ಪ್ರೊ. ಎಂ.ಎಂ. ಕಲಬುರ್ಗಿಯವರು ಒಬ್ಬ ಶ್ರೇಷ್ಠ ಪ್ರಾಧ್ಯಾಪಕರೆಂದು ನಾಡಿನಾದ್ಯಂತ ಹರಡಿರುವ ಅವರ ಶಿಷ್ಯರ ಮೂಲಕ ಕೇಳಿದ್ದೆ. ಅವರ ಸಂಶೋಧನ ಬರಹಗಳಲ್ಲಿ ದಂಗುಬಡಿಸುವ ಅಪಾರ ಅಧ್ಯಯನ ಮತ್ತು ವಿದ್ವತ್ತು ಇರುವುದು ನನಗೆ ತಿಳಿದಿತ್ತು. ಅದರಲ್ಲಿ ನನ್ನಂತಹವರು ವೈಚಾರಿಕವಾಗಿ ತಾತ್ವಿಕವಾಗಿ ಒಪ್ಪಲಾರದ ಸಂಗತಿಗಳಿದ್ದವು. ಅವರ ಜತೆ ವೈಯಕ್ತಿಕವಾದ ಒಡನಾಟವಿರಲಿಲ್ಲ.

ಈ ಒಡನಾಟವು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ ಒದಗಿತು. ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಎರಡನೆಯ ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಆಗ್ರಹಗಳನ್ನು ಇಟ್ಟುಕೊಂಡಿದ್ದರು.

ಸಾರ್ವಜನಿಕ ಹಣದಲ್ಲಿ ನಡೆಯುವ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆಂದೂ, ಅವು ಚಲಿಸಲಾಗದ ಹಂಪಿಯ ಕಲ್ಲಿನ ರಥಗಳಾಗಿವೆಯೆಂದೂ ಅವನ್ನು ಚಲನಶೀಲಗೊಳಿಸಬೇ ಕೆಂಬುದು ಒಂದು; ಎರಡನೆಯದು- ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ, ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯಿರುವ ವಿಚಾರವಾದಿಗಳೇ ತುಂಬಿಕೊಂಡಿದ್ದಾರೆಂದೂ, ಅವರಿಗೆಲ್ಲ ಪ್ರಾಚೀನಸಾಹಿತ್ಯ, ಶಾಸನಸಾಹಿತ್ಯಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕೆಂಬುದು. ನಮಗೋ ವೈಚಾರಿಕವಾಗಿ ಸಮಸ್ಯೆಗಳಿರುವ ಅವರ ಸಂಶೋಧನ ನಿಲುವಿನ ಜತೆ ಮುಖಾಮುಖಿ ಮಾಡಿ, ಸಾಧ್ಯವಾದರೆ ಅವರನ್ನೇ ಬದಲಿಸಬೇಕೆಂದು ಛಲ. ಈ ನಿಲುವಿನ ಸಂಘರ್ಷ ಅವರು ನಮ್ಮನ್ನು ಉದ್ದೇಶಿಸಿ ಮಾಡಿದ ಪ್ರಥಮ ಉಪನ್ಯಾಸದಲ್ಲಿಯೇ ಪ್ರಕಟವಾಯಿತು.

ಆದರೆ ಮೂರು ವರ್ಷಗಳ ಇಂತಹದೇ ಮುಖಾಮುಖಿಯಲ್ಲಿ, ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಪರಸ್ಪರ ಬದಲಾದೆವು ಮತ್ತು ಕಲಿತೆವು. ವಿಶ್ವವಿದ್ಯಾಲಯದಲ್ಲಿದ್ದ ದಿನಗಳಲ್ಲಿ ಅವರು ತಾವು ದುಡಿದರು ನಮ್ಮನ್ನೂ ದುಡಿಸಿದರು. ಈಗ ಹಿಂತಿರುಗಿ ನೋಡುವಾಗ, ಹಂಪಿಯಲ್ಲಿ ಅವರ ಜತೆ ಕೆಲಸ ಮಾಡಿದ ಮೂರು ವರ್ಷಗಳು ನನ್ನಂತಹವರ ಬಾಳಿನಲ್ಲಿ ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ದೇಶೀ ಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಿದರು; ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿಯವರು ತಮ್ಮ ವಿದ್ವತ್ ಹಿನ್ನೆಲೆಯಿಂದ ಅದರ ಮೇಲೊಂದು ಭದ್ರವಾದ ಇಮಾರತನ್ನು ಕಟ್ಟಿದರು.

ಅನಧಿಕೃತ ಕುಲಪತಿ: ವಿಶೇಷವೆಂದರೆ, ಕಲಬುರ್ಗಿಯವರ ಮತ್ತು ನಮ್ಮ ವಿದ್ವತ್ನಂಟು ಅವರು ನಿವೃತ್ತರಾಗಿ ಧಾರವಾಡಕ್ಕೆ ತೆರಳಿದ ಬಳಿಕವೂ ಮುಂದುವರೆದಿದ್ದು. ಇದಕ್ಕಾಗಿ ನಾವು ಅವರನ್ನು ತಮಾಷೆಯಾಗಿ ಅನಧಿಕೃತ ಕುಲಪತಿ ಎಂದು ಕರೆಯುತ್ತಿದ್ದೆವು. ನಮ್ಮಲ್ಲಿ ಕೆಲವರು ಹೊಸ ಸಂಶೋಧನ ಪುಸ್ತಕ ರಚಿಸಿದಾಗ, ಪ್ರಕಟಿಸುವ ಮುಂಚೆ ಅವರಿಗೊಮ್ಮೆ ಓದಲು ಕೊಟ್ಟು, ಅವರ ತಿದ್ದುಪಡಿ, ಸಲಹೆ ಪಡೆಯುವ ಪದ್ಧತಿ ರೂಢಿಸಿಕೊಂಡೆವು. ಅವರ ಮನೆಯಲ್ಲಿ ಇಡೀ ದಿನ ಝಾಂಡಾ ಹಾಕಿ, ಶ್ರೀಮತಿ ಉಮಾ ಅಕ್ಕನವರು ಕೊಡುತ್ತಿದ್ದ ರೊಟ್ಟಿ ಊಟ ಸವಿದು, ಅವರೊಡನೆ ಚರ್ಚಿಸುತ್ತಿದ್ದೆವು.

