ಅನುವಾದ ಸಾಹಿತ್ಯವು ಪತ್ರಿಕಾ ಓದುಗರಿಗೆಲ್ಲ ಪರಿಚಿತ ಕ್ಷೇತ್ರ. ತ್ರಿಭಾಷಾ ಸೂತ್ರ ಪಾಲಿಸುವ ಕರ್ನಾಟಕದಂತಹ ರಾಜ್ಯಗಳ ವಿದ್ಯಾರ್ಥಿಗಳು ಅಯಾಚಿತವಾಗಿಯೇ ಅನುವಾದಕಾರ್ಯಗಳನ್ನು ಒಂದಲ್ಲ ಒಂದು ಸಂದರ್ಭದಲ್ಲಿ ನಿರ್ವಹಿಸಿರುತ್ತಾರೆ. ಮಲಯಾಳಂ ಮನೆಮಾತಿನ, ಕನ್ನಡಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ, ಕನ್ನಡ ಸಾಹಿತ್ಯದತ್ತ ಚಿಕ್ಕಂದಿನಲ್ಲೇ ಆಕರ್ಷಿಸಲ್ಪಟ್ಟ ನಾನು ಅನುವಾದದ ಮೋಹಕ್ಕೆ ಸಿಲುಕಿದುದು ಈ ಪರಿಸ್ಥಿತಿಗಳ ಸಹಜ ಪರಿಣಾಮವಷ್ಟೆ.

ದ್ರಾವಿಡ ಭಾಷಾ ಗುಂಪಿನ ತಮಿಳು, ಮಲಯಾಳಂ, ಕನ್ನಡ ಭಾಷೆಗಳು ಹಲವು ಸಾಮ್ಯಗಳನ್ನು ಹೊಂದಿವೆ. ಮಲಯಾಳಂ ಮನೆಮಾತಾದರೂ ನನ್ನ ಬಾಲ್ಯವು ಕನ್ನಡದ ವಾತಾವರಣದಲ್ಲಾಗಿದ್ದ ಕಾರಣ ಮತ್ತು ನೆರೆಹೊರೆಯ ಗೆಳೆಯರ ಮನೆಭಾಷೆಯಾದ ತಮಿಳಿನ ಸಂಪರ್ಕವೂ ನನಗಿದ್ದ ಕಾರಣ ಈ ಮೂರೂ ಭಾಷೆಗಳು ನನಗೆ ಹೆಚ್ಚಿನ ಶ್ರಮವಿಲ್ಲದೆ ಒಲಿದವು. ಶಾಲೆಯ ಕನ್ನಡ ಶಿಕ್ಷಕರ ಪ್ರೋತ್ಸಾಹ ಮತ್ತು ಪತ್ರಿಕೆಗಳ ಓದಿನ ಹವ್ಯಾಸ ನನ್ನನ್ನು ಸಾಹಿತ್ಯದತ್ತ ಸೆಳೆಯಿತು. ಹಲವು ಭಾಷೆಗಳ ಪತ್ರಿಕೆಗಳ ಓದಿನಿಂದ ಈ ಎಲ್ಲ ಭಾಷೆಗಳ ಸಾಹಿತ್ಯದ ಪರಿಚಯವೂ ನನಗಾಯಿತು.

ಪ್ರೌಢಶಾಲಾ ಹಂತದಲ್ಲಿ ಶಾಲಾಪತ್ರಿಕೆಗೆ ಲೇಖನಗಳನ್ನೂ ಚುಟುಕಗಳನ್ನೂ ಬರೆಯುತ್ತ ಮುಂದೆ ಮಲಯಾಳದ ಒಂದು ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿದೆ. `ಅದ್ಭುತ ರಶ್ಮಿಗಳು' ಎಂಬ ಹೆಸರಿನಲ್ಲಿ ಶಾಲಾಪತ್ರಿಕೆಯಲ್ಲಿ ಅದು ಪ್ರಕಟವಾಯಿತು. ಎಕ್ಸ್ ರೇ ಕುರಿತಾದ ಆ ಲೇಖನದ ವೈಜ್ಞಾನಿಕ ಇಂಗ್ಲಿಷ್ ಪದಗಳ ಕನ್ನಡ ಅರ್ಥಗಳನ್ನು ತಿಳಿಸಿ ವಿಜ್ಞಾನದ ಶಿಕ್ಷಕರು ನನಗೆ ನೆರವು ನೀಡಿದ್ದರು.
ಸಾಹಿತ್ಯದ ಸೃಜನಶೀಲ ವಿಭಾಗವೆನಿಸಿರುವ ಕತೆ, ಕಾದಂಬರಿ, ಕವನ, ಲಲಿತ ಪ್ರಬಂಧ ಮೊದಲಾದವುಗಳ ಓದು ನನ್ನ ಕಲ್ಪನಾವಿಲಾಸಕ್ಕೂ ಮನೋವಿಕಾಸಕ್ಕೂ ಸಹಕಾರಿಯಾಯಿತು.

