ADVERTISEMENT

ಸ್ಕೇಟಿಂಗ್‌ನಲ್ಲಿ ಧನುಷ್‌ ‘ವೇಗ’...

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2016, 19:35 IST
Last Updated 9 ಮಾರ್ಚ್ 2016, 19:35 IST
ಧನುಷ್ ಬಾಬು
ಧನುಷ್ ಬಾಬು   

ಅಗ್ರಸ್ಥಾನ ಪಡೆಯಲು ಸ್ಕೇಟರ್‌ಗಳ ನಡುವೆ ನಡೆಯುವ ಪೈಪೋಟಿ ರೋಮಾಂಚಕವಾಗಿರುತ್ತದೆ. ಕೊಂಚ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯ ನಡುವೆಯೂ ಹೋರಾಟ ನಡೆಸುವ ದೃಶ್ಯ ಮೈನವಿರೇಳಿಸುತ್ತದೆ. ಆದ್ದರಿಂದ ಇಂಥ ಸಾಹಸ ಕ್ರೀಡೆ  ಸಹಜವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ.

ಸ್ಕೇಟಿಂಗ್‌ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವೃತ್ತಿಪರ ಕ್ರೀಡೆಯಾಗಿ ಬದಲಾಗಿದೆ. ಯುವಕ, ಯುವತಿಯರಿಗೆ ಇದು ಮೋಜಿನ ಕ್ರೀಡೆಯಷ್ಟೇ ಆಗಿತ್ತು. ಆದರೆ ಕಾಲ ಉರುಳಿದಂತೆಲ್ಲಾ ವೃತ್ತಿಪರತೆಯ ಸ್ಪರ್ಶ ಲಭಿಸಿದೆ.

ವಿಶ್ವ ಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವಷ್ಟು ಭಾರತ ಬಲಿಷ್ಠವೇನಲ್ಲ. ಆದರೆ, ಏಷ್ಯಾ ಮಟ್ಟದ ಟೂರ್ನಿಗಳಲ್ಲಿ  ಗಮನ ಸೆಳೆಯುತ್ತಿದೆ. ಈ ಕ್ರೀಡೆಯಲ್ಲಿ ಕರ್ನಾಟಕದ ಧನುಷ್‌ ಬಾಬು ಐದು ಬಾರಿ ವಿಶ್ವ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ಹೋದ ವರ್ಷ ತೈವಾನ್‌ನಲ್ಲಿ ನಡೆದ ವಿಶ್ವ ಟೂರ್ನಿಯಲ್ಲಿ 13ನೇ ಸ್ಥಾನ ಪಡೆದಿದ್ದರು. ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಸ್ಪರ್ಧಿಸುವ ಧನುಷ್‌ ಏಷ್ಯಾ ವಲಯದ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆರು ವರ್ಷದವನಿದ್ದಾಗ ಬೆಂಗಳೂರಿನಿಂದ ಮಡಿಕೇರಿವರೆಗೆ ಸ್ಕೇಟಿಂಗ್‌ ಮಾಡಿ ಗಮನ ಸೆಳೆದಿದ್ದರು. 21 ಧನುಷ್‌ ಈ ಕ್ರೀಡೆಯ ಬೆಳವಣಿಗೆಯ ಬಗ್ಗೆ ‘ಕಾಮನಬಿಲ್ಲು’ ಜೊತೆ ಮಾತನಾಡಿದ್ದಾರೆ.

*ಸ್ಕೇಟಿಂಗ್‌ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಬಾಲ್ಯದಿಂದಲೇ ಆಸಕ್ತಿ ಇತ್ತು. ಅಪ್ಪ ಬಾಲಾಜಿ ಬಾಬು ಈ ಕ್ರೀಡೆಯ ಬಗ್ಗೆ ತಿಳಿದುಕೊಂಡಿದ್ದರು. ಕ್ರಿಕೆಟ್‌ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಆದ್ದರಿಂದ ಮನೆಯಲ್ಲಿ ಕ್ರೀಡೆಯ ಬಗ್ಗೆ ಒಲವಿತ್ತು. ನಾಲ್ಕು ವರ್ಷದವನಾಗಿದ್ದಾಗಲೇ ಸ್ಕೇಟಿಂಗ್‌ ಆಡಲು ಆರಂಭಿಸಿದೆ.

