ADVERTISEMENT

ಸೈನಾ, ಶ್ರೀಕಾಂತ್‌ ಆಕರ್ಷಣೆ

ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
aಸೈನಾ ನೆಹ್ವಾಲ್‌
aಸೈನಾ ನೆಹ್ವಾಲ್‌   

ಬಾಸೆಲ್‌, ಸ್ವಿಟ್ಜರ್‌ಲೆಂಡ್‌ (ಪಿಟಿಐ): ಭಾನುವಾರ ಕೊನೆಗೊಂಡ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಸೈನಾ ನೆಹ್ವಾಲ್‌ ಮತ್ತು ಕೆ. ಶ್ರೀಕಾಂತ್‌ ಅವರು ಈಗ ಮತ್ತೊಂದು ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದ್ದಾರೆ.

ಮಂಗಳವಾರದಿಂದ ಆರಂಭವಾಗ ಲಿರುವ ಸ್ವಿಸ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೈನಾ ಮತ್ತು ಶ್ರೀಕಾಂತ್‌ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗಗಳಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದು ಪ್ರಶಸ್ತಿ  ಗೆಲುವಿನ ವಿಶ್ವಾಸ ಹೊಂದಿದ್ದಾರೆ.

2011 ಮತ್ತು 2012ರ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಸೈನಾ ಈ ಬಾರಿ ಇಲ್ಲಿ ಅಗ್ರಶ್ರೇಯಾಂಕ ಹೊಂದಿ ದ್ದಾರೆ. ವಿಶ್ವ ಕ್ರಮಾಂಕಪಟ್ಟಿಯಲ್ಲಿ  ಎರಡನೇ ಸ್ಥಾನದಲ್ಲಿರುವ ಸೈನಾ, ಜರ್ಮನಿಯ ಕರಿನ್‌ ಶನಾಸೆ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಆಡಿದ ಮೊದಲ ಟೂರ್ನಿ ಆಲ್‌ ಇಂಗ್ಲೆಂಡ್‌ ಓಪನ್‌ ಚಾಂಪಿಯನ್‌ಷಿಪ್‌ ನಲ್ಲಿ ಸೈನಾ  ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಸೋತಿದ್ದರು.

ಒಲಿಂಪಿಕ್ಸ್‌ ಕ್ರೀಡಾಕೂಟದ ಆರಂಭಕ್ಕೆ ಐದು ತಿಂಗಳು ಬಾಕಿ ಉಳಿ ದಿದ್ದು ಮಹತ್ವದ ಕೂಟಕ್ಕೂ ಮುನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹೈದರಾಬಾದ್‌ನ ಆಟಗಾರ್ತಿಗೆ ಈ ಟೂರ್ನಿ ವೇದಿಕೆ ಎನಿಸಿದೆ.

ವಿಶ್ವಾಸದಲ್ಲಿ ಸಿಂಧು:  ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದ ಸಾಧನೆ ಮಾಡಿರುವ ಪಿ.ವಿ. ಸಿಂಧು ಕೂಡಾ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಮಲೇಷ್ಯಾ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಸಿಂಧು ಪ್ರಶಸ್ತಿ ಗೆದ್ದಿದ್ದರು.  ಆ ಬಳಿಕ ಅವರಿಂದ ಪರಿಣಾಮಕಾರಿ ಆಟ ಮೂಡಿಬಂದಿರಲಿಲ್ಲ. 

ಹೀಗಾಗಿ ಆರನೇ ಶ್ರೇಯಾಂಕ ಹೊಂದಿರುವ ಸಿಂಧುಗೆ ಈ ಟೂರ್ನಿ ಅಗ್ನಿ ಪರೀಕ್ಷೆ ಎನಿಸಿದೆ. ಶ್ರೀಕಾಂತ್‌ ಮೇಲೆ ಭರವಸೆ: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ  10ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.