ಮಾಸಪತ್ರಿಕೆಯೊಂದರಲ್ಲಿ ಕೆ. ಕೆ. ನಾಯರ್ ಅನುವಾದ ಮಾಡಿದ ಲಲಿತಾಂಬಿಕಾ ಅಂತರ್ಜನಂ ಅವರ `ಅಗ್ನಿಸಾಕ್ಷಿ' ಮಲಯಾಳಂ ಕಾದಂಬರಿಯ ಕನ್ನಡ ಅನುವಾದವನ್ನು ಕುತೂಹಲಾಶ್ಚರ್ಯಗಳಿಂದಲೇ ಓದಿದಾಗ ಅನುವಾದ ಸಾಹಿತ್ಯಕ್ಕೊಂದು ರಾಜಮಾರ್ಗ ನನ್ನೆದುರು ತೆರೆದಿದೆಯೆಂದೆನಿಸಿತು.

ವರ್ಷಗಳ ಬಳಿಕ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಬಷೀರ್ ಅವರ `ಪೂವನ್ ಪಳಂ' (ರಸ ಬಾಳೆಹಣ್ಣು) ಮಲಯಾಳಂ ಕತೆಯ ಕನ್ನಡ ಅನುವಾದವನ್ನು ಕಂಡು ಅದರ ಅನುವಾದಕ ಕೆ. ಕೆ. ನಾಯರ್ ಅವರನ್ನು ಪತ್ರಮುಖೇನ ಸಂಪರ್ಕಿಸಿ ಈ ಕತೆಯ ಕನ್ನಡ ಅನುವಾದ ಈಗಾಗಲೇ ಪ್ರಕಟವಾಗಿದೆ ಎಂಬ ಆಕ್ಷೇಪವೆತ್ತಿದೆ.

ಅದಕ್ಕುತ್ತರವಾಗಿ ನಾಯರ್ ಅವರು `ನನ್ನ ಓದು ಸೀಮಿತ. ಬಷೀರ್ ಅವರು ಮತ್ತೊಮ್ಮೆ ಅನುವಾದ ಮಾಡಲು ಏಕೆ ಅನುಮತಿ ಕೊಟ್ಟರೋ ತಿಳಿಯದು' ಎಂದು ಬರೆದಾಗ ಅವರ ವಿನಯ ನನ್ನನ್ನು ಬೆರಗುಗೊಳಿಸಿತು. ಹಾಗೆ ಶುರುವಾದ ಪತ್ರ ಮೈತ್ರಿ ಮುಂದೆ ನಾವಿಬ್ಬರೂ ಜೊತೆಯಾಗಿ ಕೆಲವು ಮಲಯಾಳ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವವರೆಗೂ ಸಾಗಿ ಆತ್ಮೀಯ ಗೆಳೆತನ ಮುಂದುವರಿದಿದೆ.

