ADVERTISEMENT

450 ಜನರಿಗೆ ಒಬ್ಬ ಪೌರ ಕಾರ್ಮಿಕ ನೇಮಕ

10 ಪಾಲಿಕೆಗಳಿಗೆ ಪ್ರತ್ಯೇಕ ಆಯುಕ್ತಾಲಯ: ಸೊರಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
450 ಜನರಿಗೆ ಒಬ್ಬ ಪೌರ ಕಾರ್ಮಿಕ ನೇಮಕ
450 ಜನರಿಗೆ ಒಬ್ಬ ಪೌರ ಕಾರ್ಮಿಕ ನೇಮಕ   

ಶಿವಮೊಗ್ಗ: ನಗರ, ಪಟ್ಟಣ ಪ್ರದೇಶದ 450 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್‌ ಕುಮಾರ್‌ ಸೊರಕೆ ತಿಳಿಸಿದರು.

ಪ್ರಸ್ತುತ 750 ಜನರಿಗೆ ಒಬ್ಬ ಪೌರ ಕಾರ್ಮಿಕ ಇದ್ದಾನೆ. ಬದಲಾದ ಕಾಲಘಟ್ಟದಲ್ಲಿ ಕೆಲಸದ ಒತ್ತಡವೂ ಹೆಚ್ಚಾಗಿದೆ. ಹಾಗಾಗಿ, ಹೆಚ್ಚಿನ ಪೌರ ಕಾರ್ಮಿಕರ ಅಗತ್ಯವಿದೆ ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಪ್ರಸ್ತುತ 22 ಸಾವಿರ ಪೌರ ಕಾರ್ಮಿಕರು ಇದ್ದು, ಅವರಲ್ಲಿ ಶೇ 50ರಷ್ಟು ನೌಕರರು ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು. ಹಂತಹಂತವಾಗಿ ಗುತ್ತಿಗೆ ಪದ್ಧತಿ ರದ್ದು ಮಾಡಿ, ನೇರವಾಗಿ ಇಲಾಖೆ ಅಧೀನದಲ್ಲೇ  ಪ್ರತಿ ಕಾರ್ಮಿಕನಿಗೂ ತಿಂಗಳಿಗೆ
₹ 13 ಸಾವಿರ ನೀಡಲು ನಿರ್ಧರಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಯುಕ್ತಾಲಯ: ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಏಕ ರೀತಿಯ ಆಡಳಿತ, ತ್ವರಿತ ಕಾರ್ಯ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತ್ಯೇಕ ಆಯುಕ್ತಾಲಯ ರಚಿಸಲು ನಿರ್ಧರಿಸಲಾಗಿದೆ.

₹1 ಲಕ್ಷದ ಒಳಗಿನ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೇ ನೇರ ಅಧಿಕಾರ ನೀಡಲಾಗುವುದು. ಮೇಯರ್‌, ಉಪ ಮೇಯರ್‌ ಮತ್ತು ಸದಸ್ಯರ ಗೌರವಧನ ಹೆಚ್ಚಿಸಲಾಗುವುದು. ಸರಿಯಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುವುದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸೊರಕೆ ಅವರು ಭರವಸೆ ನೀಡಿದರು.

ಬಳಕೆಯಾಗದ ₹ 2 ಸಾವಿರ ಕೋಟಿ
ನಗರ ಸ್ಥಳೀಯ ಸಂಸ್ಥೆಗಳಿಗೆ 2010–11ನೇ ಸಾಲಿನಿಂದ ಇಲ್ಲಿಯವರೆಗೂ ವಿವಿಧ ಯೋಜನೆಗಳ ಅಡಿ ಬಿಡುಗಡೆಯಾದ ₹ 2 ಸಾವಿರ ಕೋಟಿ  ಖರ್ಚಾಗದೇ ಉಳಿದಿದೆ.

ಅದಕ್ಕೆ ಕಾರಣ ಹಿಂದೆ ಇದ್ದ ನಿಯಮಗಳು. ಹಾಗಾಗಿ, ನಿಯಮ ಬದಲಿಸಿ, ಹಣವನ್ನು ಇತರೆ ಉದ್ದೇಶಗಳಿಗೂ ಬಳಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಸೊರಕೆ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.