ADVERTISEMENT

ಪ್ರಧಾನಿ ಮೋದಿಯ ದ್ವೇಷ ಭಾಷಣ: ಜೆ‍ಪಿ ನಡ್ಡಾಗೆ ಚುನಾವಣಾ ಆಯೋಗ ನೋಟಿಸ್‌

ಪಿಟಿಐ
Published 25 ಏಪ್ರಿಲ್ 2024, 10:14 IST
Last Updated 25 ಏಪ್ರಿಲ್ 2024, 10:14 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಬಿಜೆಪಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್ ಜಾರಿ ಮಾಡಿರುವ ಚುನಾವಣಾ ಆಯೋಗವು, ಅವರು ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗಳ ವಿರುದ್ಧ ಬಿಜೆಪಿ ನೀಡಿದ್ದ ದೂರಿನ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ನಡ್ಡಾ ಮತ್ತು ಖರ್ಗೆ ಅವರು ನೋಟಿಸ್‌ಗಳಿಗೆ ಸೋಮವಾರ ಮಧ್ಯಾಹ್ನ 11ರ ಒಳಗೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ.

ADVERTISEMENT

ಮೋದಿ ಅವರು ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಸಿಪಿಐ, ಸಿಪಿಐಎಂಎಲ್‌ ಮತ್ತು ನಾಗರಿಕ ಸಂಘಟನೆಗಳು ನೀಡಿದ್ದ ದೂರಿನ ಆಧಾರದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ನೋಟಿಸ್ ನೀಡಲಾಗಿದೆ.

ಕಾಂಗ್ರೆಸ್ ಪಕ್ಷವು ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲು ಪ್ರಯತ್ನಿಸುತ್ತಿದ್ದು, ಅದು ಮಹಿಳೆಯರ ಮಂಗಳಸೂತ್ರವನ್ನೂ ಬಿಡುವುದಿಲ್ಲ ಎಂದು ಮೋದಿಯವರು ಹೇಳಿದ್ದನ್ನು ದೂರುಗಳಲ್ಲಿ ಉಲ್ಲೇಖಿಸಲಾಗಿತ್ತು.

ಮೋದಿ ಹೇಳಿಕೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರೆ, ಬಿಜೆಪಿಯು, ‘ಕಾಂಗ್ರೆಸ್ ಪಕ್ಷ ಸಮಾಜದ ಹಿಂದುಳಿದವರ ಹಿತ ಬಲಿ ಕೊಟ್ಟು ಮುಸ್ಲಿಮರ ಓಲೈಕೆಯ ರಾಜಕಾರಣ ಮಾಡುತ್ತಿದೆ’ ಎಂದು ದೂರಿತ್ತು.

ಘನತೆಯುಳ್ಳ ರಾಜಕೀಯ ಭಾಷೆಯನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉದ್ದೇಶವನ್ನು ಅರಿತು ವರ್ತಿಸಬೇಕು ಎನ್ನುವುದನ್ನು ತಾರಾ ಪ್ರಚಾರಕರ ಗಮನಕ್ಕೆ ತರುವಂತೆ ಚುನಾವಣಾ ಆಯೋಗವು ನಡ್ಡಾ ಅವರಿಗೆ ಸೂಚಿಸಿದೆ.

ಅತ್ಯುನ್ನತ ಸ್ಥಾನಗಳಲ್ಲಿರುವವರ ಪ್ರಚಾರ ಭಾಷಣಗಳು ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಆಯೋಗವು ಪ್ರತಿಕ್ರಿಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ನೀಡಿದ್ದ ದೂರುಗಳಿಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರನ್ನು ಆಯೋಗವು ಆರೋಪಮುಕ್ತಗೊಳಿಸಿತ್ತು. ಆಗಿನ ಚುನಾವಣಾ ಆಯುಕ್ತ ಅಶೋಕ್ ಲವಾಸಾ, ಪ್ರಧಾನಿ ವಿರುದ್ಧದ ದೂರುಗಳ ಸಂಬಂಧ ಆಯೋಗವು ತೆಗೆದುಕೊಂಡಿದ್ದ ಕೆಲವು ತೀರ್ಮಾನಗಳಿಗೆ ಭಿನ್ನಮತ ವ್ಯಕ್ತಪಡಿಸಿದ್ದರು.

ಪ್ರಜಾ ಪ್ರತಿನಿಧಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿ, ತಾರಾ ಪ್ರಚಾರಕರನ್ನು ನಿಯಂತ್ರಿಸುವ ಮೊದಲ ಹೆಜ್ಜೆಯಾಗಿ ಆಯೋಗವು ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ. ವೈಯಕ್ತಿಕವಾಗಿ ತಾರಾ ಪ್ರಚಾರಕರು ಮಾಡುವ ಭಾಷಣಕ್ಕೆ ಅವರೇ ಜವಾಬ್ದಾರರಾಗಿದ್ದರೂ ಆಯೋಗವು ಆಯಾ ಪ್ರಕರಣ ಆಧರಿಸಿ ಪಕ್ಷದ ಅಧ್ಯಕ್ಷರೊಂದಿಗೆ ವ್ಯವಹರಿಸುತ್ತದೆ.

