ADVERTISEMENT

ವಿದ್ಯುತ್ ಪೂರೈಕೆ: ಕರ್ನಾಟಕ, ಗುಜರಾತ್ ಮುಂದೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:29 IST
Last Updated 23 ಏಪ್ರಿಲ್ 2024, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಿದ್ಯುತ್ ಪೂರೈಕೆಯ ಗುಣಮಟ್ಟದ ಜಾಲ ನಿರ್ವಹಣೆಯಲ್ಲಿ ಕರ್ನಾಟಕ ಮತ್ತು ಗುಜರಾತ್‌ ಮಂಚೂಣಿಯಲ್ಲಿವೆ ಎಂದು ಇಂಧನ ಆರ್ಥಿಕತೆ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆ (ಐಇಇಎಫ್‌ಎ) ಮತ್ತು ಎಂಬರ್‌ ಜಂಟಿಯಾಗಿ ಪ್ರಕಟಿಸಿರುವ ವರದಿ ತಿಳಿಸಿದೆ.

 ರಾಜ್ಯಗಳ ಮಟ್ಟದಲ್ಲಿ ವಿದ್ಯುತ್‌ ವಿತರಣಾ ವ್ಯವಸ್ಥೆಯ ಮೌಲ್ಯಮಾಪನ ಮಾಡುವ ಈ ಸಂಸ್ಥೆಗಳು ಸತತ 2ನೇ ವರ್ಷ ವರದಿ  ಬಿಡುಗಡೆ ಮಾಡಿವೆ. ಹಿಂದಿನ ವರ್ಷ 16 ರಾಜ್ಯಗಳ ವ್ಯವಸ್ಥೆಯ ಮೌಲ್ಯಮಾಪನ ಆಗಿತ್ತು. ಈ ವರ್ಷ 21 ರಾಜ್ಯಗಳಲ್ಲಿನ ಸ್ಥಿತಿ ವಿಶ್ಲೇಷಿಸಲಾಗಿದೆ.

ವಿಶ್ಲೇಷಿಸಲಾದ 21 ರಾಜ್ಯಗಳು ಕಳೆದ ಏಳು-ಅಂದರೆ 2018ರಿಂದ 2014ರ (ನವೆಂಬರ್‌ವರೆಗೆ) ಹಣಕಾಸು ವರ್ಷದಲ್ಲಿ-ಭಾರತದ ಶೇ 95ರಷ್ಟು ವಿದ್ಯುತ್ ಬೇಡಿಕೆಯನ್ನು ಈಡೇರಿಸಿದ್ದವು.

ADVERTISEMENT

2024ನೇ ಸಾಲಿನಲ್ಲಿ ಮೌಲ್ಯಮಾಪನದ ಮಾನದಂಡಗಳು ಬದಲಾಗಿದ್ದವು. ವಿದ್ಯುತ್ ಸರಬರಾಜು ವ್ಯವಸ್ಥೆ, ಭಾಗೀದಾರರ ಅಭಿಪ್ರಾಯ ಮತ್ತು ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಲಾಗಿತ್ತು.

ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳು ಎಲ್ಲ ಆಯಾಮಗಳಿಂದ ಉತ್ತಮ ಸಾಧನೆ ತೋರಿವೆ. ವಿದ್ಯುತ್ ಜಾಲ ವ್ಯವಸ್ಥೆಗೆ ಪರಿಣಾಮಕಾರಿಯಾಗಿ ಮರುಬಳಕೆ ಇಂಧನ ಮೂಲಗಳನ್ನು ಸೇರ್ಪಡೆಗೊಳಿಸಿವೆ.

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇನ್ನೂ ಸುಧಾರಣೆ ಕಾಣಬೇಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ರಾಜ್ಯಗಳಲ್ಲಿನ ಪರಿಸ್ಥಿತಿ ಬದಲಾಗಿಲ್ಲ.

‘ಬದಲಾದ ಹವಾಮಾನ ಸ್ಥಿತಿ, ತ್ವರಿತಗತಿಯ ಆರ್ಥಿಕ ಚಟುವಟಿಕೆಯ ಪರಿಣಾಮ ಪ್ರತಿ ವರ್ಷ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ವಿದ್ಯುತ್‌ ಜಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮರುಬಳಕೆ ಇಂಧನ ಸೇರಿಸಲು ಕೇಂದ್ರ ಸರ್ಕಾರ ಒತ್ತು ನೀಡಿದೆ. ಆದರೆ, ರಾಜ್ಯಗಳಲ್ಲಿ ಅದರ ನಿರ್ವಹಣೆಯ ಹಲವು ಪರಿಮಾಣಗಳಲ್ಲಿ ನಿರಂತರವಾಗಿ ಆಗಬೇಕಿದೆ’ ಎಂದು ಐಇಇಎಫ್‌ಎ ದಕ್ಷಿಣ ಏಷ್ಯಾದ ನಿರ್ದೇಶಕ ವಿಭೂತಿ ಗರ್ಗ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.