ADVERTISEMENT

ಮೂಗುದಾರಕ್ಕೂ ಶುಲ್ಕ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿರುವುದರಿಂದ ಎಲ್ಲ ದ್ವಿಚಕ್ರ ವಾಹನ ಚಾಲಕರೂ ತಮ್ಮ ಜೊತೆ ಎರಡು ಹೆಲ್ಮೆಟ್‌ಗಳನ್ನು ಒಯ್ಯುವುದು ಅನಿವಾರ್ಯವಾಗಿದೆ. ಆದರೆ ಈಗ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಸರ್ಕಾರಿ ಕಚೇರಿಗಳಲ್ಲಿ ‘ಪೇ ಅಂಡ್ ಪಾರ್ಕ್’ ಸೌಲಭ್ಯ ಇರುವೆಡೆ, ಪಾರ್ಕಿಂಗ್ ಶುಲ್ಕದ ಜೊತೆಗೆ ಗುತ್ತಿಗೆದಾರರು ಹೆಲ್ಮೆಟ್ ಶುಲ್ಕವನ್ನೂ ಪ್ರತ್ಯೇಕವಾಗಿ ಸಂಗ್ರಹಿಸುತ್ತಿರುವುದು  ನ್ಯಾಯಸಮ್ಮತವಲ್ಲ.

ನಿಗದಿತ ಅವಧಿಗೆ ಸುಮಾರು ₹ 50 ಸಾವಿರ ಬೆಲೆಯ ದ್ವಿಚಕ್ರ ವಾಹನಕ್ಕೂ ₹ 10 ಹಾಗೂ ₹ 1 ಸಾವಿರಕ್ಕಿಂತ ಕಡಿಮೆ ಬೆಲೆಯ ಹೆಲ್ಮೆಟ್‌ಗೂ ₹ 10 ಶುಲ್ಕ ವಸೂಲು ಮಾಡಲಾಗುತ್ತಿದೆ. ಅಂದರೆ ಒಂದು ವಾಹನಕ್ಕೆ ಅದರ ಮಾಲೀಕನಿಗೆ ಕನಿಷ್ಠ ₹ 20ರಿಂದ ₹ 30 ಖರ್ಚು ಬರುತ್ತದೆ. ಹೆಲ್ಮೆಟ್ ಕಾಯಲು ನಿಗದಿತ ಅವಧಿಗೆ ₹ 2 ಶುಲ್ಕ ನಿಗದಿ ಮಾಡಿದರೆ ಬೇಕಾದಷ್ಟು.

ಎಮ್ಮೆ ಕಾಯುವವನಿಗೆ ಆರು ಕಾಸು ನೀಡಿ, ಮೂಗುದಾರ ನೋಡಿಕೊಳ್ಳಲು ಆತನಿಗೆ ಮತ್ತೆ ಆರು ಕಾಸು ಪ್ರತ್ಯೇಕ ಶುಲ್ಕ ನೀಡುವಂತಿದೆ ನಮ್ಮ ಸರ್ಕಾರಿ ಯೋಜಿತ ಪಾರ್ಕಿಂಗ್ ವ್ಯವಸ್ಥೆ. ಸರ್ಕಾರ ಕೂಡಲೇ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಿ, ಹೊಸ ಟೆಂಡರ್ ಕರೆಯಬೇಕು. ಅದರಲ್ಲಿ ತಲಾ ಒಂದು ದ್ವಿಚಕ್ರ ವಾಹನದ ಜೊತೆಗೆ ವ್ಯಕ್ತಿಯೊಬ್ಬ ಕನಿಷ್ಠ ಎರಡು ಹೆಲ್ಮೆಟ್‌ಗಳನ್ನು ಉಚಿತವಾಗಿ ಪಾರ್ಕಿಂಗ್ ತಾಣದಲ್ಲಿ ಇಡಬಲ್ಲಂಥ ವ್ಯವಸ್ಥೆ ತರಬೇಕು.

ಆಗ ಗುತ್ತಿಗೆದಾರರ ಮಾಫಿಯಾವನ್ನು ಹತ್ತಿಕ್ಕಬಹುದು. ಜೊತೆಗೆ, ದ್ವಿಚಕ್ರ ವಾಹನ ಸವಾರರು ಸ್ವಯಂಪ್ರೇರಿತರಾಗಿ ಹೆಲ್ಮೆಟ್ ಧರಿಸುವಂತೆ ಮಾಡಿ, ಸುರಕ್ಷಿತ ವಾಹನ ಸವಾರಿಗೆ ಉತ್ತೇಜಿಸಿದಂತೆಯೂ ಆಗುತ್ತದೆ.
- ನಾಗಮಂಗಲ ನರಸಿಂಹಮೂರ್ತಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.