ADVERTISEMENT

ಚುರುಮುರಿ: ಜಗವೇ ನಾಟಕರಂಗ!

ಚುರುಮುರಿ

ಬಿ.ಎನ್.ಮಲ್ಲೇಶ್
Published 18 ಏಪ್ರಿಲ್ 2024, 19:29 IST
Last Updated 18 ಏಪ್ರಿಲ್ 2024, 19:29 IST
<div class="paragraphs"><p>ಚುರುಮುರಿ: ಜಗವೇ ನಾಟಕರಂಗ!</p></div>

ಚುರುಮುರಿ: ಜಗವೇ ನಾಟಕರಂಗ!

   

‘ಪಮ್ಮು... ಬಾ ಇಲ್ಲಿ, ನೋಡು ನಮ್ಮ ಅಂದಕಾಲಿತ್ತಿಲ್ ಕನಸಿನ ಕನ್ಯೆ ಹೇಮಾಮಾಲಿನಿ ಕುಡುಗೋಲು ಹಿಡ್ಕಂಡು ಹುಲ್ಲು ಕೊಯ್ತಾ ಇದಾರೆ...’ ಮಡದಿಗೆ ಮೊಬೈಲ್‌ನಲ್ಲಿ ಬಂದಿದ್ದ ಫೋಟೊ ತೋರಿಸಿದೆ.

‘ಅರೆ ಹೌದಲ್ರಿ! ಅಲ್ಲ, ತೆನೆ ಕೊಯ್ಯೋದು ಬಿಟ್ಟು ಹುಲ್ಯಾಕೆ ಕೊಯ್ತಿದಾರೆ?’

ADVERTISEMENT

‘ತೆನೆ ಇರೋದು ಕರ್ನಾಟಕದಲ್ಲಿ. ಅಲ್ಲೆಲ್ಲ ಹುಲ್ಲೇ ಕೊಯ್ಯೋದಂತೆ’.

‘ಅವರ ಸೀರೆ ನೋಡ್ರೀ ಎಷ್ಟ್ ಚೆನ್ನಾಗಿದೆ, ಕೂಲಿಂಗ್ ಗ್ಲಾಸ್ ಬೇರೆ ಹಾಕಿದಾರೆ?’

‘ಅವರೀಗ ರೈತ ಮಹಿಳೆ ಕಣೆ. ರೈತರ ಆದಾಯ ದುಪ್ಪಟ್ಟಾಗಿರಬೇಕು, ಅದ್ಕೇ ಭರ್ಜರಿಯಾಗಿ ಹೊಲಕ್ಕಿಳಿದಿದಾರೆ’.

‘ನಂಗೇನೋ ಇದು ಡೂಪ್ಲಿಕೇಟ್ ಫೋಟೊ ಅನ್ಸುತ್ತಪ್ಪ, ಅದೇನೋ ಡೀಪು ಫೇಕು ಅಂತೀರಲ್ಲ, ಆ ತರ. ಆದ್ರೂ ಆ ಸೀರೆ ಮಾತ್ರ ಚೆನ್ನಾಗಿದೆ’.

‘ಮಾರಿ ಕಣ್ಣು ಹೋರಿ ಮ್ಯಾಗೆ ಅನ್ನಂಗೆ ನಿಮ್ ಕಣ್ಣು ಯಾವಾಗ್ಲೂ ಸೀರೇ ಮ್ಯಾಗೇ ಬಿಡು. ನಾನಿಲ್ಲಿ ಹುಲ್ಲು ತಿಂತಾ ಇದೀನಿ, ನೀನು ಹೂವು ಕೇಳಿದಂಗಾತು’.

‘ಕರ್ನಾಟಕದಲ್ಲಿ ಹುಲ್ಲು, ಹೂವು, ತೆನೆ ಎಲ್ಲ ಒಂದೇ ಈಗ. ಅದಿರ್‍ಲಿ ಈ ಸುದ್ದಿ ನೋಡಿದ್ರಾ? ಎಲೆಕ್ಷನ್‌ಗೆ ನಿಂತ ಅಭ್ಯರ್ಥಿಗಳಿಗಿಂತ ಅವರ ಹೆಂಡ್ತಿದೀರೇ ಶ್ರೀಮಂತರಂತೆ’.

‘ನೀನೂ ನಂಗಿಂತ ಶ್ರೀಮಂತೇನೇ.‌.. ನನ್ ಜೇಬು ಖಾಲಿಯಾದಾಗೆಲ್ಲ ನೀನೇ ತಾನೆ ದುಡ್ಡು ಕೊಡೋದು?’

‘ಈ ಬಣ್ಣದ ಮಾತೆಲ್ಲ ಬೇಡ, ಅದು ನಾನು ಉಳಿಸಿ ಇಟ್ಟದ್ದು’.

‘ಈ ಜಗತ್ತಲ್ಲಿ ಬಣ್ಣದ ಮಾತೇ ನಡೆಯೋದು ಕಣೆ. ಕೆಲವರು ಬಣ್ಣ ಹಚ್ಕೊಂಡು ನಾಟಕ ಮಾಡ್ತಾರೆ, ರಾಜಕಾರಣಿಗಳು ಬಣ್ಣ ಹಚ್ಕಳ್ಳದೇ ನಾಟಕ ಮಾಡ್ತಾರೆ. ಜಗವೇ ನಾಟಕರಂಗ!’

‘ಮಾತು ಮರೆಸ್ಬೇಡಿ. ಆ ಸೀರೆಯಂಥದ್ದು ನಂಗೂ ಬೇಕು, ಕೊಡ್ಸಿ’.

‘ಅದು ಡೂಪ್ಲಿಕೇಟ್ ಫೋಟೊ ಅಂದೆಯಲ್ಲ, ಆ ಸೀರೆನೂ ಡೂಪ್ಲಿಕೇಟೇ ಇರ್ಬೇಕು...’

ಮಡದಿ ಸಿಟ್ಟಾಗಿ ಬಿಲ್ಲಿನಿಂದ ಬಿಟ್ಟ ಬಾಣದಂತೆ ಅಡುಗೆ ಮನೆ ಸೇರಿದರೆ, ನಾನು ಮೆಲ್ಲಗೆ ಜಾಗ ಖಾಲಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.