ADVERTISEMENT

ರೈಲು ಹಳಿಗಳ ಮೇಲೆ ರೈತರ ಪ್ರತಿಭಟನೆ: 40 ರೈಲುಗಳ ಸಂಚಾರ ರದ್ದು

ಪಿಟಿಐ
Published 19 ಏಪ್ರಿಲ್ 2024, 15:30 IST
Last Updated 19 ಏಪ್ರಿಲ್ 2024, 15:30 IST
   

ಅಂಬಾಲ: ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರ ಬಿಡುಗಡೆಗೆ ಒತ್ತಾಯಿಸಿ ಪಂಜಾಬ್–ಹರಿಯಾಣ ಗಡಿಯ ಶಂಭು ಎಂಬಲ್ಲಿ ರೈಲು ಹಳಿಗಳನ್ನು ಅಡ್ಡಗಟ್ಟಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಮೂರನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.

ರೈತರ ಪ್ರತಿಭಟನೆಯ ಪರಿಣಾಮ ಅಂಬಾಲ–ಅಮೃತಸರದ ಮಾರ್ಗದಲ್ಲಿ 40 ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, 54 ರೈಲುಗಳ ಮಾರ್ಗ ಬದಲಿಸಲಾಗಿದೆ. ರೈಲು ಪ್ರಯಾಣಿಕರು ಪ್ರಯಾಸಪಡುವಂತಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವು ರೈತರ ಬಿಡುಗಡೆಯಾಗುವವರೆಗೆ ಮುಂದುವರಿಯಲಿದೆ ಎಂದು ರೈತ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ. 

ADVERTISEMENT

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇನ್ನಿತರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಎಸ್‌ಕೆಎಂ ಮತ್ತು ಕೆಎಂಎಂ ಸಂಘಟನೆಗಳು ‘ದೆಹಲಿ ಚಲೊ’ಗೆ ಕರೆ ನೀಡಿದ್ದು, ಫೆ.12ರಂದು ಪಂಜಾಬ್ ಮತ್ತು ಹರಿಯಾಣದ ಗಡಿ ಭಾಗವಾಗಿರುವ ಶಂಭು ಮತ್ತು ಖನೌರಿಯಲ್ಲಿ ರೈತರ ರ‍್ಯಾಲಿಗೆ ತಡೆಯೊಡ್ಡಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.