ADVERTISEMENT

ಅವರ ಹೊರತು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ವಿಶಿ ಸರ್‌ಗೆ ಆಭಾರಿ: ಗುಕೇಶ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 12:24 IST
Last Updated 25 ಏಪ್ರಿಲ್ 2024, 12:24 IST
<div class="paragraphs"><p>ಚೆನ್ನೈ ವಿಮಾನ ನಿಲ್ದಾಣದಲ್ಲಿ ಗುಕೇಶ್‌ಗ ಆತ್ಮೀಯ ಸ್ವಾಗತ ನೀಡಲಾಯಿತು. </p></div>

ಚೆನ್ನೈ ವಿಮಾನ ನಿಲ್ದಾಣದಲ್ಲಿ ಗುಕೇಶ್‌ಗ ಆತ್ಮೀಯ ಸ್ವಾಗತ ನೀಡಲಾಯಿತು.

   

ಪಿಟಿಐ ಚಿತ್ರ

ಚೆನ್ನೈ: ತಮ್ಮ ಚೆಸ್‌ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ವಿಶ್ವನಾಥನ್ ಆನಂದ್ ಅವರಿಗೆ ಭಾರತದ ಚೆಸ್‌ ತಾರೆ ಡಿ.ಗುಕೇಶ್‌ ಕೃತಜ್ಞತೆ ಸಲ್ಲಿಸಿದ್ದಾರೆ. ‘ಅವರಲ್ಲದೇ ಇದ್ದರೆ, ನಾನೀಗ ಯಾವ ಮಟ್ಟಕ್ಕೆ ಬೆಳೆದಿದ್ದೇನೆಯೊ, ಅದರ ಹತ್ತಿರವೂ ಇರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

17 ವರ್ಷದ ಗುಕೇಶ್‌, ಕಳೆದ ಭಾನುವಾರ ಮುಕ್ತಾಯಗೊಂಡ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿಯಲ್ಲಿ ಗೆದ್ದು, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. 40 ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್ ಸ್ಥಾಪಿಸಿದ್ದ ದಾಖಲೆ ಮುರಿದಿದ್ದಾರೆ. ಈ ಗೆಲುವಿನಿಂದ ಅವರು ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ವರ್ಷಾಂತ್ಯದಲ್ಲಿ ನಡೆಯುವ ಫೈನಲ್‌ನಲ್ಲಿ ಸವಾಲು ಹಾಕುವ ಅರ್ಹತೆಯನ್ನೂ ಸಂಪಾಸಿದ್ದಾರೆ.

‘ವಿಶಿ ಸರ್‌ ನನ್ನ ಪಾಲಿಗೆ ದೊಡ್ಡ ಸ್ಫೂರ್ತಿ. ಅವರ ಅಕಾಡೆಮಿಯಿಂದ ನಾನು ತುಂಬಾ ಲಾಭ ಪಡೆದೆ. ಅವರಿಗೆ ಕೃತಜ್ಞ. ಅವರಲ್ಲದೇ ಇದ್ದರೆ, ನಾನು ಈಗ ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ’ ಎಂದು ಗುಕೇಶ್‌ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಿನ ಜಾವ ಇಲ್ಲಿ ತಲುಪಿದ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ಗೆ ಚೆಸ್‌ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು.

ಗುಕೇಶ್‌, 2020ರಲ್ಲಿ ಆರಂಭವಾದ ವೆಸ್ಟ್‌ಬ್ರಿಜ್‌–ಆನಂದ್ ಚೆಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಗುಕೇಶ್ ಅವರನ್ನು ಬಿಟ್ಟರೆ ಆನಂದ್ ಮಾತ್ರ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದಿದ್ದಾರೆ. ಕೊನೆಯ ಸಲ ಗೆದ್ದಿದ್ದು 2014ರಲ್ಲಿ.

ಡಿಂಗ್‌ ಲಿರೆನ್ ವಿರುದ್ಧ ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಬಹುನಿರೀಕ್ಷಿತ ಸೆಣಸಾಟದ ಬಗ್ಗೆ ಕೇಳಿದಾಗ, ‘ನಾನು ಹೇಗೆ ಅಣಿಗೊಳ್ಳುತ್ತೇನೆ ಎಂಬುದು ಅತಿ ದೊಡ್ಡ ಸವಾಲು. ಜೊತೆಗೆ ಇದು ಅತಿ ಮಹತ್ವದ್ದಾಗಿರುವ ಕಾರಣ ನನ್ನ ಮನಸ್ಥಿತಿ ಉತ್ತಮ ಮಟ್ಟದಲ್ಲಿರುವಂತೆ ನೋಡಿಕೊಳ್ಳುವುದೂ ಸವಾಲು’ ಎಂದು ಹೇಳಿದರು.

‘ನನ್ನ ಮೇಲೆ ಸಾಕಷ್ಟು ನಿರೀಕ್ಷೆಯ ಭಾರವಿದೆ. ಗೆಲುವೂ ಸಾಕಷ್ಟು ದೊಡ್ಡಾಗಿರುತ್ತದೆ. ನನಗೆ ನನ್ನ ಮೇಲೆ ನಂಬಿಕೆಯಿದೆ. ನನ್ನದೇ ತಂತ್ರಗಾರಿಕೆ ಹೊಂದಿದ್ದೇನೆ. ಅದು ಫಲ ನೀಡುತ್ತದೆೆಯೆಂಬ ವಿಶ್ವಾಸವಿದೆ’ ಎಂದರು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗಿನ ಜಾವ ಬಂದಿಳಿದ ದೊಮ್ಮರಾಜು ಗುಕೇಶ್‌ ಅವರಿಗೆ ತಾಯಿಯ ಸ್ವಾಗತ... ಪಿಟಿಐ ಚಿತ್ರ

ವೇಲಮ್ಮಾಳ್ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳೂ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು. ಗುಕೇಶ್‌ ಇಲ್ಲಿ ಕಲಿಯುತ್ತಿದ್ದಾರೆ. ಅವರ ತಾಯಿ ಪದ್ಮಾ ಕೂಡ ಹಾಜರಿದ್ದರು. ಟೂರ್ನಿಗೆ ತೆರಳಿದ್ದ ತಂದೆ ರಜನೀಕಾಂತ್ ಕೂಡ ಬಂದಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.