ADVERTISEMENT

ಪಂಜಾಬ್‌ | ಬಿಜೆಪಿ ಲೋಕಸಭಾ ಅಭ್ಯರ್ಥಿ ವಿರುದ್ಧ ರೈತರ ಪ್ರತಿಭಟನೆ

ಪಿಟಿಐ
Published 27 ಏಪ್ರಿಲ್ 2024, 16:01 IST
Last Updated 27 ಏಪ್ರಿಲ್ 2024, 16:01 IST
..
..   

ಚಂಡೀಗಢ: ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಬಬ್ಬೂ ಅವರ ವಿರುದ್ಧ ರೈತರ ಒಂದು ಗುಂಪು ಶನಿವಾರ ಪ್ರತಿಭಟನೆ ನಡೆಸಿತು.

ಗುರುದಾಸಪುರದ ಸಥಿಯಾಲಿ ಗ್ರಾಮದಲ್ಲಿ ದಿನೇಶ್ ಪ್ರಚಾರ ಮಾಡುತ್ತಿದ್ದ ವೇಳೆ ಕಪ್ಪು ಬಾವುಟ ಹಿಡಿದಿದ್ದ ರೈತರು ಪ್ರತಿಭಟನೆ ನಡೆಸಿದ್ದಲ್ಲದೇ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪ್ರವೇಶಿಸದಂತೆ ಪೊಲೀಸರನ್ನು ಬಳಸಿ ತಡೆದದ್ದರ ಬಗ್ಗೆ ವಾಗ್ದಾಳಿ ನಡೆಸಿದರು. ಕೇಂದ್ರವು ರೈತರ ಬೆಳೆಗಳಿಗೆ ಎಂಎಸ್‌ಪಿ ನೀಡುವ ಬಗ್ಗೆ ಕಾನೂನು ಖಾತರಿ ನೀಡದೇ ಇರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದಿನೇಶ್ ವಿರುದ್ಧ ರೈತರು ಪ್ರತಿಭಟಿಸುತ್ತಿರುವುದು ಇದು ಎರಡನೇ ಬಾರಿ. ಏಪ್ರಿಲ್ 21ರಂದು ಬಟಾಲಾದಲ್ಲಿ ಅವರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ಹಲವು ಅಭ್ಯರ್ಥಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ಫರೀದ್‌ಕೋಟ್ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್, ಅಮೃತಸರದ ತರಣ್‌ಜಿತ್ ಸಿಂಗ್ ಸಂಧು, ಪಟಿಯಾಲ ಅಭ್ಯರ್ಥಿ ಪ್ರಣೀತ್ ಕೌರ್ ಅವರು ರೈತರ ಕೋಪಕ್ಕೆ ಗುರಿಯಾಗಿದ್ದರು.

ಬಿಜೆಪಿ ಅಭ್ಯರ್ಥಿಗಳನ್ನು ವಿರೋಧಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈಗಾಗಲೇ ಘೋಷಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಶಿಕ್ಷಿಸುವಂತೆ ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.