ADVERTISEMENT

ಪ್ರಧಾನಿ ವಿದೇಶ ಪ್ರವಾಸದ ನಿಯೋಗದ ಮಾಹಿತಿ ಬಹಿರಂಗಪಡಿಸಿ

ಪ್ರಧಾನಿ ಕಚೇರಿಗೆ ಮುಖ್ಯ ಮಾಹಿತಿ ಆಯುಕ್ತರ ಸೂಚನೆ

ಪಿಟಿಐ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದ ನಿಯೋಗದಲ್ಲಿದ್ದ ಸದಸ್ಯರ ಹೆಸರನ್ನು ಪ್ರಕಟಿಸುವಂತೆ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ಆರ್.ಕೆ. ಮಾಥುರ್ ಅವರು ಪ್ರಧಾನಿ ಕಚೇರಿಗೆ (ಪಿಎಂಒ) ಸೂಚಿಸಿದ್ದಾರೆ.

‘ರಾಷ್ಟ್ರೀಯ ಭದ್ರತೆ’ ಕಾರಣದಿಂದ ಮಾಹಿತಿ ಬಹಿರಂಗಪಡಿಸಲು ಆಗದು ಎಂಬ ಪಿಎಂಒ ಪ್ರತಿಕ್ರಿಯೆಯನ್ನು ಅವರು ತಿರಸ್ಕರಿಸಿದ್ದಾರೆ.

ಪ್ರಧಾನಿ ಜೊತೆ ತೆರಳುವ ಭದ್ರತಾ ಸಿಬ್ಬಂದಿ ಹಾಗೂ ಪ್ರಧಾನಿ ಭದ್ರತೆಗೆ ಸಂಬಂಧಿಸಿದ ಮಾಹಿತಿ ಹೊಂದಿರುವವರ ವಿವರಗಳನ್ನು ಬಹಿರಂಗಪಡಿಸಬೇಕಿಲ್ಲ. ಅವರಿಗೆ ವಿನಾಯಿತಿ ಇದೆ. ಆದರೆ ಸರ್ಕಾರದ ಜೊತೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ಪ್ರಧಾನಿ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದರೆ, ಅವರ ಹೆಸರನ್ನು ಪ್ರಕಟಿಸಬೇಕು ಎಂಬುದು ಮಾಹಿತಿ ಆಯುಕ್ತರ ಸೂಚನೆ.

ADVERTISEMENT

ಪ್ರಧಾನಿ ನಿಯೋಗದ ಮಾಹಿತಿ ಕುರಿತಂತೆ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನೀರಜ್ ಶರ್ಮಾ ಹಾಗೂ ಅಯೂಬ್ ಅಲಿ ಎಂಬುವರು ಅಂತಿಮವಾಗಿ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಮೋದಿ ಅವರ ಜೊತೆ ತೆರಳಿದ್ದ ಖಾಸಗಿ ಕಂಪನಿಗಳ ಸಿಇಒಗಳು, ಮುಖ್ಯಸ್ಥರು, ಪಾಲುದಾರರು, ಅಧಿಕಾರಿಗಳ ಮಾಹಿತಿ ನೀಡುವಂತೆ ನೀರಜ್ ಕೇಳಿದ್ದರು.

ಮೋದಿ ಅವರ ಮನೆ ಮತ್ತು ಕಚೇರಿಯ ತಿಂಗಳ ಖರ್ಚು ವೆಚ್ಚದ ವಿವರ ನೀಡುವಂತೆ ಅಲಿ ಅವರು ಕೇಳಿದ್ದರು. ಪ್ರಧಾನಿ ಅವರನ್ನು ಭೇಟಿಯಾಗುವ ವಿಧಾನ, ಅವರು ಮನೆ ಮತ್ತು ಕಚೇರಿಗಳಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಸಭೆಗಳ ಸಂಖ್ಯೆ ಮೊದಲಾದ ಮಾಹಿತಿಯನ್ನೂ ಬಯಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.