`ಮದ್ರಾಸ್ ಕೆಫೆ' ಹಿಂದಿ ಸಿನಿಮಾ ತಮಿಳುನಾಡು ಸಹಿತ ದೇಶದ ಎಲ್ಲೆಡೆ ಬಿಡುಗಡೆಯಾಗಿದೆ. ಆದರೆ ಆ ಸಿನಿಮಾದ ತಮಿಳು ಅವತರಣಿಕೆಯನ್ನು ತಮಿಳುನಾಡಿನಲ್ಲಿ ಬಿಡುಗಡೆಯಾಗದಂತೆ ತಡೆಹಿಡಿಯಲಾಗಿದೆ. `ಮದ್ರಾಸ್ ಕೆಫೆ ತಮಿಳು ಅವತರಣಿಕೆ ಬಿಡುಗಡೆಯಾದರೆ ವ್ಯಾಪಕ ಹಿಂಸೆ ನಡೆದೀತು' ಎಂಬ ಕೆಲವು ಗುಂಪುಗಳ ಬೆದರಿಕೆಗೆ ಮಣಿದಿರುವ ಪ್ರದರ್ಶಕರು ಚಿತ್ರ ಪ್ರದರ್ಶನದಿಂದ ಹಿಂದೆ ಸರಿದಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ತಮಿಳು ಪ್ರತ್ಯೇಕತಾವಾದಿಗಳ ಹೋರಾಟದ ಹಿನ್ನೆಲೆಯ ಕಥೆಯುಳ್ಳ ಈ ಸಿನಿಮಾದಲ್ಲಿ ಭಾರತೀಯ ಗೂಢಚರ್ಯೆ ಸಂಸ್ಥೆ `ರಾ'ದ ಏಜೆಂಟನೊಬ್ಬನ ಸಾಹಸವೂ ಇದೆ. ಶ್ರೀಲಂಕಾ ತಮಿಳರ ಜನಾಂಗೀಯ ಸಮಸ್ಯೆಯನ್ನು ಸಮಚಿತ್ತದಿಂದ, ಯಾವುದೇ ಪೂರ್ವಗ್ರಹವಿಲ್ಲದೆ ಈ ಸಿನಿಮಾ ಚಿತ್ರಿಸಿದೆಯೆಂದು ಈಗಾಗಲೇ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಈ ಚಿತ್ರದ ಹಿಂದಿ ಅವತರಣಿಕೆಯನ್ನು ನೋಡಿದ ಜನರೂ `ಸಿನಿಮಾದಲ್ಲಿ ಆಕ್ಷೇಪಾರ್ಹವಾದದ್ದು ಏನೂ ಇಲ್ಲ' ಎಂದಿದ್ದಾರೆ. ಹಾಗಿದ್ದೂ ತಮಿಳು ಚಿತ್ರದ ಬಿಡುಗಡೆಗೆ ಕೆಲವರು ಅಡ್ಡಿ ಉಂಟು ಮಾಡಿರುವುದು ಖಂಡನಾರ್ಹ. ಕಮಲಹಾಸನ್ ನಿರ್ದೇಶನದ `ವಿಶ್ವರೂಪಂ' ಚಿತ್ರದ ಬಿಡುಗಡೆಗೂ ಹೀಗೆಯೇ ಅಡ್ಡಿ ಮಾಡಿ, ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿಸಲಾಗಿತ್ತು. ಇತ್ತೀಚೆಗೆ `ತಲೈವಾ' ಎಂಬ ತಮಿಳು ಸಿನಿಮಾಕ್ಕೂ ಅಡ್ಡಿಯುಂಟು ಮಾಡಿ, ಕೊನೆಗೆ ಅದು ಎರಡು ವಾರಗಳಷ್ಟು ತಡವಾಗಿ ಬಿಡುಗಡೆ ಕಂಡಿತು.

