ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊದಲ ದಿನ ಮೂವರು ಶಿಕ್ಷಕರು ಅಮಾನತು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 16:14 IST
Last Updated 25 ಮಾರ್ಚ್ 2024, 16:14 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಎಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ಅಣಕು ಪರೀಕ್ಷೆ ಬರೆದು ತನ್ನ ಪೋಷಕರೊಂದಿಗೆ ಪ್ರತಿಭಟಿಸಿದರು. ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ಎಸ್‌. ಜೊತೆಗಿದ್ದರು.
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಎಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ಅಣಕು ಪರೀಕ್ಷೆ ಬರೆದು ತನ್ನ ಪೋಷಕರೊಂದಿಗೆ ಪ್ರತಿಭಟಿಸಿದರು. ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ಎಸ್‌. ಜೊತೆಗಿದ್ದರು.   

ಬೆಂಗಳೂರು: ನಕಲಿಗೆ ಸಹಕರಿಸಿದ ಮೂವರು ಕೊಠಡಿ ಮೇಲ್ವಿಚಾರಕರ ಅಮಾನತು, ಕೆಲವೆಡೆ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ವಿತರಿಸಿದ ಪ್ರಕರಣ ಹೊರತುಪಡಿಸಿ, ಮೊದಲ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಾದ ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌ (ಎನ್‌ಸಿಇಆರ್‌ಟಿ), ಸಂಸ್ಕೃತ ವಿಷಯಗಳಿಗೆ ನಡೆದ ಪರೀಕ್ಷೆಗೆ 8.32 ಲಕ್ಷ ವಿದ್ಯಾರ್ಥಿಗಳು ‍‍(ಶೇ 98.41) ಹಾಜರಾಗಿದ್ದರು. ಹೆಸರು ನೋಂದಾಯಿಸಿದ್ದವರಲ್ಲಿ 13,468 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 

ಯಾದಗಿರಿ ಜಿಲ್ಲೆಯ ಏವೂರ ಸರ್ಕಾರಿ ಪ್ರೌಢಶಾಲೆ ಹಾಗೂ ಸುರಪುರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜು ಪೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಸಹ ಶಿಕ್ಷಕರಾದ ಸಾಹೇಬಗೌಡ ಉಕ್ಕಾಲಿ, ಹಣಮಂತ್ರಾಯ ಅವರನ್ನು ಅಮಾನತು ಮಾಡಲಾಗಿದೆ. 

ADVERTISEMENT

ಇಂಡಿ ಪಟ್ಟಣದ ಸಾಯಿ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲಾಗಿದ್ದು, ನಿರ್ಲಕ್ಷ್ಯದ ಆರೋಪದ ಮೇಲೆ ಕೇಂದ್ರದ ಮೇಲ್ವಿಚಾರಕ ರಾಜಶೇಖರ ಬಂಡೆ ಅವರನ್ನು ಅಮಾನತು ಮಾಡಿಲಾಗಿದೆ. 

ತುಮಕೂರು, ವಿಜಯಪುರ ಜಿಲ್ಲೆ ಸೇರಿದಂತೆ ಕೆಲವಡೆ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೊಠಡಿಗೆ ತಡವಾಗಿ ತಲುಪಿವೆ. ಹಲವೆಡೆ 15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೆಳಿಗ್ಗೆ ನಡೆದರೆ, ಮಧ್ಯಾಹ್ನದ ನಂತರ 5, 8 ಹಾಗೂ 9ನೇ ತರಗತಿಯ ಬೋರ್ಡ್‌ ಪರೀಕ್ಷೆಗಳೂ ಸುಸೂತ್ರವಾಗಿ ನಡೆದವು.  

ಸಿಗದ ಹಾಲ್‌ಟಿಕೆಟ್; ಅಣಕು ಪರೀಕ್ಷೆ

ಹಾವೇರಿ: ‘ಮುಖ್ಯಶಿಕ್ಷಕರ ನಿರ್ಲಕ್ಷ್ಯದಿಂದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರವೇಶ ಪತ್ರ ಬಂದಿಲ್ಲ’ ಎಂದು ಆರೋಪಿಸಿ ರಾಣೆಬೆನ್ನೂರು ತಾಲ್ಲೂಕು ಹರನಗಿರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ತನ್ನ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಅಣಕು ಪರೀಕ್ಷೆ ಬರೆದು ಪ್ರತಿಭಟನೆ ನಡೆಸಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ನಿತ್ಯ ಶಾಲೆಗೆ ಹೋಗುತ್ತಿದ್ದೆ. ಅರ್ಧ ವಾರ್ಷಿಕ ಪರೀಕ್ಷೆ ಸೇರಿ ಮೂರು ಕಿರು ಪರೀಕ್ಷೆ ಬರೆದೆ. ಜನವರಿಯಲ್ಲಿ ಅಲರ್ಜಿ ರೋಗದ ಕಾರಣ ಮುಖ್ಯಶಿಕ್ಷಕರ ಗಮನಕ್ಕೆ ತಂದು ಶಾಲೆಗೆ ರಜೆ ಹಾಕಿದೆ. ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡು ಎಂದು ಧೈರ್ಯ ಹೇಳಿದ ಗುರುಗಳು ಈಗ ಪ್ರವೇಶ ಪತ್ರ ಬಂದಿಲ್ಲ ಎಂದು ಮೋಸ ಮಾಡಿದರು.

ದಯವಿಟ್ಟು ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕೊಡಿ’ಎಂದು ಅಭಿಷೇಕ ಮತ್ತು ಪೋಷಕರು ಕೋರಿದರು. ಅಹವಾಲು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ್ ಹುಗ್ಗಿ ‘ಮುಖ್ಯಶಿಕ್ಷರರ ನಿರ್ಲಕ್ಷ್ಯವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

ವಿದ್ಯಾರ್ಥಿ ಮರಣ

ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕೆರೆಯ ಲೋಕಮ್ಮನಹಳ್ಳಿ ಗೇಟ್‌ನಲ್ಲಿರುವ ಕಂಚಿರಾಯ ಸನಿವಾಸ ಪ್ರೌಢಶಾಲೆ ವಿದ್ಯಾರ್ಥಿ ಮೋಹನ್ ಕುಮಾರ್ ಸಿ.ಎಸ್. ಪರೀಕ್ಷೆ ಬರೆಯುವಾಗಲೇ ಅಸ್ವಸ್ಥಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು. ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರದವರು. ಹುಲ್ಲೇಕೆರೆ ಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ರೋಹಿತ್ ಅಸ್ವಸ್ಥಗೊಂಡರು. ದಂಡಿನಶಿವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.