*ನಿಮ್ಮ ಸಾಧನೆಗಳ ಬಗ್ಗೆ ಹೇಳಿ...
ಹಲವು ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೇನೆ. 2002ರಲ್ಲಿ ವಿಶಾಖ ಪಟ್ಟಣದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ್ದೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಇದುವರೆಗೂ ಒಟ್ಟು ಹತ್ತು ಚಿನ್ನ, ಆರು ಬೆಳ್ಳಿ, ಮೂರು ಕಂಚಿನ ಪದಕಗಳು ಲಭಿಸಿವೆ. 2012ರಿಂದ 15ರವರೆಗೆ ಸತತ ನಾಲ್ಕು ವರ್ಷ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದೆ.

*ಅಪಾಯಕಾರಿ ಕ್ರೀಡೆಯೆನಿಸಿರುವ ಸ್ಕೇಟಿಂಗ್‌ ಆಡುವಾಗ ಏನೆಲ್ಲಾ ಎಚ್ಚರಿಕೆ ವಹಿಸಬೇಕಾಗುತ್ತದೆ?
ಅಪಾಯಕಾರಿ ಕ್ರೀಡೆ ಎಂಬುದು ನಿಜ. ಸ್ಕೇಟಿಂಗ್‌ ಮಾಡುವಾಗ ಅಕ್ಕ ಪಕ್ಕದವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಲು ಹೋಗಬಾರದು. ಸ್ಕೇಟಿಂಗ್ ಕಲಿಯಲು ಆರಂಭಿಸುವಾಗ ಮೊದಲು ಹೇಳಿ ಕೊಡುವುದೇ ಈ ಪಾಠ. ಶೇಕಡ 90ರಷ್ಟು ಗಮನ ಸ್ಕೇಟ್ ಮೇಲಿರಬೇಕು. ಸ್ಕೇಟಿಂಗ್‌ ಆಡುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಸ್ನಾಯುಗಳು ಬಲಿಷ್ಠವಾಗುತ್ತವೆ. ಆದ್ದರಿಂದ ಈ ಕ್ರೀಡೆಯತ್ತ ಆಸಕ್ತಿ ತೋರಿಸುತ್ತಿರುವವರೂ ಹೆಚ್ಚುತ್ತಿದ್ದಾರೆ.

*ಹೋದ ವರ್ಷ ತೈವಾನ್‌ನಲ್ಲಿ ಪಾಲ್ಗೊಂಡಿದ್ದ ವಿಶ್ವ ಟೂರ್ನಿಯ ಅನುಭವ ಹೇಳಿ?
ಜಾಗತಿಕ ಮಟ್ಟದ ಆ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆ. ಸ್ಕೇಟಿಂಗ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ  ಕೊಲಂಬಿಯಾ, ಫ್ರಾನ್ಸ್‌, ಜರ್ಮನಿ ಮತ್ತು ಕೊರಿಯಾದ ಸ್ಪರ್ಧಿಗಳು ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಕ್ರೀಡೆಯಲ್ಲಿ ನಮ್ಮ ದೇಶ ಈಗಷ್ಟೇ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ವಿಶ್ವ ಟೂರ್ನಿಗಳಿಂದ ಸಾಕಷ್ಟು ಕಲಿಯಲು ಅವಕಾಶ ಲಭಿಸುತ್ತದೆ.

*ಭಾರತದಲ್ಲಿ ಈ ಕ್ರೀಡೆಯ ಬೆಳವಣಿಗೆ ಬಗ್ಗೆ ಹೇಳಿ.
ಸ್ಕೇಟಿಂಗ್‌ನಲ್ಲಿ ಹಾಕಿ, ಫ್ರೀಸ್ಟೈಲ್‌, ಅಲ್ಪೈನ್ಸ್‌ ಮತ್ತು ಸ್ಪೀಡ್ ಎಂಬ ಪ್ರಮುಖ ನಾಲ್ಕು ಬಗೆಗಳಿವೆ. ಭಾರತದಲ್ಲಿ ಸ್ಪೀಡ್‌ ಸ್ಕೇಟಿಂಗ್ ಆಡುವವರ ಸಂಖ್ಯೆ ಹೆಚ್ಚಿದೆ. ಆದರೆ ನಮಗೆ ಟ್ರ್ಯಾಕ್‌ಗಳ ಕೊರತೆಯಿದೆ. ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಹೊಂದಿರುವ ಟ್ರ್ಯಾಕ್‌ಗಳು ಬೆಂಗಳೂರು, ಮೈಸೂರು, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ಮಾತ್ರ ಇವೆ. ಬೇರೆ ಬೇರೆ ಕಡೆ ಟ್ರ್ಯಾಕ್‌ಗಳು ಆಗಬೇಕು. ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ತೆರಳುವ ಮೊದಲು ಅಭ್ಯಾಸ ಶಿಬಿರಕ್ಕೆ ಹೆಚ್ಚು ಸಮಯವನ್ನು ಮೀಸಲಿಡಬೇಕು.

