ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕಾಡೆಮಿ ಅಧ್ಯಕ್ಷರ ರಾಜೀನಾಮೆಗೆ ಸೂಚನೆ

Published : 16 ಜೂನ್ 2013, 19:35 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಹೊರತುಪಡಿಸಿ ಉಳಿದ ಎಲ್ಲ ಅಕಾಡೆಮಿಗಳ ಅಧ್ಯಕ್ಷರಿಗೆ ಕೂಡಲೇ ರಾಜೀನಾಮೆ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಈ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿ ಶನಿವಾರ ಸಂಜೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ರಾಮಕೃಷ್ಣ ಅವರಿಗೆ ತಲುಪಿಸಲಾಗಿದೆ. ಬಳಿಕ ಅವರು ರಾಜೀನಾಮೆ ವಿಷಯವನ್ನು ಅಕಾಡೆಮಿಗಳ ಅಧ್ಯಕ್ಷರಿಗೆ ತಿಳಿಸಿದರು ಎನ್ನಲಾಗಿದೆ.

ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಅವರ ಗಮನಕ್ಕೂ ತಂದಿದ್ದಾರೆ. `ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದ' ಎಂದು ಎಸ್‌ಎಂಎಸ್ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲೇ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಉಮಾನಾಥ ಕೊಟ್ಯಾನ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

`ಒಟ್ಟು 13 ಅಕಾಡೆಮಿಗಳ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ. ಮಾಧ್ಯಮ ಅಕಾಡೆಮಿಯ ಅಧ್ಯಕ್ಷರ ರಾಜೀನಾಮೆ ಕುರಿತು ಮುಖ್ಯಮಂತ್ರಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ರಾಜೀನಾಮೆ ನೀಡುವಂತೆ ಅಧ್ಯಕ್ಷರಿಗೆ ಸೂಚಿಸಿಲ್ಲ' ಎಂದು ಬಸವರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಸಾಹಿತ್ಯ ವಲಯದ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು/ಧಾರವಾಡ:  ಮಾ  ಧ್ಯಮ ಅಕಾಡೆಮಿ ಹೊರತುಪಡಿಸಿ ಉಳಿದ ಅಕಾಡೆಮಿಗಳ ಅಧ್ಯಕ್ಷರಿಂದ ರಾಜೀನಾಮೆ ಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸರ್ಕಾರದ ಕ್ರಮದ ಬಗ್ಗೆ ಸಾಹಿತ್ಯ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

`ಸಾಂಸ್ಕೃತಿಕ ಕ್ಷೇತ್ರಕ್ಕೆ ಮುಜುಗರ'

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನ ಸಚಿವ ಸ್ಥಾನಮಾನ ಹೊಂದಿರುವಂತಹುದು. ನೂತನ ಸರ್ಕಾರ ಬಂದ ಕೂಡಲೇ ಇವುಗಳ ಅಧ್ಯಕ್ಷರನ್ನು ಬದಲಿಸುವುದರಲ್ಲಿ ಅರ್ಥ ಇದೆ.

ನಿರ್ದಿಷ್ಟ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಅಕಾಡೆಮಿಗಳಿಗೆ ಅಧ್ಯಕ್ಷರಾಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಯಾವುದೇ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳದ ಸಾಂಸ್ಕೃತಿಕ ಕ್ಷೇತ್ರದವರನ್ನು ಏಕಾಏಕಿ ಬದಲಿಸುವುದು ಸರಿಯಲ್ಲ. ಸರ್ಕಾರ ಬದಲಾದ ಕೂಡಲೇ ಅಕಾಡೆಮಿಗಳ ಅಧ್ಯಕ್ಷರೂ ಬದಲಾಗಬೇಕಾ ಎಂಬುದು ಬಹು ದೊಡ್ಡ ಪ್ರಶ್ನೆ.

ಈ ರೀತಿ ಗೊಂದಲ ಸೃಷ್ಟಿ ಆಗಬಾರದು. ಈ ಗೊಂದಲವನ್ನು ನಿವಾರಿಸಲು ಮುಖ್ಯಮಂತ್ರಿ ಅವರು ಸಾಂಸ್ಕೃತಿಕ ಕ್ಷೇತ್ರದ ತಜ್ಞರ ಸಭೆ ಕರೆದು ಸಮಾಲೋಚನೆ ನಡೆಸಬೇಕು. ಭವಿಷ್ಯದಲ್ಲಿ ಇಂತಹ ಗೊಂದಲಗಳು ಸೃಷ್ಟಿಯಾಗದಂತೆ ತಡೆಯಲು ನಿಯಮಗಳನ್ನು ಪುನರ್ ರೂಪಿಸಬೇಕು. ಅಲ್ಲಿಯವರೆಗೆ ಹೊಸಬರನ್ನು ನೇಮಕ ಮಾಡಬಾರದು. ಸರ್ಕಾರದ ಈಗಿನ ಕ್ರಮ ಸಾಂಸ್ಕೃತಿಕ ಕ್ಷೇತ್ರದವರಿಗೆ ಮುಜುಗರ ಉಂಟು ಮಾಡುವಂತಹುದು.  
-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ .

`ಹೊಸ ಸರ್ಕಾರದ ಹಕ್ಕು'

ಅಕಾಡೆಮಿಗಳ ಅಧ್ಯಕ್ಷರಿಂದ ಸರ್ಕಾರ ರಾಜೀನಾಮೆ ಪಡೆಯಲು ಮುಂದಾಗಿರುವುದು ತಪ್ಪಲ್ಲ. ತನ್ನ ಧೋರಣೆಗೆ ಸರಿ ಹೊಂದುವ ಲೇಖಕರನ್ನು, ಸಾಹಿತಿಗಳನ್ನು, ಸಾಮಾಜಿಕ ಮುಖಂಡರನ್ನು ಅಕಾಡೆಮಿಗಳಿಗೆ ಹಾಗೂ ಪ್ರಾಧಿಕಾರಕ್ಕೆ ನೇಮಕ ಮಾಡುವುದು ಹೊಸ ಸರ್ಕಾರದ ಹಕ್ಕು. ನೂತನ ಸರ್ಕಾರ ಬಂದ ಕೂಡಲೇ ಅಧ್ಯಕ್ಷರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಬೇಕು.

ಇಲ್ಲದಿದ್ದರೆ ಅವರು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಎಂಬ ಗುಮಾನಿ ಮೂಡುತ್ತದೆ. ಆಗ ಸರ್ಕಾರ ಅನಿವಾರ್ಯವಾಗಿ ರಾಜೀನಾಮೆ ಪಡೆಯಲೇಬೇಕಾಗುತ್ತದೆ.
-ಹಂ.ಪ.ನಾಗರಾಜಯ್ಯ, ಹಿರಿಯ ಸಾಹಿತಿ .

`ಅಕಾಡೆಮಿಗಳು ರಾಜಕೀಯ ಸಂಸ್ಥೆಗಳಲ್ಲ'

ಸರ್ಕಾರ ಬದಲಾದ ಮಾತ್ರಕ್ಕೆ ಅಕಾಡೆಮಿಗಳು, ಪ್ರಾಧಿಕಾರಗಳ ಅಧ್ಯಕ್ಷರನ್ನು ಬದಲಾಯಿಸಲು ಹೊರಟಿರುವ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯ. ಸಾಂಸ್ಕೃತಿಕ ಲೋಕದೊಂದಿಗೆ ಒಡನಾಟ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಆಶ್ಚರ್ಯ ತಂದಿದೆ.

ಸರ್ಕಾರ ಬದಲಾದಾಗ ಸಾಂಸ್ಕೃತಿಕ ಕ್ಷೇತ್ರದ ಅಕಾಡೆಮಿಗಳ ಅಧ್ಯಕ್ಷರು ಬದಲಾಗಬೇಕೆಂಬ ಕೂಗು ಏಳುವುದು ಇದು ಮೊದಲನೆಯದೇನಲ್ಲ. ಜಿ.ಎಸ್.ಶಿವರುದ್ರಪ್ಪ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಾಗಲೂ ಹೊಸ ಸರ್ಕಾರವು ರಾಜೀನಾಮೆಗೆ ಸೂಚನೆ ನೀಡಿತ್ತು. ಆದರೆ, `ಮೂರು ವರ್ಷದ ಅವಧಿಗೆ ತಮ್ಮನ್ನು ನೇಮಕ ಮಾಡಲಾಗಿದೆ. ಆ ಅವಧಿ ಮುಗಿದಿಲ್ಲ. ಆದ್ದರಿಂದ ರಾಜೀನಾಮೆ ಕೊಡುವುದಿಲ್ಲ' ಎಂದು ಅವರು ಪಟ್ಟು ಹಿಡಿದರು.

ಶಿವರುದ್ರಪ್ಪ ಹಿರಿಯರಾಗಿದ್ದರಿಂದ ಅವರನ್ನು ಮುಟ್ಟುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅವರು ಅವಧಿ ಪೂರೈಸಿದರು. ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದ ಅವಧಿಯಲ್ಲೂ (1998-2001) ಸರ್ಕಾರ ಬದಲಾಯಿತು. ಅವಧಿ ಮುಗಿಯದಿದ್ದರೂ ನನ್ನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲ ಅವರ ರಾಜೀನಾಮೆ ಕೇಳಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಆಗ ನನ್ನೊಂದಿಗೆ ಎಷ್ಟು ಕಠೋರವಾಗಿ ನಡೆದುಕೊಂಡರು ಎಂದರೆ, ವಿಚಾರಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಶಿವಮೊಗ್ಗದ ಕುವೆಂಪು ವಿ.ವಿ.ಗೆ ತೆರಳಿದ್ದ ಸಂದರ್ಭದಲ್ಲಿ ವಿ.ವಿ. ರಿಜಿಸ್ಟ್ರಾರ್ ಹಾಗೂ ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ, ಗಿರಡ್ಡಿ ಅವರಿಂದ ರಾಜೀನಾಮೆ ಪತ್ರ ಪಡೆದುಕೊಳ್ಳಿ ಎಂದು ಸೂಚನೆ ನೀಡಿದ್ದರು! ಚಂಪಾಗೂ ಇದೇ ಸೂಚನೆ ಬಂದಿತ್ತು.

