ADVERTISEMENT

ತಿರುಪತಿ ಲಡ್ಡುಗೆ ನಂದಿನಿ ತು‍ಪ್ಪ ಸ್ಥಗಿತ: ಇದು ಕಾಂಗ್ರೆಸ್ ಅಜೆಂಡಾ ಎಂದ CT ರವಿ

ಕಾಂಗ್ರೆಸ್ ಸುವರ್ಣ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ ಎಂದು ಟ್ವೀಟ್ ಮೂಲಕ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2023, 10:51 IST
Last Updated 31 ಜುಲೈ 2023, 10:51 IST
ಭೀಮಾ ನಾಯ್ಕ್
ಭೀಮಾ ನಾಯ್ಕ್   

ಬೆಂಗಳೂರು: ತಿರುಪತಿಯ ತಿರುಮಲ ದೇವಸ್ಥಾನದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಕೆಗೆ ಕೆಎಂಎಫ್‌ನ ನಂದಿನಿ ತುಪ್ಪವನ್ನು ಪೂರೈಸಲು ಆಗುವುದಿಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಇತ್ತೀಚೆಗೆ ಬಳ್ಳಾರಿಯಲ್ಲಿ ಹೇಳಿದ್ದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿಟಿ ರವಿ, ಕಾಂಗ್ರೆಸ್ ತನ್ನ ಅಜೆಂಡಾ ಸಾಧಿಸಲು ಸುವರ್ಣ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ ಎಂದು ವೆಬ್‌ಸೈಟ್ ಒಂದರ ತುಣುಕನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

ತಿರುಪತಿಗೆ ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪಕ್ಕೆ ಟೆಂಡರ್‌ ಕರೆಯಲಾಗಿತ್ತು. ನಮ್ಮ ದರ ಹಾಗೂ ಗುಣಮಟ್ಟ ಹೆಚ್ಚಿರುವುದರಿಂದ ನಾವು ಆ ಟೆಂಡ್‌ರ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಾಗಿ ಅವರು ಬೇರೆ ಕಂಪನಿಯ ತುಪ್ಪವನ್ನು ನೋಡಿಕೊಳ್ಳುತ್ತಾರೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಜುಲೈ 25 ರಂದು ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು.

ADVERTISEMENT

ಕೆಎಂಎಫ್‌ ಇನ್ಮುಂದೆ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಸುವುದಿಲ್ಲವಂತೆ. ಅಸಮರ್ಥ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡಿತು. ಇದರಿಂದ ಟಿಟಿಡಿಗೆ ಹಿಂದಿನ ಬೆಲೆಯಲ್ಲಿ ತುಪ್ಪ ಪೂರೈಸಲು ಕೆಎಂಎಫ್‌ಗೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿನಾಕಾರಣ ಅಮುಲ್ ಹೆಸರನ್ನು ಎಳೆತಂದು ನಂದಿನಿ ಹೆಸರಿನಲ್ಲಿ ಕೆಟ್ಟ ರಾಜಕಾರಣ ಮಾಡಿತು. ಈಗ ತನ್ನ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ಸುವರ್ಣ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ ಎಂದು ಸಿಟಿ ರವಿ ಹೇಳಿದ್ದಾರೆ.

ಆದರೆ ಇಂದು ಬೆಂಗಳೂರಿನಲ್ಲಿ ಖಾಸಗಿ ವಾಹಿನಿಗಳ ಜೊತೆ ಮಾತನಾಡಿರುವ ಭೀಮಾ ನಾಯ್ಕ್, 2022 ರಿಂದಲೇ ಟಿಟಿಡಿಗೆ ತುಪ್ಪ ಪೂರೈಕೆ ಸ್ಥಗಿತವಾಗಿದೆ. ಆಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಕೆಎಂಎಫ್‌ ಟಿಟಿಡಿ ಟೆಂಡರ್‌ನಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೇಳಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.