*ಕೊಲಂಬಿಯಾ, ಫ್ರಾನ್ಸ್‌ ಸ್ಕೇಟಿಂಗ್‌ನಲ್ಲಿ ಮಾಡಿರುವ ಹೆಸರನ್ನು ಭಾರತಕ್ಕೂ ಮಾಡಲು ಸಾಧ್ಯವಿಲ್ಲವೇ?
ಖಂಡಿತವಾಗಿಯೂ ಇದೆ. ಆದರೆ ನಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ವಿಶ್ವ ಚಾಂಪಿಯನ್ ಕೊಲಂಬಿಯಾದ ಸ್ಕೇಟರ್‌ಗಳಿಗೆ ಅಭ್ಯಾಸ ಮಾಡುವುದಷ್ಟೇ ಕೆಲಸ. ಅವರಿಗೆ ಅಲ್ಲಿನ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಕುಟುಂಬಗಳಿಗೂ ಸಹಾಯ ಒದಗಿಸುತ್ತದೆ. ಆದ್ದರಿಂದ ಸ್ಕೇಟರ್‌ ಕ್ರೀಡೆಯನ್ನು ಬಿಟ್ಟು ಬೇರೆ ಏನನ್ನೂ ಯೋಚಿಸುವುದಿಲ್ಲ. ವಾರಕ್ಕೆ ಐದು ದಿನ ಅಭ್ಯಾಸ ಬಿಟ್ಟರೆ ಮತ್ತೆ ಏನನ್ನೂ ಮಾಡುವುದಿಲ್ಲ. ಇನ್ನುಳಿದ ಎರಡು ದಿನ ಮಾತ್ರ ಓದಿನ ಬಗ್ಗೆ ಗಮನ. ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ವೃತ್ತಿಪರತೆಯಿದೆ. ಹೊಸ ತಂತ್ರಜ್ಞಾನಗಳ ಬಗ್ಗೆ ಜ್ಞಾನವಿದೆ. ಈ ಎಲ್ಲಾ ವಿಷಯಗಳಲ್ಲಿ ಬದಲಾದರೆ ಸ್ಕೇಟಿಂಗ್‌ನಲ್ಲಿ ಬಲಿಷ್ಠವಾಗಬಹುದು.

*ನಿಮ್ಮ ಗುರಿ ಏನಿದೆ?
2016 ಭಾರತದ ಸ್ಕೇಟರ್‌ಗಳಿಗೆ ಮಹತ್ವದ ವರ್ಷ. ಏಕೆಂದರೆ ಸೆಪ್ಟೆಂಬರ್‌ನಲ್ಲಿ ಏಷ್ಯಾ ಮಟ್ಟದ ಟೂರ್ನಿ, ನವೆಂಬರ್‌ನಲ್ಲಿ ವಿಶ್ವ ಟೂರ್ನಿ ನಡೆಯಲಿದೆ. ಚೀನಾದಲ್ಲಿ ಈ ಟೂರ್ನಿ ಆಯೋಜನೆಯಾಗಿರುವ ಕಾರಣ ಪೈಪೋಟಿಯೂ ಹೆಚ್ಚಾಗಿರುತ್ತದೆ. ರ್‍ಯಾಂಕಿಂಗ್‌ನಲ್ಲಿ ಸುಧಾರಿಸಿಕೊಳ್ಳಲು ಎರಡೂ ಟೂರ್ನಿಗಳು ಅತ್ಯುತ್ತಮ ಅವಕಾಶವೆನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.