ADVERTISEMENT

ಎಚ್‌ಪಿಯಿಂದ ಎಐ-ಚಾಲಿತ ಗೇಮಿಂಗ್, ಕಂಟೆಂಟ್ ಕ್ರಿಯೇಶನ್ ಲ್ಯಾಪ್‌ಟಾಪ್ ಬಿಡುಗಡೆ

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಒಳಗೊಂಡ ಒಮೆನ್ ಟ್ರಾನ್ಸೆಂಡ್ 14 ಮತ್ತು ಎನ್ವಿ x360 14 ಲ್ಯಾಪ್‌ಟ್ಯಾಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2024, 11:22 IST
Last Updated 5 ಏಪ್ರಿಲ್ 2024, 11:22 IST
   

ಬೆಂಗಳೂರು: ಭಾರತದ ಗೇಮರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಎಐ (ಕೃತಕ ಬುದ್ಧಿಮತ್ತೆ) ಅಳವಡಿಸಿರುವ ಒಮೆನ್ ಟ್ರಾನ್ಸೆಂಡ್ 14 ಮತ್ತು ಎನ್ವಿ x360 14 ಎಂಬ ಲ್ಯಾಪ್‌ಟಾಪ್‌ಗಳನ್ನು ಹೆಚ್‌ಪಿ ಕಂಪನಿಯು ಬಿಡುಗಡೆ ಮಾಡಿದೆ.

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್‌ಗಳಿಂದ ಸುಸಜ್ಜಿತವಾಗಿರುವ ಇವು ಗೇಮಿಂಗ್-ಪ್ರಿಯರು ಹಾಗೂ ವಿಡಿಯೊ, ಆಡಿಯೊ, ಫೋಟೊ, ಪಠ್ಯ ಒಳಗೊಂಡ ಆನ್‌ಲೈನ್ ಕಂಟೆಂಟ್ ರಚಿಸುವಲ್ಲಿ ತೊಡಗಿಕೊಂಡಿರುವ ಬಳಕೆದಾರರಿಗೆ ಅನುಕೂಲಕರವಾಗಿದೆ ಎಂದು ಹೆಚ್‌ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಪ್ಸಿತಾ ದಾಸಗುಪ್ತಾ ಹಾಗೂ ಕನ್ಸೂಮರ್ ಸೇಲ್ಸ್ ಹಿರಿಯ ನಿರ್ದೇಶಕ ವಿನೀತ್ ಗೆಹಾನಿ ಮಾಹಿತಿ ನೀಡಿದ್ದಾರೆ.

ಒಮೆನ್ ಟ್ರಾನ್ಸೆಂಡ್ 14

ADVERTISEMENT

ಒಮೆನ್ ಟ್ರಾನ್ಸೆಂಡ್ 14 NVIDIA® GeForce® RTX™ 4060 ಗ್ರಾಫಿಕ್ಸ್, ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಇದರಲ್ಲಿದ್ದು, ಆನ್‌ಲೈನ್ ತರಗತಿ ಅಥವಾ ಮೀಟಿಂಗ್ ಸಂದರ್ಭದಲ್ಲಿ ಲೈವ್ ಟ್ರಾನ್ಸ್‌ಕ್ರಿಪ್ಟ್ ಮತ್ತು ರಿಯಲ್–ಟೈಂ ಕ್ಯಾಪ್ಶನ್‌ಗಳನ್ನು ಒದಗಿಸುತ್ತದೆ. ಬಿಸಿಯಾಗದಂತೆ ತಡೆಯುವ ಕೂಲಿಂಗ್ ತಂತ್ರಜ್ಞಾನ ಇದರಲ್ಲಿದ್ದು, ನೋಡಲು ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್ ಇದಾಗಿದೆ. 1.6 ಕೆಜಿ ತೂಕವಿದ್ದು, ಬ್ಯಾಟರಿ ಕಾರ್ಯಕ್ಷಮತೆ 11 ಗಂಟೆಗೂ ಹೆಚ್ಚು ಬಾಳಿಕೆ ಬರುತ್ತದೆ. ಜೊತೆಗೆ ಟೈಪ್–ಸಿ ಪಿಡಿ 140W ಅಡಾಪ್ಟರ್ ಇರುವುದರಿಂದ ಕ್ಷಿಪ್ರವಾಗಿ ಚಾರ್ಜ್ ಮಾಡಬಹುದು. ಆರ್‌ಜಿಬಿ ಬೆಳಕಿನ ಪ್ರಕಾಶಮಾನವಾದ ಹಿನ್ನೆಲೆಯ ಕೀಪ್ಯಾಡ್‌ಗಳು ಮತ್ತೊಂದು ಆಕರ್ಷಣೆ.

