ADVERTISEMENT

ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆ: ಪರಿಶೀಲಿಸಲು ಸಿಬಿಎಸ್‌ಇಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:50 IST
Last Updated 26 ಏಪ್ರಿಲ್ 2024, 15:50 IST
ಸಿಬಿಎಸ್‌ಇ
ಸಿಬಿಎಸ್‌ಇ   

ನವದೆಹಲಿ: 2025–26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಶಿಕ್ಷಣ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಸಚಿವಾಲಯ ಮತ್ತು ಸಿಬಿಎಸ್‌ಇ ಮುಂದಿನ ತಿಂಗಳು ಶಾಲಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಿವೆ. ಈಗಾಗಲೇ ಸಿಬಿಎಸ್‌ಇ ಸೆಮಿಸ್ಟರ್‌ ಪದ್ಧತಿಯನ್ನು ಪರಿಚಯಿಸುವ ಯೋಜನೆಯನ್ನು ತಳ್ಳಿಹಾಕಿದೆ.

ಪದವಿ ಪೂರ್ವ ತರಗತಿಗಳ ಪ್ರವೇಶದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರದಂತೆ ಮತ್ತೊಂದು ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಪೂರಕವಾಗಿ ಶೈಕ್ಷಣಿಕ ಕ್ಯಾಲೆಂಡರ್‌ ರಚಿಸುವತ್ತ ಸಿಬಿಎಸ್‌ಇ ಕಾರ್ಯೋನ್ಮುಖವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘2025–26ನೇ ಸಾಲಿನಿಂದ ವರ್ಷದ ಕೊನೆಯಲ್ಲಿ ಎರಡು ಆವೃತ್ತಿಗಳಲ್ಲಿ ಬೋರ್ಡ್‌ ಪರೀಕ್ಷೆ ನಡೆಸಲು ಯೋಜಿಸಲಾಗುತ್ತಿದೆ. ಇದರ ಕಾರ್ಯ ವಿಧಾನಗಳು ಹೇಗಿರಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ’ ಎಂದು ಅವರು ಹೇಳಿದ್ದಾರೆ. 

ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಯನ್ನು 2024–25ನೇ ಸಾಲಿನಿಂದಲೇ ಪರಿಚಯಿಸುವ ಆರಂಭಿಕ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹೊಂದಿತ್ತು. ಆದರೆ ಅದನ್ನು ಒಂದು ವರ್ಷ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆ ಬರೆಯುವ ಆಯ್ಕೆ ಒದಗಿಸಬೇಕು ಎಂದು ಪ್ರಸ್ತಾಪಿಸಿದೆ. 

ಈ ನಿಟ್ಟಿನಲ್ಲಿ ಸಿಬಿಎಸ್‌ಇ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಗರಿಷ್ಠ ಪ್ರಯೋಜನ ದೊರೆಯುವಂತೆ ಮಾಡಲು ಅದು ಚಿಂತಿಸುತ್ತಿದೆ. ಎರಡು ಪರೀಕ್ಷೆಗಳನ್ನು ನಡೆಸಲು ಪ್ರಮುಖವಾಗಿ ಎದುರಾಗುವ ಸವಾಲು ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದ್ದಾಗಿದೆ. ಇದನ್ನು ಹೇಗೆ ಎದುರಿಸುವುದು ಹಾಗೂ ದೋಷರಹಿತವಾಗಿ ಪರೀಕ್ಷೆಗಳನ್ನು ನಡೆಸುವುದರ ಕುರಿತು ಮಂಡಳಿ ಪರಿಶೀಲನೆಯಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ‘ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಸಂಪೂರ್ಣ ಐಚ್ಛಿಕವಾದದ್ದು. ಎಂಜಿನಿಯರಿಂಗ್‌ ಪ್ರವೇಶಕ್ಕೆ ನಡೆಯುವ ಜೆಇಇ ಪರೀಕ್ಷೆಯಂತೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ಪಡೆಯುತ್ತಾರೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.