ಈ ಹಿಂದೆ ದೀಪಾ ಮೆಹ್ತಾ ಅವರ `ಫೈರ್' ಸಿನಿಮಾ ಕುರಿತೂ ದೊಡ್ಡ ಹುಯಿಲೆಬ್ಬಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಇಂತಹ ಅಸಹನೆಯ ಕೃತ್ಯಗಳು ಹೆಚ್ಚುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿವಿಧ ರೂಪಗಳಾದ ಸಿನಿಮಾ, ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಈ ರೀತಿ ಸಂಕುಚಿತ ವಾದಗಳನ್ನು ಮುಂದೊಡ್ಡುವ ಗುಂಪುಗಳಿಗೆ ರಾಜಕೀಯ ನಾಯಕರ ಪರೋಕ್ಷ ಕುಮ್ಮಕ್ಕೂ ಸಿಗುತ್ತಿರುವುದು ದುರ್ದೈವದ ಸಂಗತಿ.

ಯಾವುದೇ ಸಿನಿಮಾ ಸಾರ್ವಜನಿಕ ವೀಕ್ಷಣೆಗೆ ಅರ್ಹವೇ, ಅಲ್ಲವೇ ಎನ್ನುವುದನ್ನು ನಿರ್ಧರಿಸಲು ಸೆನ್ಸಾರ್ ಮಂಡಳಿ ಇದೆ. `ಮದ್ರಾಸ್ ಕೆಫೆ' ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿಯ ಅನುಮತಿ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಹೀಗಿರುವಾಗ ರಾಜ್ಯ ಸರಕಾರ ಚಿತ್ರದ ಬಿಡುಗಡೆಗೆ ಸೂಕ್ತ ರಕ್ಷಣೆ ನೀಡಬೇಕಾಗಿತ್ತು. ಆದರೆ ಸದಾ `ವೋಟ್ ಬ್ಯಾಂಕ್' ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳು ಇಂತಹ ಸಂದರ್ಭಗಳಲ್ಲಿ ಜಾಣ ಮೌನಕ್ಕೆ ಶರಣಾಗುವುದೇ ಹೆಚ್ಚು.

ತಮಿಳುನಾಡಿನಲ್ಲೂ ಅದೇ ಆಗಿದೆ. ಯಾವುದೇ ಕಥಾವಸ್ತುವನ್ನು ತನ್ನದೇ ಆದ ದೃಷ್ಟಿಕೋನದಿಂದ ವಿಮರ್ಶಿಸುವ ಮತ್ತು ಪ್ರಸ್ತುತಪಡಿಸುವ ಹಕ್ಕು ಚಿತ್ರದ ನಿರ್ದೇಶಕರಿಗಿದೆ. ಸೃಜನಶೀಲ ಕ್ರಿಯೆಯ ಮೂಲಕ ಸಮಾಜದ ಕೆಲವು ರೂಢಿಗತ ನಂಬಿಕೆಗಳನ್ನು, ಆಲೋಚನೆಗಳನ್ನು ಖಂಡಿಸುವ ಅಥವಾ ಸಮರ್ಥಿಸುವ ಸ್ವಾತಂತ್ರ್ಯವೂ ನಿರ್ದೇಶಕರಿಗೆ, ಲೇಖಕರಿಗೆ ಇದೆ.

ಆದರೆ ಸರ್ಕಾರ `ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ನಿರ್ವಹಣೆ'ಯ ಕುಂಟುನೆಪ ಹೇಳಿ, ಅಸಹನೆಯ ಗುಂಪುಗಳಿಗೆ ಪರೋಕ್ಷ ಕುಮ್ಮಕ್ಕು ನೀಡಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಈ ಅಸಹಿಷ್ಣು ಮನೋಭಾವವನ್ನು ಆರಂಭದಲ್ಲೇ ಮಟ್ಟ ಹಾಕುವ ಮೂಲಕ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಕೆಲಸ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.