ಕನ್ನಡದ ನಿಯತಕಾಲಿಕಗಳು, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,ನವಕರ್ನಾಟಕ , ಹೇಮಂತ ಸಾಹಿತ್ಯ, ಕ್ರೈಸ್ಟ್ ಯುನಿವರ್ಸಿಟಿ ಕನ್ನಡ ಸಂಘ ಮೊದಲಾದ ಸಂಸ್ಥೆಗಳೂ ನನ್ನ ಅನುವಾದಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿವೆ. ಕನ್ನಡ ಓದುಗರ ಪ್ರೀತಿ ಮೆಚ್ಚುಗೆಗಳೂ ದೊರೆತಿವೆ. ಮಲಯಾಳಂ ಮತ್ತು ತಮಿಳಿನಿಂದ ಅನುವಾದ ಮಾಡಿದ ಸುಮಾರು 250 ಬರಹಗಳು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಹತ್ತು ಪುಸ್ತಕಗಳು ಪ್ರಕಟವಾಗಿವೆ. ಇವಕ್ಕೆಲ್ಲ ಕನ್ನಡ ಪತ್ರಿಕೆಗಳ ಸಂಪಾದಕ ಮಂಡಳಿ ಮತ್ತು ಓದುಗರ ನಿರ್ವ್ಯಾಜ ಪ್ರೀತಿ ವಿಶ್ವಾಸಗಳೇ ಕಾರಣ.

ವಿವಿಧ ಭಾಷೆಗಳನ್ನಾಡುವ ಜನರು ಪರಸ್ಪರ ಸಂಪರ್ಕಕ್ಕೆ ಬಂದಾಗ ಭಾಷಾಕಲಿಕೆಯ ಜೊತೆಜೊತೆಗೆ ಅನುವಾದವೂ ಬೆಳೆಯುವುದು. ವ್ಯಾಪಾರ ವ್ಯವಹಾರಗಳಲ್ಲೂ ಕಲೆ ಸಾಹಿತ್ಯಗಳಲ್ಲೂ ಅನುವಾದಕ್ಕೊಂದು ವಿಶಿಷ್ಟ ಸ್ಥಾನವಿದೆ. ಜಾಹೀರಾತುಗಳಲ್ಲೂ ವೈಜ್ಞಾನಿಕ ಬರವಣಿಗೆಗಳಲ್ಲೂ ಅನುವಾದಗಳ ಪಾತ್ರ ಮಹತ್ವಪೂರ್ಣವೇ.

ಅನುವಾದವು ಸೃಜನಶೀಲವಲ್ಲ ಎಂಬ ಮಿಥ್ಯಾಕಲ್ಪನೆಯೂ ಪ್ರಚಲಿತವಿದೆ. ಸಾಹಿತ್ಯದ ಎಲ್ಲ ಪ್ರಕಾರಗಳೂ ಸೃಜನಶೀಲವೇ. ಅನುವಾದವನ್ನು ಭಾವನಾತ್ಮಕ, ಕಾಲ್ಪನಿಕ, ವೈನೋದಿಕ ಸಾಹಿತ್ಯ ಶಾಖೆಯೆಂದೇ ಗುರುತಿಸಬಹುದು. ವೈಜ್ಞಾನಿಕ ಅಥವಾ ವೈಚಾರಿಕ ಶಾಖೆಯಲ್ಲೂ ಅನುವಾದದ ಪಾಲು ದೊಡ್ಡದೇ. ಅನುವಾದಕ್ಕೆ ಅದರದೇ ಆದ ಇತಿಮಿತಿಗಳಿರುವುದಾದರೂ ತೆರೆದ ಮನದಿಂದ ಸ್ವೀಕರಿಸಿ ಪ್ರೋತ್ಸಾಹಿಸುವ ಓದುಗವೃಂದವೇ ಅನುವಾದಕರಿಗೆ ಸಿಗಬಹುದಾದ ಮಹಾಸೌಭಾಗ್ಯ.

ಸಾಹಿತ್ಯ ಕೃತಿಗಳ ಅನುವಾದ ಮಾಡುವಾಗ ಮೂಲ ಲೇಖಕರ ಆಶಯ, ಶೈಲಿ, ಪ್ರಭಾವಗಳನ್ನು ಅನುವಾದದಲ್ಲೂ ತರುವ ಪ್ರಯತ್ನ ಮತ್ತು ಮೂಲದ ಸೊಗಸನ್ನು ಲಕ್ಷ್ಯಭಾಷೆಯ ಓದುಗರಿಗೆ ತಲುಪಿಸುವ ಶ್ರಮ ಅನಿವಾರ್ಯ. ಅದಕ್ಕಾಗಿ ಮೂಲ ಲೇಖಕರೊಂದಿಗೆ ನಿರಂತರ ಸಂಪರ್ಕ ಸಂವಾದ ಅಗತ್ಯವಾಗುತ್ತದೆ.