ಹೆಚ್‌ಪಿ ಎನ್ವಿ x360 14

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಇರುವ ಇದು, ಕೀಬೋರ್ಡ್ ಮೇಲೆ ಮೈಕ್ರೋಸಾಫ್ಟ್ ಕೋಪೈಲಟ್ ಬಟನ್ ಸಹಿತವಾಗಿ ಬಿಡುಗಡೆಯಾಗಿರುವ ಹೆಚ್‌ಪಿಯ ಮೊದಲ ಲ್ಯಾಪ್‌ಟಾಪ್ ಇದಾಗಿದೆ. ಎಐ ತಂತ್ರಜ್ಞಾನವು ವಿಡಿಯೊ ಕರೆಗಳ ಸಂದರ್ಭದಲ್ಲಿ ಮುಖವನ್ನು ಫೋಕಸ್ ಮಾಡಲು, ಹಿನ್ನೆಲೆ ಮಸುಕಾಗಿಸಲು ಮಾತ್ರವಲ್ಲದೆ ಕಣ್ಣು ಕ್ಯಾಮೆರಾದತ್ತ ಇರುವಂತೆ ನೋಡಿಕೊಳ್ಳುತ್ತದೆ. ಎಐ ವರ್ಧಿತ ಸುರಕ್ಷತೆ ಮತ್ತು ಗೋಪ್ಯತೆ ರಕ್ಷಣೆಯ ವೈಶಿಷ್ಟ್ಯ ಇದರಲ್ಲಿದ್ದು, ಹಿಂದಿನಿಂದ ಯಾರಾದರೂ ಬಂದು ನಿಂತರೆ ಅವರಿಗೆ ಸ್ಕ್ರೀನ್ ಮಸುಕಾಗಿ ಕಾಣಿಸುವಂತೆ ಮಾಡುತ್ತದೆ. 1.4 ಕೆಜಿ ತೂಕವಿರುವ ಈ ಎನ್ವಿ x360 14 ಲ್ಯಾಪ್‌ಟಾಪ್‌ಗಳು 14 ಇಂಚಿನ OLED ಟಚ್ ಡಿಸ್‌ಪ್ಲೇ ಸ್ಕ್ರೀನ್ ಹೊಂದಿವೆ.

ದರ ಮತ್ತು ಲಭ್ಯತೆ: ಹೊಸ ಲ್ಯಾಪ್‌ಟಾಪ್‌ಗಳು ಎಲ್ಲಾ ಹೆಚ್‌ಪಿ ಸ್ಟೋರ್‌ಗಳು ಮತ್ತು ಹೆಚ್‌ಪಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ ಇವೆ. ಒಮೆನ್ ಟ್ರಾನ್ಸೆಂಡ್ 14 ಸೆರಾಮಿಕ್ ವೈಟ್ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳಲ್ಲಿದ್ದು, ಇವುಗಳ ಬೆಲೆ ₹1,74,999 ರಿಂದ ಆರಂಭವಾಗಲಿದೆ. ಹೆಚ್‌ಪಿ ಎನ್ವಿ x360 14 ಮೆಟೀರಿಯರ್ ಸಿಲ್ವರ್ ಮತ್ತು ಅಟ್ಮೋಸ್ಫೆರಿಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆ ₹99,999 ರಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.