯದ ಬರಗಾಲಕ್ಕೆ ಸಿಕ್ಕಿದೆ. ಮುಂಗಾರು ವೈಫಲ್ಯದಿಂದ 27 ಜಿಲ್ಲೆಗಳಲ್ಲಿ ಬರಗಾಲ ಕಾಣಿಸಿಕೊಂಡಿತ್ತು. ಆಗಲೂ ಕೇಂದ್ರದ ನೆರವಿಗೆ ಮನವಿ ಸಲ್ಲಿಸಲಾಗಿತ್ತು. ನಾವು ಕೇಳಿದ್ದು ₹ 3840 ಕೋಟಿ. ಕೊಟ್ಟಿದ್ದು ₹ 1540 ಕೋಟಿ. ಕನಿಷ್ಠ  ₹ 2000 ಕೋಟಿ ಸಿಗಬಹುದು ಎಂದು ಭಾವಿಸಿದ್ದೆವು’ ಎಂದು ಪ್ರಸಾದ್‌ ವಿವರಿಸಿದರು.

ಮುಂಗಾರು ಹಂಗಾಮಿಗಾಗಿ ಬಿಡುಗಡೆಯಾಗಿದ್ದ ಹಣದಲ್ಲಿ ಶೇ.80 ರಷ್ಟು ಖರ್ಚಾಗಿದೆ. 25 ಜಿಲ್ಲೆಗಳ ಸುಮಾರು 29 ಲಕ್ಷ ರೈತರಿಗೆ ಪರಿಹಾರ ವಿತರಿಸಲಾಗಿದೆ. ರೈತರ ಖಾತೆಗಳಿಗೇ ಹಣ ಜಮಾ ಮಾಡಲಾಗಿದೆ. ಪರಿಹಾರ ವಿತರಣೆಯಲ್ಲಿ ಇದುವರೆಗೆ ದೂರುಗಳು ಬಂದಿಲ್ಲ ಎಂದು ಕೃಷಿ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂಗಾರು ಬೆಳೆ ಹಾನಿಗೆ ಪರಿಹಾರ ಕೇಳಿ ಮೊದಲು ಮನವಿ ಸಲ್ಲಿಸಿದ್ದು ಕರ್ನಾಟಕ. ಅಷ್ಟೇ ತ್ವರಿತವಾಗಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ವಸ್ತು ಸ್ಥಿತಿ ಅರ್ಥ ಮಾಡಿಕೊಳ್ಳದೆ ಬಿಜೆಪಿ ನಾಯಕರು ಸರ್ಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆಂದು ಅವರು  ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲ ಪರಿಹಾರ ವಿತರಣೆ ಸರಿಯಾಗಿಲ್ಲ ಎಂದು ಲೋಕಸಭೆಗೆ ಸುಳ್ಳು ಹೇಳಲಾಗಿದೆ. ರೈತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸರಿಯಾದ ಮಾಹಿತಿ ಕೊಡದೆ, ಸುಳ್ಳು ಹೇಳಿಸಲಾಗಿದೆ ಎಂದು ಅವರು ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದರು.

ಮುಂಗಾರು ಹಂಗಾಮಿನಲ್ಲಿ ಮಹಾರಾಷ್ಟ್ರಕ್ಕೆ ₹ 3 ಸಾವಿರ ಕೋಟಿ, ಮಧ್ಯ ಪ್ರದೇಶಕ್ಕೆ ₹ 2 ಸಾವಿರ ಕೋಟಿ ನೆರವು ಕೊಡಲಾಗಿದೆ. ಕರ್ನಾಟಕಕ್ಕೆ ₹ 1540 ಕೋಟಿ ಬಿಡುಗಡೆ ಮಾಡಲಾಗಿದೆ. ಈ ತಾರತಮ್ಯದ ಬಗ್ಗೆ  ಬಿಜೆಪಿ ನಾಯಕರು ದನಿ ಎತ್ತಲಿ ಎಂದು ಕೃಷ್ಣ ಬೈರೇಗೌಡರು ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.