ಕಾಲೇಜ್ ವಿದ್ಯಾಭ್ಯಾಸದ ವೇಳೆ ತಮಿಳು ಭಾಷಿಕರಾದ ಕೆಲವು ಹಿರಿಯ ವಿದ್ಯಾರ್ಥಿಗಳು ನನ್ನೊಂದಿಗೆ ತಮಿಳಿನಲ್ಲಿ ಸಂಭಾಷಣೆ ನಡೆಸಿದಾಗ `ನಾನು ಆನಂದ ವಿಕಟನ್ ಪತ್ರಿಕೆಯನ್ನು ಓದುತ್ತೇನೆ' ಎಂದು ತಮಿಳಿನಲ್ಲೇ ನಾನು ಹೇಳಿದಾಗ ಅವರು ಆನಂದಾಶ್ಚರ್ಯಗಳಿಂದ `ಸೆಂದಮಿಳಿಲ್ ಸೆಪ್ಪುಗಿರಾಯ್' (ಚೆಲ್ವ ತಮಿಳಿನಲಿ ಉಲಿಯುತಿಹೆಯಲ್ಲ! ) ಎಂದು ಉದ್ಗರಿಸಿದರು.

ನನ್ನ ವಿದ್ಯಾರ್ಥಿದೆಸೆಯಲ್ಲಿ ಒಮ್ಮೆ ಆಸ್ಪತ್ರೆಯ ವೈದ್ಯಕೀಯ ವಾರ್ಡ್ನಲ್ಲಿ ದಾಖಲಾಗಿದ್ದ ಪ್ರಜ್ಞಾಹೀನ ಅನಾಥ ಯುವಕನೊಬ್ಬ ಪ್ರಜ್ಞೆ ಮರಳಿದಮೇಲೂ ಮಾತನಾಡಲಾಗದ ಸ್ಥಿತಿಯಲ್ಲಿದ್ದ. ಅವನ ಹೆಸರು ವಿಳಾಸ ತಿಳಿಯದೆ ಪೊಲೀಸರೂ ವೈದ್ಯರ ತಂಡವೂ ಗೊಂದಲದಲ್ಲಿದ್ದಾಗ ಅವನು ತನ್ನ ಹೆಸರನ್ನು ಒಂದು ಕಾಗದದಲ್ಲಿ ಬರೆದು ತೋರಿಸಿದ. ಅದು ತಮಿಳಿನಲ್ಲಿತ್ತು. `ಮಧು' ಎಂಬ ಆ ಹೆಸರನ್ನು ನಾನು ಓದಿ ಹೇಳಿದಾಗ ಎಲ್ಲರಿಗೂ ಸಂತಸ. ಆ ಸುಳಿವಿನಿಂದ ಅವನ ಬಂಧುಬಳಗವನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಮಿಂಚುಳ್ಳಿ ಎಂದರೆ ಮಿಂಚು ಎಂಬಂತಹ ತಪ್ಪು ಕಲ್ಪನೆಗಳು ಸುಶಿಕ್ಷಿತರಲ್ಲೂ ಬಹು ವ್ಯಾಪಕವಾಗಿಯೇ ಕಂಡು ಬರುತ್ತದೆ. ಹೀಗಿರುವಾಗ ಪದಗಳ ಶಬ್ದಗಳ ಅರ್ಥಗಳ ಧ್ವನಿಗಳ ಮಹಾ ಸಮುದ್ರದಲ್ಲಿ ಈಜಾಡಬೇಕಾದ ಅನುವಾದಕ ಮೈಯೆಲ್ಲಾ ಕಣ್ಣಾಗಿ ಕಾರ್ಯವೆಸಗ ಬೇಕು.
ಅದಕ್ಕಾಗಿ ತನ್ನ ಆಸಕ್ತಿ ಪರಿಶ್ರಮಗಳನ್ನು ಸದಾ ಚುರುಕಾಗಿರಿಸಿಕೊಳ್ಳುವುದೂ ಅಗತ್ಯ.

