ADVERTISEMENT

ಚೆಸ್‌: ಜಂಟಿ ಅಗ್ರಸ್ಥಾನದಲ್ಲಿ ವಿಶ್ವನಾಥನ್ ಆನಂದ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಮಾಸ್ಕೊ, ರಷ್ಯಾ (ಪಿಟಿಐ):   ಜಾಗರೂಕತೆಯಿಂದ ಕಾಯಿಗಳನ್ನು ಮುನ್ನಡೆಸಿದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ  ಡ್ರಾ ಮಾಡಿಕೊಂಡಿದ್ದಾರೆ.

ಭಾನುವಾರ  ರಾತ್ರಿ ನಡೆದ ಪಂದ್ಯದಲ್ಲಿ  ಆನಂದ್‌, ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ ಪಾಯಿಂಟ್‌ ಹಂಚಿಕೊಂಡರು.
ಶನಿವಾರ ನಡೆದ ಪಂದ್ಯದಲ್ಲಿ  ಅರ್ಮೇನಿಯಾದ ಲೆವೊನ್‌ ಅರೋನಿಯನ್‌ ಎದುರು ಡ್ರಾ ಮಾಡಿಕೊಂಡಿದ್ದ ಆನಂದ್‌ ಖಾತೆಯಲ್ಲಿ  ಒಟ್ಟು ಎರಡು ಪಾಯಿಂಟ್‌ ಇದೆ. ಭಾರತದ ಆಟಗಾರ, ರಷ್ಯಾದ ಸರ್ಜಿ ಕರ್ಜಾಕಿನ್‌ ಮತ್ತು ಅರೋನಿಯನ್‌ ಜತೆ ಪಾಯಿಂಟ್‌ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಆರಂಭಿಕ ಪಂದ್ಯದಲ್ಲಿ ಬಲ್ಗೇರಿಯಾದ ವೆಸೆಲಿನ್‌ ಟೊಪಲೊವ್‌ ವಿರುದ್ಧ  ಗೆಲುವು ಗಳಿಸಿ ವಿಶ್ವಾಸ ಮರಳಿ ಪಡೆದಿದ್ದ ಆನಂದ್‌ ಮೂರನೇ ಸುತ್ತಿನ ಪಂದ್ಯದ ಯಾವ  ಹಂತದಲ್ಲಿಯೂ ತಪ್ಪಾಗದ ಹಾಗೆ ಎಚ್ಚರಿಕೆ ವಹಿಸಿ ಆಡಿದರು. ಕಪ್ಪು ಕಾಯಿಗಳೊಂದಿಗೆ ಕಣಕ್ಕಿಳಿದಿದ್ದ  ಭಾರತದ ಆಟಗಾರ ಆರಂಭಿಕ ಕೆಲ ನಡೆಗಳಲ್ಲಿ  ಚುರುಕಾಗಿ ಕಾಯಿಗಳನ್ನು ಮುನ್ನಡೆಸಿ ಎದುರಾಳಿ ಆಟಗಾರನ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು.

ಆದರೆ ಹಿಂದೆ ಹಲವು ಬಾರಿ ಆನಂದ್‌ ಎದುರು ಆಡಿದ ಅನುಭವ ಹೊಂದಿದ್ದ ಕರುವಾನ ಇದರಿಂದ ಕಿಂಚಿತ್ತು ವಿಚಲಿತರಾದಂತೆ ಕಾಣಲಿಲ್ಲ.
ಕೆಲ ನಡೆಗಳ ಬಳಿಕ ಇಬ್ಬರೂ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಹೀಗಾಗಿ ಪಂದ್ಯ ಸಮಬಲದೊಂದಿಗೆ ಸಾಗಿತ್ತು.

ಅಂತಿಮವಾಗಿ ಉಭಯ ಆಟಗಾರರು ಪಾಯಿಂಟ್‌ ಹಂಚಿಕೊಳ್ಳಲು ಸಮ್ಮತಿಸಿದರು.  ಟೂರ್ನಿಯಲ್ಲಿ ಇನ್ನೂ 11 ಸುತ್ತುಗಳ ಆಟ ಬಾಕಿ ಉಳಿದಿದ್ದು ಭಾರತದ ಆಟ ಗಾರನ ಪ್ರಶಸ್ತಿ ಕನಸು ಈಡೇರ ಬೇಕಾದರೆ ಎಲ್ಲಾ ಪಂದ್ಯಗಳ ಲ್ಲೂ ಅಮೋಘ ಸಾಮರ್ಥ್ಯ ತೋರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.