ಇತ್ತೀಚೆಗೆ ಕಾಂಗ್ರೆಸ್‌ನ ಇಬ್ಬರು ಮುಖಂಡರು ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಬಂಧ ಆಯೋಗವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ವಿವರಣೆ ಕೇಳಿತ್ತು.

ಇದೇ ರೀತಿ ಚುನಾವಣಾ ಆಯೋಗವು ಈಗ ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ಹೇಳಿಕೆಗಳ ವಿರುದ್ಧ ಬಿಜೆಪಿ ನೀಡಿರುವ ದೂರಿನ ಆಧಾರದ ಮೇಲೆ ಎಐಸಿಸಿ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ. ರಾಹುಲ್ ಅವರು ಕೇರಳದ ಕೊಟ್ಟಾಯಂನಲ್ಲಿ ಪ್ರಧಾನಿ ಮೋದಿ ಅವರು ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಜಾರಿಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ದುರುದ್ದೇಶದಿಂದ ಅತ್ಯಂತ ಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ರಾಹುಲ್ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿಯು ನಮ್ಮ ಭಾಷೆ, ಚರಿತ್ರೆ ಮತ್ತು ಪರಂಪರೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿತ್ತು.

ಮಲ್ಲಿಕಾರ್ಜುನ ಖರ್ಗೆ ಅವರು ಎಸ್‌ಸಿ, ಎಸ್‌ಟಿ ಕುರಿತ ತಾರತಮ್ಯದಿಂದಾಗಿ ತಮ್ಮನ್ನು ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಿರಲಿಲ್ಲ ಎಂದು ಹೇಳುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ದೂರು ನೀಡಿತ್ತು.

ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೀಡಿರುವ ನೋಟಿಸ್‌ಗಳಲ್ಲಿ ನೇರವಾಗಿ ಮೋದಿ, ರಾಹುಲ್ ಅಥವಾ ಖರ್ಗೆ ಅವರ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಆದರೆ, ಆಯೋಗಕ್ಕೆ ಸಲ್ಲಿಸಲಾಗಿದ್ದ ದೂರಿನ ಪ್ರತಿಗಳನ್ನು ನೋಟಿಸ್‌ನೊಂದಿಗೆ ಲಗತ್ತಿಸಲಾಗಿದ್ದು, ಅದರಲ್ಲಿ ಆರೋಪದ ವಿವರಗಳಿವೆ.

ಆಯೋಗದ ಅತಿ ಜಾಗರೂಕತೆ: ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ದೂರುಗಳ ವಿಚಾರದಲ್ಲಿ ಚುನಾವಣಾ ಆಯೋಗವು ಅತಿ ಜಾಗರೂಕತೆಯಿಂದ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಪಕ್ಷವು ಮೋದಿ ಅವರ ವಿರುದ್ಧ ನೀಡಿದ್ದ ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಬಿಜೆಪಿಗೆ ನೋಟಿಸ್ ನೀಡಿರುವ ಬಗ್ಗೆ ಕಾಂಗ್ರೆಸ್ ಈ ರೀತಿ ಪ್ರತಿಕ್ರಿಯಿಸಿದೆ. ‘ಪ್ರಧಾನಿ ವಿರುದ್ಧ ನಾವು ದೂರು ನೀಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ನಾವು ಗೃಹ ಸಚಿವರ (ಅಮಿತ್ ಶಾ) ವಿರುದ್ಧ ದೂರು ನೀಡಿದ್ದೆವು. ಆದರೆ ಯಾವ ಕ್ರಮವನ್ನೂ ಜರುಗಿಸಿರಲಿಲ್ಲ. ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘ಆಯೋಗವು ವಿವಿಧ ಪಕ್ಷಗಳ ದೂರುಗಳನ್ನು ನಿಷ್ಪಕ್ಷಪಾತವಾಗಿ ಪರಿಗಣಿಸಬೇಕು ಮತ್ತು ಅಗತ್ಯ ಬಿದ್ದಾಗ ನೋಟಿಸ್ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ಅವರಿಗೆ ನೋಟಿಸ್ ನೀಡಬೇಕಿತ್ತು ಎಂದು ಪಕ್ಷ ಬಯಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಆಯೋಗದವರು ಪ್ರಧಾನಿ ವಿಚಾರದಲ್ಲಿ ಅತಿ–ಅತಿಯಾಗಿ ಜಾಗರೂಕರಾಗಿದ್ದಾರೆ. ಗೃಹ ಸಚಿವರ ವಿಚಾರದಲ್ಲಿ ಅತಿ ಜಾಗರೂಕರಾಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.