ಮಲಯಾಳಂ, ತಮಿಳು ಮತ್ತು ಕನ್ನಡದ ಅನೇಕ ಸಾಹಿತಿಗಳ, ಓದುಗರ ಪರಿಚಯ ಗೆಳೆತನ ಒಡನಾಟಗಳು ಅನುವಾದಕನಾಗಿ ನನಗೆ ಲಭಿಸಿವೆ. ಮಣಿಪಾಲದ ಕೆ.ಕೆ. ನಾಯರ್ ಮತ್ತು ನಾನು ಸೇರಿ ಅನುವಾದ ಮಾಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಎಸ್.ಕೆ. ಪೊಟ್ಟೆಕ್ಕಾಟ್ ಅವರ ಮಲಯಾಳ ಕಾದಂಬರಿ `ಒರು ದೇಶತ್ತಿಂಡೆ ಕಥಾ' ದ ಕನ್ನಡ ಅನುವಾದ `ಒಂದು ಊರಿನ ಕಥೆ'ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಹಾಗೆಯೆ ನಾವು ಜೊತೆಗೂಡಿ ಮಾಡಿದ ಜ್ಞಾನಪೀಠ ಪುರಸ್ಕೃತ ತಗಳಿ ಶಿವ ಶಂಕರ ಪಿಳ್ಳೈ ಅವರ ಮಹಾಕಾದಂಬರಿ `ಕಯರ್'ನ ಕನ್ನಡ ಅನುವಾದ 'ಹಗ್ಗ ' (3 ಭಾಗಗಳು) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇವೆಲ್ಲ ನನ್ನ ಅನುವಾದ ಜೀವನದ ಆನಂದದ ಕ್ಷಣಗಳು.

ಬೆನ್ಯಾಮಿನ್ ಅವರ ಮಲಯಾಳ ಕಾದಂಬರಿಯ ಅನುವಾದ `ಆಡುಜೀವನ' ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದಾಗ ಜಗದಗಲಕ್ಕೂ ಓದುಗರು ದೊರೆತರು. ಗಲ್ಫ್ ರಾಷ್ಟ್ರದಲ್ಲಿನ ವಲಸೆ ಕಾರ್ಮಿಕನ ದಾರುಣ ಸತ್ಯಕತೆಯನ್ನು ಹೇಳುವ ಈ ಕಾದಂಬರಿ ಮಲಯಾಳದಲ್ಲಿ 4 ವರ್ಷದಲ್ಲಿ 50 ಮುದ್ರಣಗಳನ್ನು ಕಂಡಿದೆ. ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದವಾಗಿದೆ. ಶಾಲೆ ಕಾಲೇಜುಗಳಲ್ಲಿ ಪಠ್ಯಪುಸ್ತಕವೂ ಆಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂರು ಅನುವಾದಿತ ಕಾದಂಬರಿಗಳ ಬಿಡುಗಡೆ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. ಮಲಯಾಳಂ ಲೇಖಕ `ಸೇತು' ಅವರ `ಅಡಯಾಳಙಳ್ ' ಕಾದಂಬರಿಯ ಕನ್ನಡ ಅನುವಾದ (ಗುರುತುಗಳು) ಮಾಡಿದ್ದ ನನಗೂ ವೇದಿಕೆಯಲ್ಲಿ ಸ್ಥಾನ ಸಿಕ್ಕಿತ್ತು. ಕಾರ್ಯಕ್ರಮದ ಆದ್ಯಂತ ನನ್ನ ಜೊತೆಯಲ್ಲೇ ಇದ್ದ ಮಹನೀಯರೊಬ್ಬರು, ಮರುದಿನದ ಮಲಯಾಳಂ ಪತ್ರಿಕೆಗೆ ಕಳಿಸಿದ ಸಚಿತ್ರ ವರದಿಯಲ್ಲಿ ನನ್ನ ಹೆಸರು ಬಾರದಂತೆ (ನಿರುದ್ದೇಶಪೂರ್ವಕ ?) ಹಾಗೂ ಅನುವಾದಕ ಎಂದು ತನ್ನ ಹೆಸರೇ ಅಚ್ಚಾಗುವಂತೆ ವಿಶೇಷ ಕಾಳಜಿ ವಹಿಸಿ ಯಶಸ್ವಿಯಾಗಿ ಸಂತಸ ಪಟ್ಟಿದ್ದರು. (ಅವರು ಒಂದೂ ಕನ್ನಡ ಅನುವಾದ ಮಾಡಿದ ಚರಿತ್ರೆಯಿಲ್ಲ).

