ADVERTISEMENT

ಭರವಸೆ ಮೂಡಿಸಿರುವ ಆರ್ಥಿಕ ವೃದ್ಧಿ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಭರವಸೆ ಮೂಡಿಸಿರುವ  ಆರ್ಥಿಕ ವೃದ್ಧಿ ದರ ಹೆಚ್ಚಳ
ಭರವಸೆ ಮೂಡಿಸಿರುವ ಆರ್ಥಿಕ ವೃದ್ಧಿ ದರ ಹೆಚ್ಚಳ   

ಎರಡು ವರ್ಷಗಳ ಹಿಂಜರಿಕೆಯ ನಂತರ ಆರ್ಥಿಕ ವೃದ್ಧಿ ದರವು 2018–19ರ ಹಣಕಾಸು ವರ್ಷದಲ್ಲಿ ಪ್ರಗತಿಯ ಹಾದಿಗೆ (ಶೇ 7 ರಿಂದ ಶೇ 7.5) ಮರಳಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ವಿಶ್ವದಲ್ಲೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುವ ದೇಶ ಎನ್ನುವ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಲಿದೆ ಎಂಬಂಥ ನಿರೀಕ್ಷೆ ಉತ್ತೇಜನಕಾರಿಯಾಗಿದೆ.

ಇದು ದೇಶಿ ಅರ್ಥ ವ್ಯವಸ್ಥೆ ಬಗ್ಗೆ ಮತ್ತೆ ಭರವಸೆ ಮೂಡಿಸಿದೆ. ಗರಿಷ್ಠ ಮುಖಬೆಲೆಯ ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಆಘಾತಗಳ ತೀವ್ರತೆ ಈಗ ಗಮನಾರ್ಹವಾಗಿ ತಗ್ಗಿದೆ. ಇಂತಹ ಪ್ರತಿಕೂಲಗಳನ್ನು ಹಿಂದೆ ಬಿಟ್ಟು ಆರ್ಥಿಕತೆಯು ಪ್ರಗತಿಯ ಹಾದಿಯಲ್ಲಿ ಸಾಗಲಿರುವ ಬಗ್ಗೆ ಸಮೀಕ್ಷೆಯು ಆಶಾವಾದ ಮೂಡಿಸಿದೆ. ಈ ಭರವಸೆಯ ಎಳೆಯಲ್ಲಿ ಎಚ್ಚರಿಕೆಯ ಸಂದೇಶವೂ ಇದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ಏರಿಕೆಯಿಂದ ಹೆಚ್ಚಾಗಬಹುದಾದ ಹಣದುಬ್ಬರದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ. ದಿನಕ್ಕೊಂದು ದಾಖಲೆ ಬರೆಯುತ್ತಿರುವ ಷೇರುಪೇಟೆ, ಸ್ಥಳೀಯ ಮತ್ತು
ಜಾಗತಿಕ ವಿದ್ಯಮಾನಗಳಿಂದ ಪ್ರಭಾವಿತಗೊಂಡು ದಿಢೀರನೆ ಕುಸಿತಗೊಂಡರೆ, ವಿದೇಶಿ ಹೂಡಿಕೆಯ ಹರಿವಿನ ಕಟ್ಟೆ ಒಡೆಯಲಿದೆ. ಅಂತಹ ಸಂದರ್ಭ ಉದ್ಭವಿಸಿದರೆ, ಆರ್ಥಿಕತೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಉಂಟಾಗಲಿದೆ.

ಮೂರು ವಲಯಗಳಲ್ಲಿ ಸೂಕ್ತ ನೀತಿ ನಿರೂಪಣೆಯ ತುರ್ತು ಅಗತ್ಯವಿದೆ ಎಂಬುದೂ ಈ ಮುನ್ನೋಟದಿಂದ ಸ್ಪಷ್ಟ. ಅವು ಶಿಕ್ಷಣ, ಉದ್ಯೋಗ ಹಾಗೂ ಕೃಷಿ ಕ್ಷೇತ್ರ. ಕೃಷಿ ಬೆಳವಣಿಗೆ ಮತ್ತು ರೈತರ ವರಮಾನದಲ್ಲಿ ಯಾವುದೇ ಪ್ರಗತಿ ಕಂಡು ಬರದಿರುವುದು ನಿರಾಶಾದಾಯಕ. 2022ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿರುವ ಎನ್‌ಡಿಎ ಸರ್ಕಾರಕ್ಕೆ ಇದು ಚಿಂತೆಗೆ ಕಾರಣವಾಗಿದೆ. ಕೃಷಿ ಪ್ರಗತಿ ಕೇವಲ ಶೇ 2.1ರಷ್ಟು ಇದೆ. ಅಲ್ಲದೆ ಹವಾಮಾನ ಬದಲಾವಣೆಯು ರೈತರ ವರಮಾನದಲ್ಲಿ ಶೇ 20 ರಿಂದ 25ರಷ್ಟು ನಷ್ಟಕ್ಕೆ ಕಾರಣವಾಗಲಿದೆ ಎಂಬುದಂತೂ ಮತ್ತೊಂದಿಷ್ಟು ಆತಂಕಕ್ಕೆ ಕಾರಣ. ಇದೊಂದು ಹೊಸ ಸಂಕಷ್ಟದ ರೂಪದಲ್ಲಿ ರೈತರನ್ನು ಅಪ್ಪಳಿಸಲಿದೆ ಎಂದು ಅಂದಾಜಿಸಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬಡಿದೆಬ್ಬಿಸಬೇಕಾಗಿದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿಯೂ ಭರವಸೆಯ ಚಿತ್ರಣ ಕಂಡು ಬರುತ್ತಿಲ್ಲ. ಆರ್ಥಿಕ ಚಟುವಟಿಕೆಗಳ ಮೇಲಿನ ತಂತ್ರಜ್ಞಾನದ ಪ್ರಭಾವದಿಂದಾಗಿ ಕೌಶಲರಹಿತ ದುಡಿಯುವ ವರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಗುಣಮಟ್ಟದ ಶಿಕ್ಷಣ ಕೊರತೆಯ ಜತೆಗೆ ‘ಕಲಿಕೆಯ ಬಡತನ’ವೂ ಸೇರಿಕೊಂಡಿದೆ. ಇವೆಲ್ಲ ಸಂಕ್ರಮಣ ಕಾಲದ ಸಂಕಷ್ಟಗಳು. ಮುಖ್ಯ ಸವಾಲು ಇರುವುದೇ ಇಲ್ಲಿ. ಸರ್ಕಾರಕ್ಕೆ ಈ ಸವಾಲುಗಳ ಅರಿವು ಇಲ್ಲ ಎಂದರ್ಥವಲ್ಲ. ಅವುಗಳನ್ನು ಪರಿಹರಿಸುವುದಕ್ಕೆ ಅನುಸರಿಸುತ್ತಿರುವ ವಿಧಾನದಲ್ಲಿ ಲೋಪ ಇದೆ. ಹೆಚ್ಚು ಸಮನ್ವಯದಿಂದ ಕಾರ್ಯಪ್ರವೃತ್ತವಾಗುವುದು ಸೂಕ್ತ.  ಮುಂಬರುವ ವರ್ಷಗಳಲ್ಲಿ ಆರ್ಥಿಕ ಪ್ರಗತಿಗೆ ಸಕಾರಾತ್ಮಕ ರಭಸ ನೀಡಲು ಹೊಸ ಆಲೋಚನೆಗಳನ್ನೂ ಸಮೀಕ್ಷೆಯು ಸರ್ಕಾರದ ಮುಂದಿಟ್ಟಿದೆ. ಬ್ಯಾಂಕ್‌ಗಳ ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ಪರಿಹಾರ ಕಂಡುಕೊಳ್ಳುವವರೆಗೆ ಅಭಿವೃದ್ಧಿಯು ಮರೀಚಿಕೆ ಆಗಿರುತ್ತದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.  ಅರ್ಥ ವ್ಯವಸ್ಥೆಯು ಇನ್ನೂ ದುರಸ್ತಿಯ ಹಂತದಲ್ಲಿಯೇ ಇರುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿನ ಚೇತರಿಕೆಗೆ ಹೋಲಿಸಿದರೆ ನಮ್ಮ ಸಾಧನೆ ಅಷ್ಟೇನೂ ಹೆಮ್ಮೆಪಟ್ಟುಕೊಳ್ಳುವಂತಿಲ್ಲ. ಆರ್ಥಿಕ ವೃದ್ಧಿ ದರ ಸುಸ್ಥಿರಗೊಳಿಸಲು ರಚನಾತ್ಮಕ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.