ADVERTISEMENT

ಆರೋಪಿಗಳ ಬಂಧನಕ್ಕೆ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಹತ್ಯೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಬಂದ್‌ ಪರಿಣಾಮ ಸದಾ ಜನನಿಬಿಡವಾಗಿರುವ ಮೈಸೂರಿನ ಕೆ.ಆರ್‌. ವೃತ್ತ ಬಿಕೋ ಎನ್ನುತ್ತಿತ್ತು   ಪ್ರಜಾವಾಣಿ ಚಿತ್ರಗಳು
ಹತ್ಯೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಬಂದ್‌ ಪರಿಣಾಮ ಸದಾ ಜನನಿಬಿಡವಾಗಿರುವ ಮೈಸೂರಿನ ಕೆ.ಆರ್‌. ವೃತ್ತ ಬಿಕೋ ಎನ್ನುತ್ತಿತ್ತು ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಮೈಸೂರಿನಲ್ಲಿ ನಡೆದಿರುವ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಅಲ್ಲಿನ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರಕರಣದ ತನಿಖೆ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರನ್ನು ಮೈಸೂರಿಗೆ ಕಳುಹಿಸಿದ್ದೇನೆ’ ಎಂದರು.

‘ಇಂತಹ ವಿಚಾರದಲ್ಲಿ ಬಿಜೆಪಿಯವರು ಯಾವಾಗಲೂ ರಾಜಕಾರಣ ಮಾಡುತ್ತಾರೆ. ಆದರೆ, ನಾವು ಕಾನೂನು ಪ್ರಕಾರವಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು. ‘ಮೃತನ ಕುಟುಂಬಕ್ಕೆ ಕಾನೂನು ಪ್ರಕಾರವಾಗಿ  ಪರಿಹಾರ ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯಾವುದೇ ರಾಜಕೀಯ ಪಕ್ಷಗಳು ಜನರಿಗೆ ಪ್ರಚೋದನೆ ಮಾಡಬಾರದು. ಶಾಸಕರಾಗಲೀ, ಸಂಸದರಾಗಲೀ ಪ್ರಚೋದನೆ ಮಾಡಬಾರದು. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದರು. ಮನವಿ: ‘ಮೈಸೂರಿನ ನಾಗರಿಕರು ಯಾವುದೇ ಊಹಾಪೋಹಗಳಿಗೆ ಒಳಗಾಗಬಾರದು. ಪ್ರಚೋದನೆಗಳಿಗೆ ಕಿವಿಗೊಡಬಾರದು. ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದರು.

‘ರಾಜಕೀಯ ಬಣ್ಣ ಬೇಡ’
ಉಜಿರೆ/ಹಾಸನ:
‘ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ರಾಜು ಎಂಬವರ ಹತ್ಯೆ ಘಟನೆಗೆ ರಾಜಕೀಯ ಬಣ್ಣ ಹಚ್ಚಬಾರದು.  ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಧರ್ಮಸ್ಥಳದಲ್ಲಿ ಸೋಮವಾರ ನೂತನ ಪೊಲೀಸ್ ಠಾಣೆಯ  ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮೈಸೂರಿಗೆ ಕಳುಹಿಸಿದ್ದು ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದರು.

ಹಾಸನ ವರದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಯಲ್ಲೂ ಘಟನೆ ಕುರಿತು ಚರ್ಚಿಸಿದ್ದು, ರಾಜು ಅವರ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ನೀಡಲು ಅವರು ಒಪ್ಪಿದ್ದಾರೆ ಎಂದು ಪರಮೇಶ್ವರ ತಿಳಿಸಿದರು.

ADVERTISEMENT

ಮುಖ್ಯಮಂತ್ರಿ ವಿರುದ್ಧ ಆರೋಪ
ಮೈಸೂರು: ‘ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ಶಾಂತಿಯ ಬೀಡಾಗಿತ್ತು. ಆದರೆ, ಈಗ ಬಿಹಾರ, ಉತ್ತರ ಪ್ರದೇಶ, ಅಸ್ಸಾಂನಂತೆ ಗಲಭೆಯ ನಾಡಾಗುತ್ತಿದೆ. ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಂತೆ ವರ್ತಿಸುತ್ತಿಲ್ಲ. ಅವರು ‘ಅಹಿಂದ’ ಮುಖ್ಯಮಂತ್ರಿಯಾಗಿದ್ದಾರೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ’ ಎಂದರು.

ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹಿಂದೂಗಳ ಕೊಲೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರವೀಣ್‌ ಪೂಜಾರಿ, ಕೊಡಗು ಜಿಲ್ಲೆಯಲ್ಲಿ ಕುಟ್ಟಪ್ಪ, ಈಗ ಮೈಸೂರಿನಲ್ಲಿ ರಾಜು ಕೊಲೆಯಾಗಿದ್ದಾರೆ. ಇಷ್ಟಾದರೂ ಕಾನೂನು, ಸುವ್ಯವಸ್ಥೆಯ ಮೇಲೆ ನಿಗಾ ಇಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ ಎಂದು ಟೀಕಿಸಿದರು.

ಎಸ್‌ಡಿಪಿಐ ಮಾದರಿಯ ಸಂಘಟನೆಗಳ ಮೇಲಿದ್ದ ಪ್ರಕರಣಗಳನ್ನೆಲ್ಲಾ ವಾಪಸು ಪಡೆಯಲಾಗಿದೆ. ಹೀಗಿರುವಾಗ ಸಮಾಜ ವಿರೋಧಿಶಕ್ತಿಗಳು ಬಲಗೊಳ್ಳುವುದಿಲ್ಲವೇ ಎಂದು ಸಂಸದ ಪ್ರತಾಪ ಸಿಂಹ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.