ಅವರು ಕೊಟ್ಟ ಎಲ್ಲ ಸಲಹೆಗಳನ್ನು ನಾವೇನೂ ಪಾಲಿಸುತ್ತಿದ್ದಿಲ್ಲ. ಆದರೆ ಅವರು ತಮ್ಮ ವಿದ್ವತ್ತಿನ ಬಲದಿಂದ ಕೊಡುತ್ತಿದ್ದ ಉಪಯುಕ್ತ ಹೊಳಹುಗಳನ್ನು ಹೆಕ್ಕಿಕೊಂಡು ಬಳಸುತ್ತಿದ್ದೆವು. ಇದು ನಮ್ಮ ವಿಷಯದಲ್ಲಿ ಮಾತ್ರ ಅವರು ಮಾಡಿದ್ದಲ್ಲ; ಕರ್ನಾಟಕದ ಆದ್ಯಂತ ಯಾವ್ಯಾವುದೊ ಕಾಲೇಜುಗಳಲ್ಲಿ ಅಧ್ಯಾಪಕರಾಗಿರುವ ಸಂಶೋಧನ ಸಾಮರ್ಥ್ಯ ಇರುವವರನ್ನು ಅವರು ಗುರುತಿಸಿ, ಅವರಿಂದ ಕರ್ನಾಟಕದ ಅಧ್ಯಯನಗಳಿಗೆ ಯಾವ ವಿಷಯದ ಮೇಲೆ ಕೆಲಸ ಮಾಡಿಸಬಹುದು ಎಂದು ಚಿಂತಿಸಿ, ಯೋಜನೆ ರೂಪಿಸಿಕೊಡುವ ಕೆಲಸವನ್ನು ಕಡೆತನಕವೂ ಮಾಡುತ್ತಿದ್ದರು. ನರಗುಂದ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ವಗ್ಗರ್ ಮೂಲಕ ಮುಂಬೈ ಆರ್ಕೈವ್ಸ್ನಿಂದ ಕಿತ್ತೂರಿನ ಬಗ್ಗೆ ಇದ್ದ ಎಲ್ಲ ಮಾಹಿತಿ ತರಿಸಿ, ಅವರು ಪ್ರಕಟಣೆಗೆ ಸಿದ್ಧಮಾಡುತ್ತಿದ್ದರು.

ಇದು ಕರ್ನಾಟಕದ ಭಾಷೆ, ಚರಿತ್ರೆ, ಸಂಸ್ಕೃತಿ –ಸಾಹಿತ್ಯದ ಬಗ್ಗೆ ಅವರಿಗಿದ್ದ ಬದ್ಧತೆಗೆ ಸಾಕ್ಷಿಯಾಗಿತ್ತು. ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿದ್ದ, ವೈಚಾರಿಕವಾಗಿ ಎಲ್ಲೊ ಒಂದು ಕಡೆ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿಯವರು, ನಿಧನಿಧಾನವಾಗಿ ಕರ್ನಾಟಕ ಸಂಸ್ಕೃತಿಯನ್ನು, ಅದನ್ನು ರೂಪಿಸಿದ ಅನೇಕ ಧರ್ಮ, ಭಾಷೆ, ಸಂಸ್ಕೃತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಳ್ಳುತ್ತಿದ್ದರು.

ಕನ್ನಡ ವಿಶ್ವವಿದ್ಯಾಲಯದಲ್ಲಿದ್ದಾಗ ಕರ್ನಾಟಕದ ಫಾರಸಿ- ಅರಬಿ ಶಾಸನಗಳನ್ನು ಪ್ರಕಟಿಸಿದ್ದ ಅವರು, ನಂತರ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಮೂಲಕ ಆದಿಲ್ಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡಿದ್ದರು. ಆ ಯೋಜನೆಯ ಸದಸ್ಯನಾಗಿ ಅವರ ಕನಸುಗಳನ್ನು, ಮಹತ್ವಾಕಾಂಕ್ಷೆಗಳನ್ನು, ನಾನು ತುಸು ಹಂಚಿಕೊಳ್ಳುತ್ತಿದ್ದೆ. ಹಾಗೆ ಕಂಡರೆ, ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಅವರಂತೆ ಕರ್ನಾಟಕಕ್ಕೆ ಉಪಯುಕ್ತ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಇಲ್ಲ. ಆದರೆ ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಇಂತಹ ಎಷ್ಟೊ ಕನಸುಗಳನ್ನು ಸಹ ಹೊಸಕಿ ಹಾಕಿಬಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.