ADVERTISEMENT

ವಿಟಿಯು ಮೇಲೆ ದಾಳಿ: ‘ಸುಪ್ರೀಂ’ಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಚಿಕ್ಕಬಳ್ಳಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯವರು ಸುಮಾರು ₹ 440 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಮಹೇಶಪ್ಪ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿ ವಿಟಿಯು ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ನಡೆದ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಅಧೀನದಲ್ಲಿದ್ದರೂ ವಿಟಿಯು ರಾಜ್ಯ ಸರ್ಕಾರದಿಂದ ಅನುದಾನ ಪಡೆದಿಲ್ಲ. ಇತರ ಮೂಲಗಳಿಂದ ಸಂಗ್ರಹಿಸಿದ ಹಣವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವಿತ್ತು. ಆದರೆ ಅಷ್ಟರಲ್ಲಿ ಆದಾಯ ತೆರಿಗೆ ಇಲಾಖೆಯವರು ಹಣ ವಶಪಡಿಸಿಕೊಂಡರು. ಈಗ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ ಎಂದರು.

ಸರ್ಕಾರದ ವಿಶ್ವವಿದ್ಯಾಲಯವಾಗಿದ್ದರೂ ಸರ್ಕಾರದಿಂದ ಯಾಕೆ ಅನುದಾನ ಪಡೆದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪ್ರಶ್ನಿಸಿತು. ವಿಟಿಯು ಆರ್ಥಿಕವಾಗಿ ಸಶಕ್ತ ಎಂಬುದನ್ನು ಸಹ ಪರಿಗಣಿಸಲಿಲ್ಲ. ವಶದಲ್ಲಿರುವ ಹಣವನ್ನು ಪುನಃ ಪಡೆಯಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದೇವೆ. ಈ ಕಾರ್ಯದಲ್ಲಿ ಅಗತ್ಯ ನೆರವು ನೀಡುವಂತೆ ಸರ್ಕಾರಕ್ಕೂ ಮನವಿ ಮಾಡಿದ್ದೇವೆ ಎಂದರು.

ವಿಟಿಯು ನ್ಯಾಕ್‌ ಮಾನ್ಯತೆ (ಅಕ್ರೆಡಿಷನ್‌) ಮತ್ತು ಯುಜಿಸಿ ಅಂಗಸಂಸ್ಥೆಯಾಗಿದ್ದಲ್ಲಿ (ಅಫಿಲಿಯೇಷನ್‌) ಇಷ್ಟೆಲ್ಲ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇದು ಸಾಧ್ಯವಾಗಲು ವಿಟಿಯುಗೆ ಇನ್ನಷ್ಟು ಸಿಬ್ಬಂದಿ ಮತ್ತು ಮೂಲಸೌಕರ್ಯ ಬೇಕು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.