ಮಲಯಾಳಂ ಕತೆಗಾರ ಸಿ.ವಿ. ಶ್ರಿರಾಮನ್ ಅವರ ಕತೆಯ ಅನುವಾದ `ಅಶ್ವಿನಿ' ಪ್ರಕಟವಾಗಿತ್ತು. ಅದಾದ ಎಷ್ಟೋ ವರುಷಗಳ ತರುವಾಯ ಸಿ.ವಿ. ಶ್ರಿರಾಮನ್ ತಮ್ಮ ಒಂದು ಲೇಖನದಲ್ಲಿ ನನ್ನ ಅನುವಾದದ ಕುರಿತು ಬರೆಯುತ್ತ ಮಲಯಾಳದಲ್ಲಿ ಪ್ರಕಟವಾಗುವುದಕ್ಕೆ ಮುನ್ನ ಕನ್ನಡದಲ್ಲಿ ಪ್ರಕಟವಾದ ಅಶ್ವಿನಿ ತಮಗೆ ಅತ್ಯಂತ ಪ್ರಿಯವಾದ ಕತೆ ಎಂದು ಬರೆದಿದ್ದರು. ಆ ಲೇಖನದ ಕನ್ನಡ ಅನುವಾದದ ಜೊತೆಗೆ ನಿಯತಕಾಲಿಕೆಯೊಂದರಲ್ಲಿ `ಅಶ್ವಿನಿ' ಕತೆಯನ್ನು ಮರುಮುದ್ರಣ ಮಾಡಿತು. ಇದು ಅನುವಾದ ಸಾಹಿತ್ಯಕ್ಕೆ ಸಿಕ್ಕ ಮನ್ನಣೆಯೆಂದೇ ನನ್ನ ಭಾವನೆ.

ತ್ರಿಶ್ಯೂರಿನಲ್ಲಿರುವ ಕೇರಳ ಸಾಹಿತ್ಯ ಅಕಾಡೆಮಿ ಕಚೇರಿಗೆ ಒಮ್ಮೆ ನಾನು ಹೋಗಿದ್ದಾಗ ಮಲಯಾಳಂ ಸಾಹಿತಿಗಳಾದ ಸಿ.ವಿ. ಶ್ರಿರಾಮನ್, ವತ್ಸಲ, ಎಂ.ಕೆ. ಸಾನು, ಕಾಕ್ಕನಾಡನ್ ಇವರನ್ನೆಲ್ಲ ಭೇಟಿಯಾಗಿ ಮಾತುಕತೆಯಾಡಿ ಹಿಂದಿರುಗಿದ್ದೆ. ಅನಂತರ ನನ್ನ ಅನುಪಸ್ಥಿತಿಯಲ್ಲಿ ಸಾಹಿತಿಗಳಿಬ್ಬರು ಈ ಅನುವಾದಕ ಮಡಿಕಲ್ ಡಾಕ್ಟರೋ ಅಥವಾ ಪಿಎಚ್.ಡಿ ಡಾಕ್ಟರೋ ಎಂದು ಜೋರು ವಾಗ್ವಾದ ನಡೆಸಿದರಂತೆ.

ಕೊನೆಗೆ ನನ್ನನ್ನು ಬಲ್ಲ ಸಿ.ವಿ. ಶ್ರಿರಾಮನ್ ಅವರೇ ತೀರ್ಪನ್ನಿತ್ತು ಚರ್ಚೆಗೆ ಮುಕ್ತಾಯ ನೀಡಿದರು ಎಂದು ಆಮೇಲೆ ನನಗೆ ತಿಳಿದು ಬಂತು. ಈ ಘಟನೆ ನೆನಾಪಾದಾಗ, ನಾನು ಸಂಬಳಕ್ಕೆ ಮಾಡುತ್ತಿರುವುದು ಶಸ್ತ್ರಚಿಕಿತ್ಸಾ ವೃತ್ತಿ ಮತ್ತು ಸಂತಸಕ್ಕೆ ಮಾಡುತ್ತಿರುವುದು ಅನುವಾದ ಪ್ರವೃತ್ತಿ ಎಂದು ಹೇಳಬೇಕೆನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.