ADVERTISEMENT

ತಿರುಪತಿ ಲಡ್ಡುಗೆ ನಂದಿನಿ ತುಪ್ಪ: KMF ಅಧ್ಯಕ್ಷರ ಹೇಳಿಕೆ ಸರಿಯಲ್ಲ ಎಂದ ಟಿಟಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2023, 6:12 IST
Last Updated 1 ಆಗಸ್ಟ್ 2023, 6:12 IST
   

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷ ಹೇಳಿರುವ ಮಾತು ಸತ್ಯಕ್ಕೆ ದೂರವಾಗಿದ್ದು ಎಂದು ಟಿಟಿಡಿಯ ಧರ್ಮರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಕೆಎಂಎಫ್‌ ಅಧ್ಯಕ್ಷರು ನೀಡಿರುವ ಹೇಳಿಕೆ ಸರಿಯಲ್ಲ. ತುಪ್ಪವೂ ಸೇರಿ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಟಿಟಿಡಿ ಇ–ಟೆಂಡರ್‌ ಮೂಲಕ ಸಂಗ್ರಹಿಸುತ್ತದೆ. ಇ–ಟೆಂಡರ್ ಮೂಲಕ ಭಾರತದಾದ್ಯಂತ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಟೆಂಡರ್ ತೆರೆಯುವವರೆಗೂ ಯಾರೆಲ್ಲಾ ಬಿಡ್‌ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯೂ ನಮಗೆ ಇರುವುದಿಲ್ಲ. ಟಿಟಿಡಿ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಟೆಂಡರ್ ನಿಯಮಗಳ ಪ್ರಕಾರ ನಾವು ಬಿಡ್ ಅಂತಿಮಗೊಳಿಸುತ್ತೇವೆ’ ರೆಡ್ಡಿ ಹೇಳಿದ್ದಾರೆ.

ಓದಿ... ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ, ಟೆಂಡರ್ ಕೈತಪ್ಪಿದರೂ ನಷ್ಟವಿಲ್ಲ: ಕಾಂಗ್ರೆಸ್

ADVERTISEMENT

ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದೇನು?

‘ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಸಲು ಟಿಟಿಡಿ ಟೆಂಡರ್‌ ಕರೆದಿತ್ತು. ಆದರೆ, ನಮ್ಮ ಉತ್ಪನ್ನದ ಗುಣಮಟ್ಟ ಹಾಗೂ ಅದಕ್ಕೆ ತಕ್ಕಂತೆ ದರ ಹೆಚ್ಚಿರುವುದರಿಂದ ಪಾಲ್ಗೊಂಡಿಲ್ಲ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ ತಿಳಿಸಿದ್ದರು.

‘2005ರಿಂದಲೂ ಕೆಎಂಎಫ್‌ ತುಪ್ಪವನ್ನು ಪೂರೈಸುತ್ತಿತ್ತು. ತಿರುಪತಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೆ ಶೇ 45ರಷ್ಟು ನಂದಿನಿ ಬ್ರ್ಯಾಂಡ್‌ ತುಪ್ಪವನ್ನೇ ಬಳಸಲಾಗುತ್ತಿತ್ತು. 2022ರಲ್ಲಿ ಕೋರಿಕೆಯ ಮೇರೆಗೆ ಮಾತ್ರ ಪ್ರತಿ ಕೆ.ಜಿ.ಗೆ ₹349ರಂತೆ 345 ಟನ್‌ ತುಪ್ಪ ಪೂರೈಸಲಾಗಿತ್ತು. ಆದರೆ, ಈ ಬಾರಿ ತುಪ್ಪದ ಬೇಡಿಕೆ ನಮ್ಮ ರಾಜ್ಯದಲ್ಲೇ ಹೆಚ್ಚಾಗಿದ್ದು, ಸಂಗ್ರಹದ ಕೊರತೆಯೂ ಇದೆ. ಜತೆಗೆ, ನಿರೀಕ್ಷೆಗೆ ತಕ್ಕಂತೆ ನಮಗೆ ದರ ದೊರೆತಿಲ್ಲ. ಟಿಟಿಡಿ ಟೆಂಡರ್‌ನಲ್ಲಿ ನಾವು ನಿಗದಿಪಡಿಸಿದ ದರ ಮೂರನೇ ಸ್ಥಾನದಲ್ಲಿದೆ. ಹೀಗಾಗಿ, ಕೆಎಂಎಫ್‌ ತುಪ್ಪ ಪೂರೈಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.