ಇದನ್ನೂ ಮೀರಿ ನಾವು ಮುಂದುವರೆದಿದ್ದರೆ ನಮ್ಮ ಕಚೇರಿಗೆ ಬೀಗ ಹಾಕುತ್ತಿದ್ದರು. ಇಲ್ಲವೇ, ಕುರ್ಚಿಯನ್ನು ಎತ್ತಿಕೊಂಡು ಹೋಗುತ್ತಿದ್ದರು. ಹಾಗಾಗಿ ರಾಜೀನಾಮೆ ನೀಡಿದೆ. ರಾಜಕೀಯ ನಾಯಕರು, ಕಾರ್ಯಕರ್ತರು ಅಧ್ಯಕ್ಷರಾಗಿರುವ ನಿಗಮ ಮಂಡಳಿಗಳ ರಾಜೀನಾಮೆ ಕೇಳಲಿ. ಆದರೆ, ರಾಜಕೀಯ ನೇಮಕಾತಿಯಲ್ಲದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುವುದು ಸರಿಯಲ್ಲ.
-ಡಾ.ಗಿರಡ್ಡಿ ಗೋವಿಂದರಾಜ, ಹಿರಿಯ ವಿಮರ್ಶಕರು, ಧಾರವಾಡ .

`ಸಾಂಸ್ಕೃತಿಕ ಸಂಸ್ಥೆಗಳ ಪಾವಿತ್ರ್ಯ ಕಾಪಾಡಿ'

ನೂತನ ಸರ್ಕಾರ ಅಕಾಡೆಮಿಗಳ ಅಧ್ಯಕ್ಷರಿಂದ ರಾಜೀನಾಮೆ ಪಡೆಯಲು ಮುಂದಾಗಿರುವುದು ಸರಿಯಲ್ಲ. ಹೊಸ ಸರ್ಕಾರ ಬಂದಾಗ ರಾಜೀನಾಮೆ ಪಡೆಯುವುದು ಪರಂಪರೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಈ ಪರಂಪರೆ ಇಲ್ಲ. ಈ ಹಿಂದೆ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕಾಡೆಮಿಗಳ ಅಧ್ಯಕ್ಷರಿಂದ ರಾಜೀನಾಮೆ ಪಡೆಯಲಾಗಿತ್ತು.

ಮಂಡಳಿಗಳಿಗೆ ರಾಜಕೀಯ ವ್ಯಕ್ತಿಗಳನ್ನು ನಾಮಕರಣ ಮಾಡಲಾಗುತ್ತದೆ. ಅಕಾಡೆಮಿಗಳು ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಗಳು. ಇಲ್ಲಿಗೆ ಹಿರಿಯರನ್ನು ನಾಮಕರಣ ಮಾಡಲಾಗುತ್ತಿದೆ. ಸಾಂಸ್ಕೃತಿಕ ಸಂಸ್ಥೆಗಳ ಪರಂಪರೆಯನ್ನು ಕಾಪಾಡಬೇಕು. ಅಕಾಡೆಮಿಗಳನ್ನು ರಾಜಕೀಯ ಮಂಡಳಿಗಳ ರೀತಿಯಲ್ಲಿ ನೋಡಬಾರದು.
-ಎಂ.ಎಚ್. ಕೃಷ್ಣಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು

`ಅವಧಿ ಮುಗಿಸಲು ಅವಕಾಶ ಕೊಡಲಿ'

`ಹೊಸ ಸರ್ಕಾರ ಬಂತೆಂಬ ನೆಪದಿಂದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ರಾಜೀನಾಮೆಯನ್ನು ಪಡೆಯುವ ಈ ಸರ್ಕಾರದ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಯಾವ ಸರ್ಕಾರ ಬಂದರೂ ಅಧ್ಯಕ್ಷರ ಅಧಿಕಾರ ಅವಧಿ ಮುಗಿಯುವವರೆಗೂ ರಾಜೀನಾಮೆ ಪಡೆಯಬಾರದು.

ಅವರೇ ಅರ್ಹ ವ್ಯಕ್ತಿ ಎಂದು ಅನಿಸಿದರೆ ಎರಡನೇ ಅವಧಿಗೆ ಮುಂದುವರಿಸಲು ಅಭ್ಯಂತರವಿಲ್ಲ. ಸಾಹಿತ್ಯಕ, ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರ ನೇಮಕದಲ್ಲಿ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಾದ ಕ್ರಮವಲ್ಲ.
-ಡಾ.ಚನ್ನವೀರ ಕಣವಿ, ಹಿರಿಯ ಕವಿ, ಧಾರವಾಡ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT