ಆಶಿಶ್ ನಂದಿಯವರ ವ್ಯಾಖ್ಯಾನ (ಅದು ದಲಿತರ/ಅಲ್ಪಸಂಖ್ಯಾತರ ಬಗ್ಗೆ ಕೆಳ ಮಟ್ಟದ ಟೀಕೆಯಲ್ಲವೇ ಅಲ್ಲ) ಅನೇಕ ಸಂಕೀರ್ಣ ಪ್ರಶ್ನೆಗಳನ್ನು ಎತ್ತುವ ಸಂಗತಿಯನ್ನು ಮೊದಲು ಮನಗಾಣಬೇಕು. ಕಳೆದ ಇಪ್ಪತ್ತೈದು ವರ್ಷಗಳಿಂದ ಆಶಿಶ್ ನಂದಿಯವರನ್ನು ನಿಕಟವಾಗಿಯೇ ಬಲ್ಲೆ. ಅವರ ಪುಸ್ತಕಗಳನ್ನು, ಲೇಖನಗಳನ್ನು, ಭಾಷಣಗಳನ್ನು ಆಪ್ತವಾಗಿ ಸ್ವೀಕರಿಸಿದ್ದೇನೆ. ಅನೇಕ ವೇದಿಕೆಗಳಲ್ಲಿ ಅವರ ಜೊತೆ ಸಂವಾದ ನಡೆಸಿದ್ದೇನೆ. ಈ ಕಾರಣಕ್ಕಾಗಿಯೇ ಯಾರು ಏನೇ ಹೇಳಿದರೂ ಆಶಿಶ್ ನಂದಿ ದಲಿತರ/ಅಲ್ಪಸಂಖ್ಯಾತರ ವಿರೋಧಿಯೆಂದು ನಾನು ಒಪ್ಪುವುದಿಲ್ಲ. ಅದು ಸಂಪೂರ್ಣ ಅಸತ್ಯ. ಇದನ್ನು ಮೊದಲೇ ಸ್ಪಷ್ಟಪಡಿಸುವ ತುರ್ತು ನನಗಿದೆ.

ಆಶಿಶ್ ನಂದಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಆಡಿದ ಮಾತುಗಳ ಸಂಪೂರ್ಣ ಅರ್ಥವನ್ನು ಸರಿಯಾಗಿ ಗ್ರಹಿಸಬೇಕು. ಮೇಲು ವರ್ಗಗಳ/ಜಾತಿಗಳ ಮೋಸ ಮತ್ತು ಭ್ರಷ್ಟತನವನ್ನು ಮುಚ್ಚಿಟ್ಟು ಅವರ ಪರವಾದ ವಾದವನ್ನು ಮಂಡಿಸಿ ನಂದಿ ತಮ್ಮ ಮಾತುಗಳನ್ನು ಆಡಲಿಲ್ಲ. ಅವರ ವಾದವನ್ನು ವಿಶಾಲವಾದ ಸೈದ್ಧಾಂತಿಕ ಚೌಕಟ್ಟಿನಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು.

ಕಳೆದ ಆರೂವರೆ ದಶಕಗಳಲ್ಲಿ ಸ್ವತಂತ್ರ ಭಾರತವನ್ನು ನಡೆಸಿರುವ ಪ್ರಭುತ್ವಗಳು ಅಧಿಕಾರಶಾಹಿ, ಬಂಡವಾಳಶಾಹಿ ಮತ್ತು ಅಧಿಕಾರಕ್ಕಾಗಿ ಯಾವ ಅನೈತಿಕ ಸಂಬಂಧವನ್ನಾದರೂ ಒಪ್ಪಿಕೊಳ್ಳುವ ಪಕ್ಷಗಳ, ರಾಜಕಾರಣಿಗಳ ಸಂಬಂಧದಿಂದ ರೂಪಿತವಾಗಿವೆ. ಈ ಎಲ್ಲ ಶಕ್ತಿಗಳೇ ಭಾರತದ ರಾಷ್ಟ್ರ-ಪ್ರಭುತ್ವದ ಆಳ್ವಿಕೆಯ ರೂಪುರೇಷೆಗಳನ್ನು ನಿರ್ಧರಿಸಿರುವುದು.

ಪ್ರಗತಿ, ಅಭಿವೃದ್ಧಿ, ಬೆಳವಣಿಗೆಗಳ ಆರ್ಥಿಕ ಸೂತ್ರಗಳು ನಿಜವಾದ ಅರ್ಥದಲ್ಲಿ ಭಾರತದಲ್ಲಿ ಅನೇಕ ಬದಲಾವಣೆಗಳನ್ನು ತಂದಿವೆ. ಈ ಬದಲಾವಣೆಗಳು ಈ ದೇಶದ ರಾಜಕೀಯದ ಬುನಾದಿಯನ್ನೂ ಕಟ್ಟಿವೆ. ಆದರೆ ಸತ್ಯದ ಸಂಗತಿಯೆಂದರೆ ಈ ಆರ್ಥಿಕ ಸೂತ್ರಗಳು, ಅವುಗಳು ಸೃಷ್ಟಿಸಿರುವ ರಾಜಕೀಯವು, ಗಟ್ಟಿಯಾಗಿ ಬೆಳೆಸಿರುವುದು ಮಧ್ಯಮವರ್ಗವನ್ನು ಮತ್ತು ಮಧ್ಯಮವರ್ಗ ಪ್ರಜ್ಞೆಯನ್ನು ಮಾತ್ರ. ಭಾರತದ ಆರ್ಥಿಕತೆ ಮತ್ತು ರಾಜಕೀಯ ಮಧ್ಯಮವರ್ಗದ ಕ್ಷೇತ್ರ.

ದಲಿತರಿಗೆ, ಅಲ್ಪಸಂಖ್ಯಾತರಿಗೆ ಇರುವ ಮೀಸಲಾತಿಯಿಂದ ಹಿಡಿದು ಶಿಕ್ಷಣ, ಉದ್ಯೋಗ ಮತ್ತಿತರ ಮೂಲಭೂತ ವಿಷಯಗಳಿಗೆ ಸಂಬಂಧಪಟ್ಟಂತೆ ನಮ್ಮ ಸಮಾಜದಲ್ಲಿ ಜಾಗೃತಗೊಂಡಿರುವುದು ಮಧ್ಯಮವರ್ಗದ ಅವಕಾಶವಾದಿ ಪ್ರಜ್ಞೆ ಮಾತ್ರ. ಆದ್ದರಿಂದಲೇ ಎಲ್ಲ ಜಾತಿಗಳಿಗೆ ವರ್ಗಗಳಿಗೆ ಇಂದು ಇರುವುದು ಬದುಕಿನ ಅನಿವಾರ್ಯ ಮಾರ್ಗವೆಂದು ಕಾಣುವ ಧ್ಯಮವರ್ಗದ ಆಯ್ಕೆಗಳನ್ನು ಮಾಡುವ ಶಕ್ತಿ ಮಾತ್ರ.

ಆದಿವಾಸಿಗಳು, ಸಣ್ಣಪುಟ್ಟ ರೈತರುಗಳು ಮತ್ತು ಆಧುನಿಕ ಆರ್ಥಿಕ ಚೌಕಟ್ಟಿನೊಳಗೆ ಬಾರದಿರುವ ಸಮುದಾಯಗಳನ್ನು ಬಿಟ್ಟರೆ ಬೇರೆಲ್ಲರೂ ಈ ಮಧ್ಯಮವರ್ಗದ ಜಗತ್ತಿಗೆ ಪ್ರವೇಶಿಸಲು ಕಾತರರಾಗಿರುವವರೇ. ಹಾಗೆ ನೋಡಿದರೆ ಕಾರ್ಪೊರೇಟ್ ಜಗತ್ತಿನ ಕ್ರಮಗಳನ್ನೂ ನಿರ್ಧರಿಸುತ್ತಿರುವುದು ಮಧ್ಯಮವರ್ಗದ ಪ್ರಜ್ಞೆಯೇ.

ಮೌಲ್ಯಗಳ ಬಗ್ಗೆ ಓತಪೋತವಾಗಿ ಮಾತನಾಡುವ ಈ ವರ್ಗ ಯಾವ ಭ್ರಷ್ಟಾಚಾರವನ್ನಾದರೂ ಸಹಿಸಿಕೊಂಡು ತನ್ನ ಏಳಿಗೆಯನ್ನು ಸಾಧಿಸಿಕೊಳ್ಳುವ ಮಾರ್ಗವನ್ನು ಚೆನ್ನಾಗಿಯೇ ಕಂಡುಕೊಂಡಿದೆ. ಭಾರತದ ರಾಜಕೀಯದ ದುಃಸ್ಥಿತಿಗೂ ಮಧ್ಯಮವರ್ಗದ ಅವಕಾಶವಾದಿತನವೇ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಕಾರಣಕ್ಕಾಗಿಯೇ ಕಳೆದ ಆರೇಳು ದಶಕಗಳಲ್ಲಿ ಭಾರತದಲ್ಲಿ ಆಗಾಗ ಕಂಡು ಬಂದಿರುವ ಪ್ರತಿರೋಧಗಳನ್ನು ಜನಾಂದೋಲನಗಳನ್ನು ಈ ಮಧ್ಯಮವರ್ಗದ ಸಹಾಯದಿಂದ ಭಾರತ ರಾಷ್ಟ್ರ-ಪ್ರಭುತ್ವ ಭೀಕರವಾಗಿ ಧ್ವಂಸಮಾಡಿರುವುದು.

ಮಧ್ಯಮವರ್ಗದ ರಾಷ್ಟ್ರ-ಪ್ರಭುತ್ವ ದಮನಕಾರಿ ಶಕ್ತಿಯನ್ನು ಪಡೆದುಕೊಂಡಿರುವ ಸನ್ನಿವೇಶದಲ್ಲಿ ಇದನ್ನು ಪ್ರವೇಶಿಸದೆ ತಮ್ಮ ಉಳಿವಿರುವುದಿಲ್ಲ ಎಂದು ಕಂಡುಕೊಂಡಿರುವ ಎಲ್ಲ ಶೋಷಿತ ಜಾತಿಗಳು ಇದೇ ತಂತ್ರಗಳನ್ನು, ಉಪಾಯಗಳನ್ನು ಬಳಸಿ ತಮ್ಮ ಉಳಿವನ್ನೂ, ಹಿತಾಸಕ್ತಿಗಳನ್ನೂ ಕಾಪಾಡಿಕೊಳ್ಳಲು ಪ್ರಯತ್ನಿಸುವುದು. ಅಂದರೆ, ದಲಿತರೂ/ಅಲ್ಪಸಂಖ್ಯಾತರೂ ಭ್ರಷ್ಟರಾಗುತ್ತಿದ್ದಾರೆ ಎಂದರೆ ಅದು ಜಾತಿಯ ಬಗೆಗಿನ ಅವಹೇಳನವಲ್ಲ.

ಬದಲಾಗಿ, ಅಮಾನವೀಯ ರಾಷ್ಟ್ರ-ಪ್ರಭುತ್ವದ ರಾಜಕೀಯ ನೆಲೆ ಎಲ್ಲ ಶೋಷಿತರನ್ನೂ ದಲಿತರನ್ನೂ ಅಲ್ಪಸಂಖ್ಯಾತರನ್ನೂ ಭ್ರಷ್ಟಾಚಾರದ ನೆಲೆಗೆ ತಳ್ಳಿಯೇ ತಳ್ಳುತ್ತದೆ ಎಂದು ಪ್ರಕಟಪಡಿಸುವ ರಾಜಕೀಯ ನೋಟ. ಈ ಜಾತಿಗಳ ಭ್ರಷ್ಟತೆಗೂ ಮೇಲ್ಜಾತಿಗಳ, ಮೇಲ್ವರ್ಗಗಳ ರಾಷ್ಟ್ರ-ಪ್ರಭುತ್ವವೇ ಮೂಲ ಕಾರಣ.

ಮೇಲ್ಜಾತಿಗಳ/ಮೇಲ್ವರ್ಗಗಳ ಎಲ್ಲ ಬಗೆಯ ಭ್ರಷ್ಟಾಚಾರಗಳನ್ನೂ ಸಮರ್ಥಿಸಿ ಈಗ ತಾನೆ ಅಧಿಕಾರಕ್ಕೆ ಬರುತ್ತಿರುವ ದಲಿತರನ್ನೂ, ಅಲ್ಪಸಂಖ್ಯಾತರನ್ನೂ ಹೀಯಾಳಿಸಿ ಮಾತನಾಡುವವರ ಗುಂಪೇ ಬೇರೆ. ಆದರೆ ಈ ನಾಡಿನ ರಾಜಕೀಯ, ಸಂಸ್ಕೃತಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿಗಳಿದ್ದು ಪರ್ಯಾಯಗಳನ್ನು ಕಂಡುಕೊಳ್ಳಲು ಹೆಣಗುತ್ತಿರುವ ಚಿಂತಕರ ಸಮುದಾಯ ಬೇರೆ ರೀತಿಯದು. ಆಶಿಶ್ನಂದಿ ಎರಡನೆಯ ಗುಂಪಿಗೆ ಸೇರಿದವರು. ಮಾಯಾವತಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗಲೂ ಅದು ದಲಿತ ನಾಯಕಿಯ ಬಗೆಗಿನ ಕ್ಷುದ್ರ ಮಾತಾಗದೆ ಈ ರಾಷ್ಟ್ರ-ಪ್ರಭುತ್ವ ಸೃಷ್ಟಿಸಿರುವ ಭ್ರಷ್ಟಾಚಾರದ ವ್ಯಾಪ್ತಿಯ ಬಗೆಗಿನ ವ್ಯಾಖ್ಯಾನವಾಗುತ್ತದೆ.

ಪ್ರಜಾಪ್ರಭುತ್ವವಾದಿ ಜನಾಂದೋಲನಗಳ ವಿರುದ್ಧ ಸೈನ್ಯವನ್ನು, ಪೋಲಿಸರ ಬಲವನ್ನು ಪ್ರಯೋಗಿಸಿ ಆ ಆಂದೋಲನಗಳನ್ನು ನಾಶಮಾಡುವ ಪ್ರಭುತ್ವಗಳು ಬೆಳೆಸುವುದು ಕ್ರೌರ್ಯ ಮತ್ತು ಹಿಂಸೆಯ ಸಂಸ್ಕೃತಿಗಳನ್ನು ಮಾತ್ರ. ಇದಕ್ಕೆ ಪೂರಕವಾಗಿ ಕೆಲಸಮಾಡುವುದು ಕಾರ್ಪೊರೇಟ್ ಜಗತ್ತಿನ ಷಡ್ಯಂತ್ರಗಳು. ಈ ವರ್ತುಲದೊಳಗೆ ಬರುವ ಎಲ್ಲ ಜಾತಿಗಳೂ, ಸಮುದಾಯಗಳೂ ಕೇವಲ ಅವಕಾಶವಾದಿ ಮಧ್ಯಮವರ್ಗವಾಗಿ ರೂಪಾಂತರಗೊಳ್ಳುತ್ತವೆ. ಅಷ್ಟೇ ಅಲ್ಲದೆ, ತಮ್ಮತಮ್ಮ ಸಾಂಸ್ಕೃತಿಕ ಅಸ್ಮಿತೆಗಳನ್ನೂ ಕಳೆದುಕೊಳ್ಳುತ್ತವೆ.

ಪೂರ್ಣ ಆರೋಗ್ಯ ಇರುವ ಸಮುದಾಯಗಳನ್ನು ಅವುಗಳ ಸಂಸ್ಕೃತಿಗಳನ್ನು ಮತ್ತು ಒಳ್ಳೆಯ ನಾಗರಿಕ ಸಮಾಜವನ್ನು ಬಯಸುವ ಎಲ್ಲ ಪ್ರಜಾಪ್ರಭುತ್ವವಾದಿಗಳು ಭಾರತದ ರಾಷ್ಟ್ರ-ಪ್ರಭುತ್ವದ ಕರಾಳ ಸ್ವರೂಪವನ್ನು ಮತ್ತು ಅದು ಬಿತ್ತುತ್ತಿರುವ ಆರ್ಥಿಕ ಪ್ರಜ್ಞೆಯನ್ನು ಅರಿತು ಆಶಿಶ್ ನಂದಿಯವರ ವ್ಯಾಖ್ಯಾನದ ವ್ಯಾಪ್ತಿಯನ್ನು ಗ್ರಹಿಸಬೇಕು. ಯಾವ ರೀತಿಯಲ್ಲೂ ಆಶಿಷ್ ನಂದಿ ಮನುವಾದಿಯಾಗಿ, ಪುರೋಹಿತಶಾಹಿಯ ವಕ್ತಾರರಾಗಿ ಬದುಕಿಲ್ಲ, ಚಿಂತಿಸಿಲ್ಲ.

ಇಂದು ಎಲ್ಲ ಜಾತಿಗಳಲ್ಲಿ, ಸಮುದಾಯಗಳಲ್ಲಿ ಅನೇಕ ಬಗೆಯ ವಿರೋಧಾಭಾಸಗಳು ನೆಲೆಸಿರುವುದನ್ನು ಎಲ್ಲರೂ ಕಾಣಬಹುದು. ಈ ವಿರೋಧಾಭಾಸಗಳು ಅನೇಕ ರೀತಿಯ ದ್ವಂದ್ವಗಳನ್ನು, ವಿಪರ್ಯಾಸಗಳನ್ನು ಈ ಸಮುದಾಯಗಳಲ್ಲಿ ಸೃಷ್ಟಿಸುತ್ತಿದೆ. ಉದ್ಯೋಗ, ವಿದ್ಯಾಭ್ಯಾಸ, ಸಂಸ್ಕೃತಿ ಮತ್ತು ಕಲಿಕೆಯ ಭಾಷೆಯ ವಿಷಯದಲ್ಲಿ ಯಾವ ಸಮುದಾಯದಲ್ಲೂ ಒಂದು ನಿಲುವು ಮಾತ್ರ ಇಲ್ಲ. ಹೀಗಾಗಿಯೇ ಎಲ್ಲ ಚಳವಳಿಗಳೂ ಛಿದ್ರವಾಗಿರುವುದು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಬಳುವಳಿಗಳು ಇವು. ಅಂದರೆ, ಸರ್ವೋದಯದ ಸಮಾಜವಾದಿ ನೆಲೆ ನಶಿಸಿ ಹೋಗಿರುವ ಆಕ್ರಮಣಕಾರಿ ಸ್ಥಿತ್ಯಂತರದ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಭವಿಷ್ಯದ ಬಗ್ಗೆ ಆತಂಕ ಮಾತ್ರ ಇದೆ. ಈ ದ್ವಂದ್ವದ ಕಾಲದಲ್ಲಿ ಅಧಿಕಾರ ಮತ್ತು ಹಣ ಮಾತ್ರ ಪರಮ ಮೌಲ್ಯಗಳಾಗಿ ಎಲ್ಲರಿಗೂ ಕಾಣತೊಡಗುತ್ತವೆ.

ಅಧಿಕಾರ , ಹಣ ಇಲ್ಲದೆ ಬದುಕು ಸಾಧ್ಯವಿಲ್ಲವೆಂಬ ಮನಃಸ್ಥಿತಿ ಎಲ್ಲೆಡೆ ವ್ಯಾಪಿಸಿರುವ ಈ ಐತಿಹಾಸಿಕ ಘಟ್ಟದಲ್ಲಿ ಭ್ರಷ್ಟಾಚಾರವು ಜೀವನೋಪಾಯದ ಅಂಶವಾಗಿ ಬಿಡುತ್ತದೆ. ಒಂದರ್ಥದಲ್ಲಿ ಭ್ರಷ್ಟಾಚಾರ ಸಹಜವಾದ ಗುಣವಾಗಿ ಕಂಡು ಬದುಕಿನ ಅನಿವಾರ್ಯ ಸಂಗತಿಯಾಗಿಯೇ ಗೋಚರಿಸ ತೊಡಗುತ್ತದೆ. ಇಂತಹ ಸನ್ನಿವೇಶದಲ್ಲಿ ಶುದ್ಧ ರಾಜಕೀಯ ಎಂಬುದು ಹಾಸ್ಯಾಸ್ಪದ ವಿಷಯವಾಗುತ್ತದೆ. ಅದನ್ನು ನಂಬಿಕೊಂಡವರು ಪರಮ ಮೂರ್ಖರೆಂಬ ಸಿನಿಕತನದ ಪ್ರಜ್ಞೆಯು ಇಡೀ ಸಮುದಾಯವನ್ನು ಆವರಿಸುತ್ತದೆ.

ಈ ಘೋರ ಸನ್ನಿವೇಶದಲ್ಲೇ ನಾಗರಿಕ ಸಮಾಜದ ಒಳಿತನ್ನು ಬಯಸುವವರು ಭ್ರಷ್ಟಾಚಾರದ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಹೀಗೆ ಮಾತನಾಡುವವರನ್ನು ಅವರ ಜಾತಿ/ವರ್ಗಗಳ ಮೂಲಕ ನೋಡದೆ, ಅವರನ್ನು ಅನುಮಾನದ ನೆಲೆಯಲ್ಲಿ ನಿಲ್ಲಿಸದೆ, ಅವರ ಮಾತುಗಳನ್ನು, ವ್ಯಾಖ್ಯಾನಗಳನ್ನು ಎತ್ತರಿಸಿ ಅರ್ಥೈಸಿಕೊಳ್ಳುವ ಜವಾಬ್ದಾರಿ ಪ್ರಜಾಪ್ರಭುತ್ವವನ್ನು ಗೌರವಿಸುವವರ ಆದ್ಯ ಕರ್ತವ್ಯವಾಗುತ್ತದೆ.

ಅಂದರೆ, ಆಯಾ ಜಾತಿಗಳು, ಸಮುದಾಯಗಳು ತಮ್ಮಲ್ಲೇ ನೆಲೆಸಿರುವ ಭ್ರಷ್ಟಾಚಾರವನ್ನು ಯಾವುದೇ ಪೂರ್ವಗ್ರಹ, ಒತ್ತಡಗಳಿಗೆ ಸಿಕ್ಕಿಕೊಳ್ಳದೆ ಪರೀಕ್ಷಿಸಿಕೊಳ್ಳಬೇಕು. ಭ್ರಷ್ಟಾಚಾರದ ಬಗೆಗಿನ ವ್ಯಾಖ್ಯಾನಗಳು ಆತ್ಮವಿಮರ್ಶೆಯ ಸಂಗತಿಗಳೇ ಹೌದು.

ಈ ಆತ್ಮವಿಮರ್ಶೆ ಎಲ್ಲರ ಅತ್ಯಗತ್ಯ ಎಂದು ಮನಗಂಡಾಗ ನಾವು ಯಾರ ಕಾಳಜಿಯನ್ನೂ ಅನುಮಾನದಿಂದ ನೋಡುವುದಿಲ್ಲ. ಅಲ್ಲದೆ, ಮುಕ್ತವಾಗಿ, ಆತ್ಮವಿಮರ್ಶಾತ್ಮಕವಾಗಿ ಚಿಂತಿಸುವವರಿಗೆ ಕಳಂಕ ಹಚ್ಚುವುದಿಲ್ಲ. ಒಳ್ಳೆಯ ನಾಗರಿಕ ಸಮಾಜ ಬಯಸುವವರಿಗೆ ಇರುವ ಸತ್ಯದ ಮಾರ್ಗ ಇದೊಂದು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.