ADVERTISEMENT

ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌

ಬಿಬಿಎಂಪಿ ಸಿವಿಲ್ ಎಂಜಿನಿಯರ್‌ ಹುದ್ದೆಗಳ ನೇಮಕ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:26 IST
Last Updated 20 ಮಾರ್ಚ್ 2024, 16:26 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ (ಬಿಬಿಎಂಪಿ) ಸಹಾಯಕ ಸಿವಿಲ್‌ ಎಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ನಗರದಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಅಗತ್ಯ ನಿರ್ದೇಶನ ನೀಡುವ ನಿಟ್ಟಿನಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಅಮಿಕಸ್‌ ಕ್ಯೂರಿಯೂ (ಕೋರ್ಟ್‌ಗೆ ಸಹಕರಿಸುವ ವಕೀಲ) ಆದ ಹಿರಿಯ ವಕೀಲ ಪ್ರಮೋದ್‌ ಎನ್‌.ಕಠಾವಿ, ‘ಎಂಜಿನಿಯರ್‌ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡುವಂತೆ ಹೈಕೋರ್ಟ್‌ ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ನೇಮಕಾತಿ ಮಾಡಿದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ’ ಎಂದು ನ್ಯಾಯಪೀಠಕ್ಕೆ ಅರುಹಿದರು.

ADVERTISEMENT

ಇದಕ್ಕೆ ಬಿಬಿಎಂಪಿ ಪರ ವಕೀಲ ಎಸ್‌.ಎಚ್‌.ಪ್ರಶಾಂತ್‌, ‘92 ಸಿವಿಲ್‌ ಎಂಜಿನಿಯರ್‌ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಬಿಬಿಎಂಪಿ ಕೋರಿಕೆ ಸಲ್ಲಿಸಿದೆ. ನೇಮಕಾತಿಗೆ ಅರ್ಜಿ ಆಹ್ವಾನಿಸಿ ಕೆಪಿಎಸ್‌ಸಿ ಇದೇ 13ರಂದು ಅಧಿಸೂಚನೆಯನ್ನೂ ಹೊರಡಿಸಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು, ‘ಎಂಜಿನಿಯರ್‌ ಹುದ್ದೆಗಳ ನೇಮಕಾತಿ ಮಾಡುವಂತೆ ನಿರ್ದೇಶಿಸಿ ಹೈಕೋರ್ಟ್‌ 2023ರ ಅಕ್ಟೋಬರ್ 9ರಂದೇ ಖಡಕ್‌ ಆದೇಶ ನೀಡಿದೆ. ಆದರೆ, ಬಿಬಿಎಂಪಿ ಬಳಿ ಅಧಿಸೂಚನೆ ಇಲ್ಲ ಎಂದು ಹೇಳುತ್ತಿದ್ದೀರಿ. ಅಧಿಸೂಚನೆ ಸೇರಿದಂತೆ ಎಲ್ಲಾ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು. ಸಲ್ಲಿಸದೆ ಹೋದರೆ ಕೋರ್ಟ್‌ ಆದೇಶದ ಮೇಲೆ ಆದೇಶ ಹೊರಡಿಸುತ್ತಾ ಹೋಗುತ್ತಿರುತ್ತದೆ. ಅದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಾ ಹೋಗುತ್ತದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಪ್ರಶಾಂತ್, ‘ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಕೆಪಿಎಸ್‌ಸಿಗೆ ಬಿಬಿಎಂಪಿ ಮಾಹಿತಿ ನೀಡಿತ್ತು. ಅಂತೆಯೇ ಕೆಪಿಎಸ್‌ಸಿ ಕೂಡ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ನೇಮಕಾತಿ ಪ್ರಕ್ರಿಯೆಯನ್ನು ಇನ್ನೂ ನಡೆಸಬೇಕಿದೆ. ಆದಾಗ್ಯೂ, ಕೆಪಿಎಸ್‌ಸಿ ಈ ಅರ್ಜಿಯಲ್ಲಿ  ಪ್ರತಿವಾದಿಯಾಗಿಲ್ಲ. ಹಾಗಾಗಿ, ನಮಗಿರುವ ಮಾಹಿತಿಯನ್ನು ಮಾತ್ರವೇ ನ್ಯಾಯಪೀಠಕ್ಕೆ ವಿವರಿಸಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಅರ್ಜಿಯಲ್ಲಿ ಕೆಪಿಎಸ್‌ಸಿಯನ್ನೂ ಪ್ರತಿವಾದಿಯಾಗಿ ಮಾಡಿ’ ಎಂದು ಆದೇಶಿಸಿ ಕೆಪಿಎಸ್‌ಸಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಅಲ್ಲದೆ, ಈ ಹಿಂದೆ ಹೈಕೋರ್ಟ್‌ ನೀಡಿರುವ ಆದೇಶ ಪಾಲನೆಯ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು’ ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಯಾವ ಆದೇಶ?: ‘ಅಕ್ರಮ ಕಟ್ಟಡಗಳನ್ನು ಗುರುತಿಸಿ ಹಾಗೂ ತೆರವು ಕಾರ್ಯಾಚರಣೆ ಕೈಗೊಳ್ಳಲು ಎಂಜಿನಿಯರ್‌ ಸೇರಿದಂತೆ ಇತರೆ ಸಿಬ್ಬಂದಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ 100 ಸಹಾಯಕ ಸಿವಿಲ್‌ ಎಂಜಿನಿಯರ್‌ ಹುದ್ದೆಗಳ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂಬ ಬಿಬಿಎಂಪಿಯ ವಿವರಣೆಯನ್ನು ನ್ಯಾಯಪೀಠ 2023ರ ಅಕ್ಟೋಬರ್ 9ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಿತ್ತು.

ಈ ವಿವರಣೆಯನ್ನು ಆಧರಿಸಿ, ‘ಸಿವಿಲ್‌ ಎಂಜಿನಿಯರಿಂಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ’ ಎಂದು ಬಿಬಿಬಿಎಂಪಿ ಹಾಗೂ ಕೆಪಿಎಸ್‌ಸಿಗೆ ನಿರ್ದೇಶಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.