ADVERTISEMENT

ಫ್ಲಾರಿಡಾ, ಓಹಿಯೊ ಮೇಲೆ ಕಣ್ಣು

ರಿಪಬ್ಲಿಕನ್‌ ಚುನಾವಣೆ: ಟ್ರಂಪ್‌ಗೆ ಗೆಲುವು ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 20:10 IST
Last Updated 14 ಮಾರ್ಚ್ 2016, 20:10 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳ ನಡುವಣ ಪೈಪೋಟಿ ತೀವ್ರ ಕುತೂಹಲಕ್ಕೆ ತಲುಪಿದ್ದು, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆಗಾಗಿ ಫ್ಲಾರಿಡಾ ಮತ್ತು ಓಹಿಯೊಗಳಲ್ಲಿ ಮಂಗಳವಾರ ನಡೆಯಲಿರುವ ಚುನಾವಣೆಯತ್ತ ಎಲ್ಲರ ಗಮನ ನೆಟ್ಟಿದೆ.

‘ಸೂಪರ್‌ ಟ್ಯೂಸ್‌ಡೇ 2.0’ ಪ್ರಾಥಮಿಕ ಚುನಾವಣೆ ಫ್ಲಾರಿಡಾ, ಇಲ್ಲಿನೊಯಿಸ್‌, ಮಿಸ್ಸೋರಿ, ನಾರ್ತ್‌ ಕೆರೊಲಿನಾ, ಓಹಿಯೊ ರಾಜ್ಯಗಳು ಮತ್ತು ಉತ್ತರದ ಮರೀನಾ ದ್ವೀಪಗಳಲ್ಲಿ ನಡೆಯಲಿದ್ದು, ಮಾರ್ಕೊ ರುಬಿಯೊ ಮತ್ತು ವಿವಾದಿತ ವ್ಯಕ್ತಿ ಡೊನಾಲ್ಡ್‌ ಟ್ರಂಪ್‌ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಐದು ರಾಜ್ಯಗಳಲ್ಲಿನ ಪ್ರಾಥಮಿಕ ಚುನಾವಣೆಯಲ್ಲಿ ಸುಮಾರು 360 ಪ್ರತಿನಿಧಿಗಳು ಸ್ಪರ್ಧಿಸುತ್ತಿದ್ದಾರೆ. ಓಹಿಯೊದ ಗವರ್ನರ್‌ ಜಾನ್‌ ಕ್ಯಾಸಿಚ್‌  ಅವರಿಂದ ಟ್ರಂಪ್‌ಗೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಇದಕ್ಕೆ ಪೂರಕವಾಗಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಹುದ್ದೆಯ ಮಾಜಿ ಆಕಾಂಕ್ಷಿ ಮಿಟ್‌ ರೊಮ್ನಿ ಅವರು ಕ್ಯಾಸಿಚ್‌ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.

ರಾಜಕೀಯ ಸಂಘರ್ಷ ತೀವ್ರವಾಗಿರುವುದರಿಂದ ಟ್ರಂಪ್‌, ಫ್ಲಾರಿಡಾದಲ್ಲಿ ನಡೆಸಬೇಕಿದ್ದ ಉದ್ದೇಶಿತ ರ್‍ಯಾಲಿಯನ್ನು ರದ್ದುಗೊಳಿಸಿ, ಓಹಿಯೊದಲ್ಲಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

ಕಣದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಟ್ರಂಪ್‌, ಫ್ಲಾರಿಡಾ ಮತ್ತು ಓಹಿಯೊ ಎರಡೂ ರಾಜ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರು 14 ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ಕಾಕಸಸ್‌ ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಟೆಡ್ ಕ್ರೂಜ್‌ ಏಳು ರಾಜ್ಯಗಳಲ್ಲಿ ಮಾತ್ರ ಗೆದ್ದಿದ್ದರೂ, ಪ್ರತಿನಿಧಿ ಆಯ್ಕೆಯಲ್ಲಿ ಅವರಿಗೆ ಸಮೀಪದಲ್ಲಿದ್ದಾರೆ. ಟ್ರಂಪ್‌ 460 ಪ್ರತಿನಿಧಿಗಳನ್ನು ಹೊಂದಿದ್ದರೆ, ಕ್ರೂಜ್‌ 360 ಪ್ರತಿನಿಧಿಗಳನ್ನು ಹೊಂದಿದ್ದಾರೆ.

‘ಐಎಸ್‌ ಸದಸ್ಯ ಅಲ್ಲ’:  ಪ್ರಚಾರದಲ್ಲಿ ತೊಡಗಿದ್ದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್‌ ಟ್ರಂಪ್ ಅವರಿದ್ದ ವೇದಿಕೆ ನುಗ್ಗಲು ಪ್ರಯತ್ನಿಸಿದ್ದ ವ್ಯಕ್ತಿ ಥಾಮಸ್‌ ಡಿಮಸ್ಸಿಮೊ, ತಾವು ಐಎಸ್‌ ಸದಸ್ಯ ಅಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.